ಹುಬ್ಬಳ್ಳಿ: ಯಾವುದೇ ಕಾರಣಕ್ಕೂ ಯಾವುದೇ ಪಕ್ಷದ ಮೇಲೆ ಸಾಪ್ಟ್ ಕಾರ್ನರ್ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
.
ಉಪಚುನಾವಣೆಯಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಐದು ದಿನಗಳಿಂದ ಸಿಂಧಗಿಯಲ್ಲಿ ಪ್ರಚಾರದಲ್ಲಿ ಭಾಗವಹಿದ್ದಾಗ ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಈ ಹಿಂದೆ ದೇವೆಗೌಡರ ಆಡಳಿತ, ನನ್ನ ಆಡಳಿತ ಅವಧಿಯಲ್ಲಿ ಜನರಿಗೆ ಕೊಟ್ಟಿರುವ ನೀರಾವರಿ, ಸಾಲಮನ್ನಾ ಸೇರಿದಂತೆ ಇನ್ನಿತರ ಯೋಜನೆಗಳ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಜನರು ಸ್ಮರಿಸಿ ಮಾತನಾಡುತ್ತಿದ್ದಾರೆ. ಹಾಗಾಗಿ ಯಾವುದೇ ಸಂಶಯವಿಲ್ಲದೇ ಸಿಂಧಗಿಯಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದವರು ತಿಳಿಸಿದರು.
ಜೆಡಿಎಸ್ ಗೆ ಸಿದ್ದರಾಮಯ್ಯ ಅವರೇ ಟಾರ್ಗೆಟ್ ಆಗಿದ್ದಾರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ, ಕುಮಾರಸ್ವಾಮಿ ಅವರು ಇಲ್ಲದೇ ಹೋದರೆ ಕಾಂಗ್ರೆಸ್ ಗೆ ಜೆಡಿಎಸ್ ನಿಂದ ಯಾವುದೇ ಅಡೆತಡೆ ಇಲ್ಲ ಎಂಬ ಭಾವನೆ ಅವರಿಗೆ ಇರಬಹುದು. ಪದೇ ಪದೇ ನಮ್ಮ ಪಕ್ಷದ ಹೆಸರು, ನನ್ನ ಹೆಸರನ್ನು ಬಳಸಿ ನಿಮ್ಮ ವರ್ಚಸ್ಸು ಮತ್ತು ರಾಜಕೀಯ ಶಕ್ತಿಯನ್ನು ಕುಂದಿಸಿಕೊಳ್ಳುವ ಕೆಲಸ ಮಾಡಬೇಡಿ ಎಂದು ಹೇಳಿದರು.
ನಾನು ಯಾರ ಮೇಲೆ ವೈಯಕ್ತಿಕ ನಿಂದನೆ ಮಾಡಿಲ್ಲ. ಎಲ್ಲ ನಾಯಕರು ಹೇಳುವಂತದ್ದು ಚುನಾವಣೆ ಇರಬಹುದು, ಸಾರ್ವಜನಿಕವಾಗಿರಬಹುದು ನೀವು ಜನಪ್ರತಿನಿಧಿಗಳಾಗಿ ಸರ್ಕಾರ ನಡೆಸಬೇಕಾದರೇ ಏನೂ ಅಭಿವೃದ್ಧಿ ಕೆಲಸ ಮಾಡಿದ್ದೀರಿ ಅದರ ಬಗ್ಗೆ ಚರ್ಚೆ ನಡೆಸಬೇಕು. ವೈಯಕ್ತಿಕ ಚರ್ಚೆ ಮಾಡಿದರೇ ಒಬ್ಬರಿಗೊಬ್ಬರು ಕೆಸರು ಎರಚುವ ಕೆಲಸ ಮಾಡಬೇಕಾಗುತ್ತದೆ ಅದಕ್ಕೆ ಅಂತ್ಯ ಎಂಬುದೇ ಇರುವುದಿಲ್ಲ. ಜೆಡಿಎಸ್ ಬಿಜೆಪಿ ಬಿ ಟೀಮ್ ಅಲ್ಲ. ಹಾಗಿದ್ದರೇ ಈ ಹಿಂದೆ ಕಾಂಗ್ರೆಸ್ ನೊಂದಿಗೆ ಸರ್ಕಾರ ಮಾಡುತ್ತಾ ಇರಲಿಲ್ಲ ಎಂದರು.