ವಿಜಯಪುರ: ಜೆಡಿಎಸ್ ಬೆಳವಣಿಗೆಯನ್ನು ಸಹಿಸಲಾಗದೇ ಉಪ ಚುನಾವಣೆಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ನಾಯಕರು ಒಳಸಂಚು ಮಾಡಿ ನಮ್ಮ ಕುಟುಂಟ ಮತ್ತು ಜೆಡಿಎಸ್ ವಿರುದ್ಧ ದಾಳಿ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಹೆಚ್ ಡಿಕೆ ಅವರು ಮಂಗಳವಾರ ವಿಜಯಪುರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ತಮ್ಮ ವಿರುದ್ಧ ಟೀಕೆ ಟಿಪ್ಪಣಿ ಮಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಜಮೀರ್ ಅಹಮದ್ ಮೇಲೆ ವಾಗ್ದಾಳಿ ನಡೆಸಿರಲ್ಲದೆ ಸಿದ್ದರಾಮಯ್ಯ ನನ್ನ ಬಗ್ಗೆ ನೇರವಾಗಿ ಮಾತನಾಡಲಾಗದೇ ಇನ್ನೊಬ್ಬರ ಮೂಲಕ ಮಾತನಾಡಿಸುತ್ತಿದ್ದಾರೆಂದು ದೂರಿದರು.
ರಾಜ್ಯದಲ್ಲಿ ನಡೆದ ಆಪರೇಷನ್ ಕಮಲ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಹಾಗೂ ಜಾತ್ಯತೀತ ಶಕ್ತಿಗಳು ದುರ್ಬಲವಾಗಿ ಬಿಜೆಪಿ ಪುಟಿದೇಳಲು ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದರಲ್ಲದೆ ರಾಜ್ಯದಲ್ಲಿ ಬಿಜೆಪಿ ಈ ಪ್ರಮಾಣದಲ್ಲಿ ಬೆಳೆಯಲು ಸಿದ್ದರಾಮಯ್ಯ ಅವರೇ ಮೂಲ ಕಾರಣ ಎಂದು ಹೇಳಿದರು.
ಜತೆಗೆ ತಮ್ಮ ಬಗ್ಗೆ ಕೀಳಾಗಿ ಟೀಕಿಸಿರುವ ಜಮೀರ್ ಅಹಮದ್ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ ಡಿಕೆ, ಕೊಚ್ಚೆ ಮೇಲೆ ಕಲ್ಲು ಹಾಕಿ ಮೈಮೇಲೆ ಕೆಸರು ಹಾಕಿಕೊಳ್ಳಲಾರೆ ಎಂದು ಹೇಳಿದರು.
ಯಡಿಯೂರಪ್ಪ ಕೊಟ್ಟ ಸೂಟ್ʼಕೇಸ್ ಪಡೆದವರು ಯಾರು?
2008-13ರ ನಡುವಿನ ರಾಜಕೀಯ ಬೆಳವಣಿಗೆಗಳನ್ನು ಒಮ್ಮೆ ಮೆಲುಕು ಹಾಕಿ. ಆಪರೇಷನ್ ಕಮಲದ ಮೂಲಕ ತೆರವಾದ ಇಪ್ಪತ್ತು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಾಗ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಒಳಸಂಚು ರೂಪಿಸಿದ್ದರು. ಆಗ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಹಿನ್ನಡೆಯಾಗಿ ಎಲ್ಲಡೆ ಬಿಜೆಪಿಯೇ ಗೆದ್ದಿತ್ತು ಎಂದು ಹೆಚ್‌ಡಿಕೆ ಹೇಳಿದರು.
ತಮ್ಮ ಆತ್ಮೀಯ ಸ್ನೇಹಿತರೊಬ್ಬರನ್ನು ಯಡಿಯೂರಪ್ಪ ಅವರ ಬಳಿಗೆ ಕಳಿಸಿ ಎಷ್ಟು ಕೋಟಿ ಪಡೆದುಕೊಂಡರು ಸಿದ್ದರಾಮಯ್ಯ ಎಂಬುದು ಗೊತ್ತಿದೆ. ನನ್ನ ಬಗ್ಗೆ ಸೂಟ್ʼಕೇಸ್ ಆರೋಪ ಮಾಡಿಸುತ್ತಾರಲ್ಲಾ? ಇಪ್ಪತ್ತು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎಷ್ಟು ಕಡೆ ಗೆದ್ದಿತು ಆಗ? ಆಗ ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಬಹಳ ದೊಡ್ಡದು. ಯಡಿಯೂರಪ್ಪ ಅವರಿಂದ ಅವರು ಕೋಟ್ಯಂತರ ರೂಪಾಯಿ ಪಡೆದರು. ಯಾರು ಯಡಿಯೂರಪ್ಪ ಅವರ ಬಳಿ ಹೋಗಿ ಹಣ ತೆಗೆದುಕೊಂಡು ಬಂದರೋ ಅವರೇ ನನ್ನ ಬಳಿ ಈ ವಿಷಯವನ್ನು ಹತ್ತಾರು ಸಲ ಹೇಳಿದ್ದಾರೆ. ಎಷ್ಟು ಹಣ ತಂದಿವೀ ಅಂತ ಕೂಡ ಹೇಳಿದ್ದಾರೆ. ನಾನು ಜಾತ್ಯತೀತ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ನಿಜವಾದ ಜಾತ್ಯತೀತ ಬಣ್ಣ ಇದು ಎಂದು ಕುಮಾರಸ್ವಾಮಿ ಅವರು ತೀವ್ರ ವಾಕ್ ಪ್ರಹಾರ ನಡೆಸಿದರು.
2013ರಲ್ಲಿ ಕೇವಲ 40 ಸೀಟು ಪಡೆದಿದ್ದ ಬಿಜೆಪಿ ಅದೇ 2018ರಲ್ಲಿ 105 ಸೀಟು ಪಡೆಯಲು ಸಾಧ್ಯವಾಗಿದ್ದು ಹೇಗೆ? ಅದಾದ ಮೇಲೆ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸಿದ್ದು ಯಾರು? ಭೈರತಿ ಬಸವರಾಜು, ಮುನಿರತ್ನ, ಸೋಮಶೇಖರ್ ಅವರಂಥ ನಿಷ್ಠರು ಬಿಜೆಪಿಗೆ ಹೋಗಿದ್ದು ಯಾಕೆ? ಅಂದಿನ ಸಚಿವ ಜಾರ್ಜ್ ಮತ್ತು ಭೈರತಿ ಬಸವರಾಜ್ ನಡುವಿನ ಗಲಾಟೆಯನ್ನು ಸಿಎಲ್ʼಪಿ ನಾಯಕರಾಗಿಯೂ ಸರಿ ಮಾಡಲಿಲ್ಲ ಯಾಕೆ? ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಗೆ ಉಂಟಾದ ಅಸಮಾಧಾನವನ್ನು ಶಮನ ಮಾಡಲಿಲ್ಲ, ಕಾರಣವೇನು? ಎಂದು ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಮೇಲೆ ಗುಡುಗಿದರು.
ಮತ್ತೊಬ್ಬರಿಂದ ಮಾತನಾಡಿಸುತ್ತಿದ್ದಾರೆ
ಕಾರ್ಯಾಗಾರ ಆದ ಮೇಲೆ ಜೆಡಿಎಸ್ ಪಕ್ಷವು ಜನರಿಗೆ ಹತ್ತಿರವಾಗುತ್ತಿದೆ ಮಾತ್ರವಲ್ಲದೆ, ಉಪ ಚುಣಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಇದನ್ನು ಸಹಿಸಿಕೊಳ್ಳುವುದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ. ಈ ಕಾರಣಕ್ಕೆ ನಮ್ಮ ಮೇಲೆ ಸೂಟ್ʼಕೇಸ್ ಆರೋಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.
ಜಮೀರ್ ನೀಡಿರುವ ಹೇಳಿಕೆಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ ಎನ್ನುತ್ತಲೇ; ಕೊಚ್ಚೆ ಮೇಲೆ ಕಲ್ಲು ಹಾಕಲಾರೆ ಎಂದರು ಕುಮಾರಸ್ವಾಮಿ, ಅವರು ನನ್ನ ಬಳಿ ಆಡಿಯೋ ಇದೆ ಎಂದು ಹೇಳಿದ್ದಾರಲ್ಲ, ಅದನ್ನು ಹೊರಗೆ ಬಿಡಲಿ. ಯಾವ ಯಾವ ಆಡಿಯೋಗಳು ಇವೆ ಎಂಬುದನ್ನು ಬಹಿರಂಗ ಮಾಡಲಿ ಎಂದು ಜಮೀರ್ ಅಹಮದ್ʼಗೆ ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಹೌದು. ನಾನು ಕಸ ತೆಗೆಸುತ್ತಿದ್ದೆ. ಓದುವಾಗಲೇ ಈ ಕೆಲಸ ಮಾಡುತ್ತಿದ್ದೆ. ಇದರಲ್ಲಿ ಅವಮಾನ ಏನಿದೆ? ಆಮೇಲೆ ನಮ್ಮ ತಂದೆಯವರು ಬೇಡವೆಂದರು. ಆ ಕೆಲಸವನ್ನು ಅಲ್ಲಿಗೇ ಬಿಟ್ಟೆ. ಆಮೇಲೆ ಓದು ಮುಗಿದ ಮೇಲೆ ಸಿನಿಮಾ ಹಂಚಿಕೆದಾರನಾದೆ. ನಾನು ನನ್ನ ಸ್ವಂತ ದುಡಿಮೆಯಿಂದ ಮೇಲೆ ಬಂದಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.