ಪುನೀತ್ ನಿಧನ: ಚಾಮರಾಜನಗರ ಸ್ವಯಂ ಪ್ರೇರಿತ ‘ಬಂದ್’

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಗಡಿನಾಡ ಹುಡುಗ, ಯುವರತ್ನ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಗಡಿ ಜಿಲ್ಲೆ ಸ್ತಬ್ದವಾಗಿದೆ.

ಕಳೆದ ರಾತ್ರಿಯಿಂದ ಅಪ್ಪು ಅಭಿಮಾನಿಗಳು ಸ್ವಯಂಪ್ರೇರಿತ ಬಂದ್ ಆಚರಿಸುವಂತೆ ಆಟೋಗಳಲ್ಲಿ ಪ್ರಚಾರ ಮಾಡಿದ್ದರಿಂದ ಶನಿವಾರ ಮುಂಜಾನೆಯಿಂದಲೆ ಅಂಗಡಿ ಮುಗ್ಗಟ್ಟು ಬಾಗಿಲು ಹಾಕಿ ಸಂತಾಪ ಸೂಚಿಸಲಾಗಿದೆ.

ಚಿತ್ರಮಂದಿರಗಳು ಎಲ್ಲ ಪ್ರದರ್ಶನ ರದ್ದುಗೊಳಿಸಿದೆ. ನಗರದಾದ್ಯಂತ ಅಲ್ಲಲ್ಲಿ ಶ್ರದ್ದಾಂಜಲಿ ಸಭೆಗಳು ನಡೆದು ಸಾರ್ವಜನಿಕರು, ಅಭಿಮಾನಿಗಳು ಅಪ್ಪುಗೆ ಸಂತಾಪ ಸೂಚಿಸುತ್ತಿದ್ದಾರೆ.

ಅಪ್ಪು ಅಭಿಮಾನಿಗಳು ಪುನೀತ್ ಅವರ ಭಾವಚಿತ್ರ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾ ಲಿ ಮಾಡಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರಾತ್ರಿ ಮೊಂಬತ್ತಿ ಮೆರವಣಿಗೆ ಮಾಡಿ ಸಂತಾಪ ಸೂಚಿಸಲಾಯಿತು.

ರಾಜ್ ಕುಟುಂಬಕ್ಕೆ ಗಡಿ ಜಿಲ್ಲೆ, ಕಲೆಗಳ ತವರೂರು ಚಾಮರಾಜನಗರ ನಂಟು ಅಪಾರ. ಪುನೀತ್ ಅವರ ಅಗಲಿಕೆ ತುಂಬಲಾರದ ನಷ್ಟ ಒಂದೆಡೆಯಾದರೆ ಪುನೀತ್ ಚಾಮರಾಜನಗರ ರಾಯಬಾರಿಯಾಗಿದ್ದರು. ಇವರ ಅಕಾಲಿಕ ಮರಣ ಕೂಡ ಚಾಮರಾಜನಗರ ಜಿಲ್ಲೆಗೆ ತುಂಬಲಾರದ ನಷ್ಟ ಅನುಭವಿಸುವಂತಾಗಿದೆ ಎಂದರೆ ತಪ್ಪಾಗಲಾರದು.