ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡವನ್ನು ಹೆಚ್ಚಾಗಿ ಬೆಳೆಸುವ ಕಡೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ ವತಿಯಿಂದ ನಡೆದ ೬೬ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಕನ್ನಡವನ್ನು ಪ್ರೀತಿಸುವುದರೊಂದಿಗೆ ಅನ್ಯಭಾಷೆಗಳನ್ನೂ ಕಲಿಯಬೇಕು. ಆದರೆ ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು. ಯುವಜನರಲ್ಲಿ ಹೆಚ್ಚಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡವನ್ನು ಬೆಳೆಸುವ ಕೆಲಸವನ್ನು ಮಾಡಬೇಕು. ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ‘ಕನ್ನಡಕ್ಕಾಗಿ ನಾವು’ ಅಭಿಯಾನ ಆರಂಭಿಸಿದ್ದಾರೆ. ಕನ್ನಡದ ಗೀತೆ ಗಾಯನ, ಕನ್ನಡ ಬಳಕೆ ಮೊದಲಾದ ಕಾರ್ಯಕ್ರಮ ನಡೆದಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವೂ ಕರ್ನಾಟಕ ಐದು ಪ್ರಾಂತ್ಯಗಳಾಗಿ ಹಂಚಿಹೋಗಿತ್ತು. ಅನೇಕ ಮಹನೀಯರ ಹೋರಾಟದ ಫಲವಾಗಿ ೧೯೫೬, ನವೆಂಬರ್ ೧ ರಂದು ಮೈಸೂರು ರಾಜ್ಯವಾಗಿ ಒಂದಾಯಿತು. ನಂತರ ಕರ್ನಾಟಕ ಉದಯವಾಯಿತು. ಕಳೆದ ಸಾಲಿನಲ್ಲಿ ೧೬ ಲಕ್ಷ ಕೋಟಿ ರೂ. ಜಿಎಸ್‍ಡಿಪಿಯನ್ನು ರಾಜ್ಯ ಹೊಂದಿದ್ದು, ಇಡೀ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದೇವೆ. ಕಾಫಿಯನ್ನು ಅತಿ ಹೆಚ್ಚು ಬೆಳೆಸಿದ್ದು, ಶೇ.೪೦ ರಫ್ತು ರಾಜ್ಯದಿಂದಾಗುತ್ತಿದೆ. ಪ್ರಾಕೃತಿಕ ಸಂಪನ್ಮೂಲ, ಐತಿಹಾಸಿಕ ತಾಣ, ಉದ್ದದ ಕರಾವಳಿ ತೀರ, ಸರೋವರ, ದೀರ್ಘ ಐತಿಹಾಸಿಕ ಹಿನ್ನೆಲೆ ರಾಜ್ಯಕ್ಕಿದೆ. ಜಗತ್ತಿನ ಅನೇಕ ಕಡೆಗಳಿಂದ ಉದ್ಯೋಗಕ್ಕಾಗಿ ಬಂದ ಜನರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ವಿಶಿಷ್ಟ ಆಹಾರ ಪದ್ಧತಿ ಇದೆ. ಭಾಷಾ ವೈವಿಧ್ಯವೂ ಇಲ್ಲಿದೆ. ಎಲ್ಲಾ ಬಹುವೈವಿಧ್ಯಗಳನ್ನು ರಾಜ್ಯದಲ್ಲಿ ಕಾಣಬಹುದು ಎಂದರು.
ಜನರು ಕ್ಷಮಿಸುತ್ತಾರಾ?
ಜಿಲ್ಲಾ ಸಹಕಾರಿ ಬ್ಯಾಂಕ್ ಹಾಗೂ ಕೋಚಿಮುಲ್ ಅನ್ನು ಶೀಘ್ರ ಪ್ರತ್ಯೇಕ ಮಾಡಲು ಕ್ರಮ ವಹಿಸಲಾಗುವುದು. ಇದನ್ನು ವಿರೋಧಿಸುವವರನ್ನು, ಜಿಲ್ಲೆಗೆ ಅನ್ಯಾಯ ಮಾಡುವವರನ್ನು ಜಿಲ್ಲೆಯ ಪ್ರತಿನಿಧಿಗಳು ಎಂದು ಹೇಳಲು ಸಾಧ್ಯವಿಲ್ಲ. ಕ್ಷೇತ್ರದ ಜನರು ಕ್ಷಮಿಸುತ್ತಾರಾ ಎಂಬುದನ್ನು ಅವರು ಪ್ರಶ್ನೆ ಮಾಡಿಕೊಳ್ಳಲಿ ಎಂದರು.
ಮಾರ್ಗಸೂಚಿ
ಜಿಮ್ ನಿಂದ ಸಮಸ್ಯೆಯಾಗುತ್ತದೆ ಎಂಬ ತಪ್ಪು ಎಂಬ ಭಾವನೆ ಬೇಡ. ಜಿಮ್, ಯೋಗ, ಕ್ರೀಡೆಯಿಂದ ಯಾವುದೇ ಅಪಾಯ ಇಲ್ಲ. ಕೆಲವರಲ್ಲಿ ಮಾತ್ರ ಏಕೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಅಧ್ಯಯನ ಮಾಡಲಾಗುತ್ತಿದೆ ಎಂದವರು ಹೇಳಿದರು.
ಕೆಲವರು ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ನಂತರ ಜಿಮ್ ಮಾಡಬೇಕಾಗುತ್ತದೆ. ಜಿಮ್ ನಿಂದಲೇ ಹೃದಯ ತೊಂದರೆ ಬರುತ್ತದೆ ಎಂಬುದು ಸುಳ್ಳು. ಕೆಲವರಿಗೆ ಅನುವಂಶೀಯವಾಗಿ ಹೃದಯ ಸಮಸ್ಯೆ ಇರುತ್ತದೆ. ಅಂತಹವರು ಎಚ್ಚರದಿಂದ ಇರಬೇಕು. ಜಿಮ್, ಯೋಗ ಕೇಂದ್ರದಲ್ಲಿ ಸಮಸ್ಯೆಯಾದರೆ ಸಿಪಿಆರ್ ಮೊದಲಾದ ತುರ್ತು ಚಿಕಿತ್ಸೆ ವ್ಯವಸ್ಥೆ ಲಭ್ಯವಿರಬೇಕಾಗುತ್ತದೆ. ಇದಕ್ಕಾಗಿ ಮಾರ್ಗಸೂಚಿ ರೂಪಿಸುತ್ತಿದ್ದು, ಇನ್ನೂ ಪ್ರಾಥಮಿಕ ಹಂತದಲ್ಲಿದೆ. ನಾನು ಕೂಡ ೨೦ ವರ್ಷದಿಂದ ಜಿಮ್ ಗೆ ಹೋಗುತ್ತಿದ್ದೇನೆ. ಆದರೆ ವಯಸ್ಸು, ಆರೋಗ್ಯದ ಆಧಾರವಾಗಿ ವ್ಯಾಯಾಮ ಮಾಡಬೇಕಾಗುತ್ತದೆ ಎಂದರು.
ನಟ ಪುನೀತ್ ಅವರಿಗೆ ಹೀಗೆ ಆಗಿರುವುದರಿಂದ ಜನರು ಭಯ ಪಟ್ಟುಕೊಳ್ಳುತ್ತಿದ್ದಾರೆ. ಆದರೆ ಈ ರೀತಿಯ ಆತಂಕ ಬೇಡ. ಈ ಬಗ್ಗೆ ಹೃದಯ ತಜ್ಞರ ಜೊತೆ ಚರ್ಚಿಸಿ ನಿರ್ದಿಷ್ಟ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.