ಶ್ವಾನ ಬೊಗಳಿದರೇನಾಯ್ತು?; ಎಂಇಎಸ್‍ ಗೆ ಬುದ್ಧಿ ಕಲಿಸುತ್ತೇವೆ -ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ಆನೆ ಹೋಗುವಾಗ ಶ್ವಾನ ಬೊಗಳಿದರೇ ಎನೂ ಆಗಲ್ಲ. ಸಿಟ್ಟನ್ನು ಸಿಟ್ಟಿನಿಂದ ಶಮನ ಮಾಡಲು ಆಗಲ್ಲ. ಪ್ರೀತಿ, ವಿಶ್ವಾಸದಿಂದ ಎಲ್ಲರನ್ನೂ ಒಟ್ಟಾಗಿ ಸರ್ಕಾರ ತೆಗೆದುಕೊಂಡು ಹೋಗಲಿದೆ. ಮುಂದಿನ ದಿನಗಳಲ್ಲಿ ಎಂಇಎಸ್‍ ಗೆ ಬುದ್ಧಿ ಕಲಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು.

ಎಂಇಎಸ್ ಪದೇ ಪದೇ ಗಡಿ ವಿಚಾರ ಕೆದಕುತ್ತಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸಚಿವ ಗೋವಿಂದ ಕಾರಜೋಳ ಅವರು, ಪ್ರತಿ 50 ಕಿ.ಮೀ.ಗೆ ಭಾಷೆ ಬದಲಾವಣೆ ಆಗುತ್ತದೆ. ಅದನ್ನು ನೆಪವಾಗಿ ಇಟ್ಟುಕೊಂಡು ಹೋರಾಟ ಮಾಡಬಾರದು. ನಾವು ಪಾಕಿಸ್ತಾನ ದೇಶದ ಜತೆಗೆ ಕಚ್ಚಾಡಿದ ಹಾಗೇ ಕರ್ನಾಟಕ, ಮಹಾರಾಷ್ಟ್ರ ಈ ರೀತಿ ಹೋರಾಟ ಇರಬಾರದು. ಪ್ರಾದೇಶಿಕ ಭಾಷೆ ಇಂದು, ನಿನ್ನೆಯದಲ್ಲ 2 ವರ್ಷದಿಂದ ಇದೆ. ಈಗ ಬೆಳಗಾವಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮಾತೃ ಭಾಷೆ ಮನೆಯಲ್ಲಿ ಇರಲಿ, ಹೊರಗೆ ಶಿಕ್ಷಣ ಮತ್ತು ವ್ಯವಹಾರದಲ್ಲಿ ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ಕರೆ ನೀಡಿದರು.

ಎಂಇಎಸ್ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಕೆಲವು ಕಿಡಿಗೇಡಿಗಳು ತಾವು ಜೀವಂತಾಗಿ ಇರುತ್ತೇವೆ ಎಂದು ತಮ್ಮ ಅಸ್ತಿತ್ವವನ್ನು ತೋರಿಸಲು ಇಂತಹ ಉಪದ್ಯಪಿ ಮಾಡುತ್ತಾರೆ. ಅಂತವರಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಆನೆ ಹೋಗುವಾಗ ಶ್ವಾನ ಬೊಗಳಿದರೆ ಏನೂ ಆಗೋದಿಲ್ಲ ಎಂದು ಲೇವಡಿ ಮಾಡಿದರು.

ಇನ್ನು ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಬೆಳಗಾವಿ ಜಿಲ್ಲೆಗೆ ಅನ್ಯಾಯ ವಿಚಾರಕ್ಕೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಈ ವರ್ಷ ನನಗೂ ಸಮಾಧಾನ ಇಲ್ಲ. ಕನಿಷ್ಠ ಮೂರು ಪ್ರಶಸ್ತಿ ಆದರೂ ಜಿಲ್ಲೆಗೆ ಸಿಗಬೇಕಿತ್ತು. ಮುಂದಿನ ವರ್ಷ ಇದನ್ನು ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಒಟ್ಟಿನಲ್ಲಿ ಮನೆಯಲ್ಲಿ ನೀವು ಯಾವ ಭಾಷೆ ಬೇಕಾದರೂ ಮಾತನಾಡಿ ಆದರೆ ಹೊರಗೆ ಮಾತ್ರ ಕಡ್ಡಾಯವಾಗಿ ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.