ಮಂಡ್ಯ: ನಮ್ಮ ಮಂಡ್ಯ ಜಿಲ್ಲೆಯ ಜನರೆಲ್ಲರೂ ಕನ್ನಡವನ್ನೇ ಮಾತನಾಡುತ್ತಾರೆ. ಬೇರೆ ಯಾವುದೇ ಭಾಷೆಯ ಹಾವಳಿ ನಮ್ಮ ಜಿಲ್ಲೆಯಲ್ಲಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು, ಸರ್. ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇದು ನಮ್ಮ ಜಿಲ್ಲೆ ಕನ್ನಡಕ್ಕೆ ನೀಡಿದ ದೊಡ್ಡ ಕೊಡುಗೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದರು.
ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ನಮ್ಮ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದ್ದು, ಕಾಮಗಾರಿ ತೀವ್ರಗತಿಯಲ್ಲಿ ಸಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2,63,433 ರೈತ ಫಲಾನುಭವಿಗಳಿಗೆ ಒಟ್ಟು ರೂ. 394 ಕೋಟಿ ಸಹಾಯಧನ ಪಾವತಿಸಲಾಗಿದೆ. ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 19,511 ರೈತರಿಗೆ ವಿವಿಧ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ ಎಂದು ಸಚಿವರು ಹೇಳಿದರು.
ನಮ್ಮ ಸರ್ಕಾರ ಕನ್ನಡದ ನೆಲ, ಜಲ, ಭಾಷೆಗೆ ಎಲ್ಲ ರೀತಿಯಲ್ಲು ಹೆಗಲು ಕೊಟ್ಟಿದೆ. ಮುಂದೆಯೂ ಕೊಡುತ್ತದೆ. ಕನ್ನಡ ನಮ್ಮ ಬದುಕು ಹಾಗೂ ಉಸಿರು. ಇದನ್ನು ಉಳಿಸೋಣ ಬೆಳೆಸೋಣ ಎಂದು ಸಚಿವ ಡಾ.ನಾರಾಯಣಗೌಡ ಅವರು ಕರೆ ನೀಡಿದರು.
ಇದೆ ವೇಳೆ ಕನ್ನಡ ರಾಜ್ಯೋತ್ಸವದ ರಾಜ್ಯ ಪ್ರಶಸ್ತಿಗೆ ಭಾಜನರಾದ ಮಂಡ್ಯ ಜಿಲ್ಲೆಯ ಡಾ. ರಾಮಕೃಷ್ಣೆಗೌಡ ಅವರಿಗೆ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದಿಸಿ, ಸನ್ಮಾನಿಸಿದರು.
ಮಂಡ್ಯ ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ನಗರಸಭೆ ಅಧ್ಯಕ್ಷ ಮಂಜು, ಜಿಲ್ಲಾಧಿಕಾರಿ ಅಶ್ವಥಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.