ಬಿಡದಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಧರ್ಮಪತ್ನಿ ಮತ್ತು ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ಬಿಡದಿಯ ತೋಟದಲ್ಲಿ ಶುಕ್ರವಾರ ಗೋಪೂಜೆ ನೆರವೇರಿಸಿದರು.
ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲ ಪಾಡ್ಯಮಿಯಂದು ಶ್ರೀಕೃಷ್ಣ ಪರಮಾತ್ಮನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋ ಸಮೂಹವನ್ನು ರಕ್ಷಿಸಲು ಗೋಪಾಲನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಇಂದು ಗೋ ಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಬೆಳಕಿನ ಹಬ್ಬ ದೀಪಾವಳಿ ವೇಳೆ ಗೋವಿನ ಪೂಜೆಗೆ ವಿಶೇಷ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಬಿಡದಿಯ ನನ್ನ ತೋಟದಲ್ಲಿ ಗೋ ಪೂಜೆಯನ್ನು ನೆರವೇರಿಸಲಾಯಿತು ಎಂದು ಅವರು ತಿಳಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸುಡುವ ಸಮಯದಲ್ಲಿ ಕೆಲವರು ದೃಷ್ಟಿಗೆ ಹಾನಿ ಮಾಡಿಕೊಂಡಿರುವ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾರೂ ಕೂಡ ಈ ಎಚ್ಚರ ತಪ್ಪಬಾರದು. ಮಕ್ಕಳ ಬಗ್ಗೆ ಪೋಷಕರು ಗಮನ ಇಟ್ಟಿರಬೇಕು. ಇನ್ನೂ ಮಕ್ಕಳಿಗೆ ಕೋರೋನ ಲಸಿಕೆ ಬಂದಿಲ್ಲ ಎನ್ನುವುದನ್ನು ಮರೆಯಬಾರದು ಎಂದು ಹೆಚ್ ಡಿಕೆ ಅವರು ಹೇಳಿದರು.