ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ –ಮಾಜಿ ಸಿಎಂ ಸಿದ್ದರಾಮಯ್ಯ

ಮಂಡ್ಯ: ಮತ್ತೆ ನಮ್ಮ ಸರ್ಕಾರವೇ ಬರುವ ವಾತಾವರಣ ಶುರುವಾಗ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮಂಡ್ಯದ ಕನಕ ಭವನದ ಆವರಣಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯ ಹಾಗೂ ಅತಿಥಿ ಗೃಹ ಉದ್ಘಾಟನೆ ನೆರವೇರಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು.

ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಬಡವರ ಪರ ಯೋಜನೆ ಬೇಕು ಅಂದ್ರೆ. ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಕೇವಲ ಘೋಷಣೆ ಕೂಗಿದರೆ ಸಾಲದು. ಕಾಂಗ್ರೆಸ್ ಗೆ ವೋಟ್ ಮಾಡಿ, ಗೆಲ್ಲಿಸಬೇಕು ಎಂದರು.

ಮತ್ತೆ ನಮ್ಮದೇ ಸರ್ಕಾರ ಬರುತ್ತೋ? ಇಲ್ವೋ? ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯವರು ಸಭಿಕರ ಮುಂದೆ ಇಟ್ಟಾಗ
ಹೌದೋ ಹುಲಿಯಾ ಎಂಬ ಉತ್ತರ ಬಂತು.

ಬಿಜೆಪಿಯವರಂತಹ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ. ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೇಳಿದವರ ಪಕ್ಷಕ್ಕೆ ಹಲವರು ಹೋಗ್ತಿದ್ದಾರೆ ಎಂದು ನಾನು ಭಾಷಣ ಮಾಡಿದ್ದೆ ಆದರೆ ಬಿಜೆಪಿಯವರು ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ. ಇದನ್ನೇ ಕೆಟ್ಟದ್ದಾಗಿ ಹೇಳಿಕೊಂಡು ನನ್ನ ವಿರುದ್ಧ ಹೋರಾಟ ಮಾಡಿದ್ದಾರೆ. ಹೀಗಾಗಿ ನೀವು ಅವರ ಬಗ್ಗೆ ಹುಷಾರಾಗಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನನ್ನ ಪ್ರತಿಕೃತಿ ಸುಟ್ಟ ತಕ್ಷಣ ನಾನು ಸುಟ್ಟೋಗಲ್ಲ ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟೋಗಲ್ಲ. ಎಲ್ಲರೂ ಸಮಾನವಾಗಿರಬೇಕು. ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು. ಮನುಷ್ಯರಾಗಿ, ಸಮಾನರಾಗಿ ಬದುಕುವಂತಾಗಬೇಕು ಎಂದರು.

ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಏನು ಕೊಟ್ಟ ಅಂತಾರೆ. ಒಂದು ಜಾತಿಯಲ್ಲಿ ಮಾತ್ರ ಬಡವ, ಶ್ರೀಮಂತ ಇಲ್ಲ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಮುಖ್ಯಮಂತ್ರಿಯಾಗಿ ಒಂದು ಸಮಾಜದ ಅಭಿವೃದ್ಧಿ ಬಯಸಲು ಸಾಧ್ಯವೇ ? ಹೀಗಾಗಿ ಎಲ್ಲಾ ಜಾತಿಯ ಬಡವರ ಅಭಿವೃದ್ಧಿ ಆಗಬೇಕು. ನಾನು ಕೊಟ್ಟ ಯೋಜನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ. ಅವಕಾಶದಿಂದ ವಂಚಿತರಾದವರ ಪರ ನಾನು ಕೆಲಸ ಮಾಡಿದ್ದೇನೆಂದು ಸಿದ್ದರಾಮಯ್ಯ ತಿಳಿಸಿದರು.