ನಕ್ಸಲ್ ನಾಯಕ ಕೃಷ್ಣ ಮೂರ್ತಿ ಹಾಗೂ ಸಾವಿತ್ರಿ ಬಂಧನ

ಚಾಮರಾಜನಗರ, ತಿರುವನಂತಪುರಂ: ಕರ್ನಾಟಕದ ನಕ್ಸಲ್ ನಾಯಕ ಕೃಷ್ಣಮೂರ್ತಿ ಹಾಗೂ ಸಾವಿತ್ರಿಯನ್ನು ಕೇರಳ ಭಯೋತ್ಪಾದನಾ ನಿಗ್ರಹ ಪಡೆ(ATS) ಬುಧವಾರ ಕೇರಳದಲ್ಲಿ ಬಂಧಿಸಿದೆ. ಅಲ್ಲದೇ ಅವರನ್ನು ಡಿ.9ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕೇರಳದ ಸುಲ್ತಾನ್ ಬತ್ತೇರಿ ವ್ಯಾಪ್ತಿಯಲ್ಲಿ ಇವರು ಅಡಗಿದ್ದ ಮಾಹಿತಿ ಪಡೆದ ಕೇರಳ ನಕ್ಸಲ್​ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಳಿಕ ಅವರನ್ನು ಭಾರೀ ಪೊಲೀಸ್ ಬಂದೋಬಸ್ತ್​ನಲ್ಲಿ ಅಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಈ ವೇಳೆ ಮಾವೋವಾದಿ ಕೃಷ್ಣಮೂರ್ತಿ ಬಂಡವಾಳಶಾಹಿ ತೊಲಗಲಿ, ಮಾವೋವಾದಕ್ಕೆ ಜಯವಾಗಲಿ, ನಮಗೇ ಜಯ, ಬಂಡವಾಳಶಾಹಿಗಳಿಗೆ ಧಿಕ್ಕಾರ” ಎಂಬ ಜಯಘೋಷಗಳನ್ನು ಕೂಗಿದ್ದಾರೆ.

ಕೃಷ್ಣಮೂರ್ತಿ ಕರ್ನಾಟಕದ ನಕ್ಸಲ್ ನಾಯಕನಾಗಿದ್ದು, ಈತ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಭುವನಹೂಡ್ಲು ಗ್ರಾಮದವನು‌. ಆರಂಭದಲ್ಲಿ ಈತ ಪಶ್ಚಿಮಘಟ್ಟ ಉಳಿಸಿ, ಕುದುರೆಮುಖ ಉಳಿಸಿ ಹೋರಾಟಗಳ ಮೂಲಕ ಬೆಳೆದು ನಕ್ಸಲ್ ವಲಯದಲ್ಲಿ ಕಾಣಿಸಿಕೊಂಡಿದ್ದ. ಸಹ ಹೋರಾಟಗಾರ್ತಿ ಪ್ರಭಾ ಎಂಬಾಕೆಯನ್ನು ವಿವಾಹವಾಗಿದ್ದ ಈತ, ನಕ್ಸಲ್ ಹೋರಾಟ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗೆ ಕಡಿವಾಣ ಬಿದ್ದ ಹಿನ್ನೆಲೆಯಲ್ಲಿ ಕೇರಳಕ್ಕೆ ಪಲಾಯನ ಮಾಡಿ ಅಲ್ಲಿ ಚಳವಳಿಯನ್ನು ರೂಪಿಸುತ್ತಿದ್ದರು. ಈತನ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ‌.
ಸಾವಿತ್ರಿ ಕೂಡ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವಳಾಗಿದ್ದಾರೆ. ಕಬನಿದಳಂ ಎಂಬ ನಕ್ಸಲ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಇಬ್ಬರನ್ನೂ ಡಿ.9 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.