ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಮಾದಪ್ಪನ ಸನ್ನಿಧಿ ಶೀತದಿಂದ ಕೂಡಿದ್ದು, ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮಹದೇಶ್ವರ ಬೆಟ್ಟದಲ್ಲಿ ಭೂ ಕುಸಿತವಾಗಿ ದೊಡ್ಡ ಗಾತ್ರದ ಎರಡು ಬಂಡೆಗಳು ರಸ್ತೆ ಮಧ್ಯೆ ಉರುಳಿ ಬಿದ್ದಿದೆ.
ಮಹದೇಶ್ವರ ಬೆಟ್ಟದ ವಡ್ಗಲ್ ರಂಗನಾಥ ಸ್ವಾಮಿ ದೇವಸ್ಥಾನದ ಸಮೀಪ ಭೂ ಕುಸಿತವಾಗಿ ಭಾರೀ ಗಾತ್ರದ ಎರಡು ಬಂಡೆಗಳು ಉರುಳಿ ರಸ್ತೆ ಮಧ್ಯೆ ನಿಂತಿದೆ. ಆದರೆ ಬಂಡೆ ಉರುಳುವ ವೇಳೆ ಯಾವುದೇ ವಾಹಗಳ ಸಂಚಾರ ಇಲ್ಲದ ಕಾರಣ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ
ರಸ್ತೆ ಮಧ್ಯೆ ಬಂಡೆ ಬಿದ್ದಿರುವ ಕಾರಣ ವಾಹನ ಸಂಚಾರಕ್ಕೆ ಅಡಚಡಣೆ ಉಂಟಾಗಿದೆ. ಒಂದು ವೇಳೆ ಬಂಡೆ ಪಕ್ಕದಲ್ಲಿ ವಾಹನ ಹಾದು ಹೋಗುವಾಗ ಏನಾದರೂ ಅನಾಹುತ ಸಂಭವಿಸಿದರೆ ಏನು ಕಥೆ ಎಂದು ಭಕ್ತಾದಿಗಳಲ್ಲಿ ಆತಂಕ ಕಾಡಿದೆ.
ಮಹದೇಶ್ವರ ಬೆಟ್ಟದಲ್ಲಿ ಬಂಡೆ ಕುಸಿತವಾಗುತ್ತಿರುವುದು ಇದೇ ಮೊದಲಲ್ಲ. ಮಹದೇಶ್ವರ ಬೆಟ್ಟದಿಂದ ತಮಿಳುನಾಡಿನ ಪಾಲಾರ್ ಗೆ ಹೋಗುವ ರಸ್ತೆಯಲ್ಲಿ ಕೂಡ ಇದೇ ರೀತಿ ಭೂ ಕುಸಿತವಾಗಿ ಭತ್ತ ಕಟಾವು ಮಾಡುವ ಯಂತ್ರ ಪಲ್ಟಿ ಹೊಡೆದಿತ್ತು. ಆದರೆ ಯಾವುದೇ ಜೀವ ಹಾನಿಯಾಗಿರಲಿಲ್ಲ.ಈ ಕಾರಣದಿಂದ ಮಹದೇಶ್ವರ ಬೆಟ್ಟದ ರಸ್ತೆಗಳಲ್ಲಿ ಕಾರು, ಬಸ್ಸು, ಬೈಕು ಸೇರಿದಂತೆ ಇತರೆ ವಾಹನಗಳಲ್ಲಿ ಹೋಗಲು ಪ್ರಯಾಣಿಕರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಹನ ಹೋಗುವಾಗ ಭೂ ಕುಸಿತವಾದರೆ ಏನು ಮಾಡುವುದು ಎಂದು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವ ಸ್ಥಿತಿ ಉಂಟಾಗಿದೆ.