ಚಾಮರಾಜನಗರ: ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಚಾಮರಾಜನಗರ ಜಿಲ್ಲೆಯ ವಿವಿಧ ದೇವಾಲಯಗಳಿಗೆ ಮಂಗಳವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಸುಧಾಮೂರ್ತಿ ಭೇಟಿಯಿತ್ತು, ಪೂಜೆ ಸಲ್ಲಿಸಿ ದೇಗುಲದಲ್ಲಿರುವ ಪಾದುಕೆಗಳನ್ನು ತಲೆ ಮೇಲಿರಿಸಿಕೊಂಡು ಆಶೀರ್ವಾದ ಪಡೆದರು.
ದೇಗುಲದ ಪುರಾಣ ಇತಿಹಾಸದ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ದೇವಾಲಯ ಹಿಂಭಾಗದಲ್ಲಿನ ಕಮರಿಯ ಪ್ರಾಕೃತಿಕ ಸೌಂದರ್ಯವನ್ನು ಸವಿದರು.
ಇದೇ ವೇಳೆ, ದಾಸೋಹ ಭವನ ನಿರ್ಮಿಸಿಕೊಡುವಂತೆ ಅರ್ಚಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ನೂತನ ದಾಸೋಹ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಇದಾದ ನಂತರ, ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದಲ್ಲಿರುವ ಪಾರ್ವತಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದರು.
ಗುಂಡ್ಲು ನದಿ ಉಳಿಸುವ ಅಭಿಯಾನದ ಪ್ರಯುಕ್ತ ಗಿಡವನ್ನು ನೆಟ್ಟು ಬೆಂಬಲ ಸೂಚಿಸಿದರು.ನಂತರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದು ಅಂಬೆಗಾಲು ಕೃಷ್ಣನ ಮೂರ್ತಿಗೆ ಪೂಜೆ ಸಲ್ಲಿಸಿದರು.