ನಾನು ಪಕ್ಷಕ್ಕೆ ಮೋಸ ಮಾಡಲ್ಲ, ಎಲ್ಲಿಂದಲೋ ಬಂದು ಮಂಡ್ಯ ನಮ್ಮದೇ ಎನ್ನುವವರಿಗೆ ಮಣೆ ಹಾಕಬೇಡಿ -ಸಚಿವ ಎಸ್.ಟಿ.ಸೋಮಶೇಖರ್

ಮಂಡ್ಯ: ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ. ನಾನು ನನ್ನ ಸ್ವಂತ ಶಕ್ತಿಯಿಂದ ರಾಜಕೀಯ ಪ್ರವೇಶ ಮಾಡಿದೆ. 20-22 ವರ್ಷಗಳ ಕಾಲ ಎಲ್ಲಾ ಹಂತಗಳನ್ನು ಮುಗಿಸಿ ಈ ಹಂತಕ್ಕೆ ಬಂದಿದ್ದೇನೆ. ಯಡಿಯೂರಪ್ಪ ಅವರ ಆಶೀರ್ವಾದದಿಂದ ಸಹಕಾರ ಸಚಿವನಾಗಿದ್ದೇನೆ. ನಾನು ಪಕ್ಷಕ್ಕೆ ಮೋಸ ಮಾಡಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮಂಡ್ಯದಲ್ಲಿ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ನಮ್ಮ ಇಲಾಖೆಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನನ್ನ ಬಳಿ ಬಂದು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದಾಕ್ಷಣವೇ ಕೆಲಸದಿಂದ ತೆಗೆಯಲಾಯಿತು. ನಿನ್ನ ಹಣೆಬರಹ, ನೀನುಂಟೂ, ನಿನ್ನ ಚುನಾವಣೆ ಉಂಟು ಎಂದು ಹೇಳಿ ಕಳುಹಿಸಿದೆ ಎಂದರು.

ನಾನು ಸಹಕಾರ ಸಚಿವರಾದ ಬಳಿಕ ನಮ್ಮ ಪಕ್ಷದ ಹಿರಿಯ ಮುಖಂಡರೊಬ್ಬರು ನನಗೆ ಕರೆ ಮಾಡಿ, ನಮ್ಮ ಹುಡುಗನೊಬ್ಬನಿದ್ದಾನೆ. ಆತನನ್ನು ನಿಮ್ಮ ಇಲಾಖೆಗೆ ತೆಗೆದುಕೊಳ್ಳಿ ಎಂದರು. ಹಿರಿಯರ ಮಾತಿಗೆ ಗೌರವಕೊಟ್ಟು ವಿಶೇಷ ಕರ್ತವ್ಯಾಧಿಕಾರಿಯಾಗಿ ತೆಗೆದುಕೊಳ್ಳಲಾಯಿತು. 7-8 ದಿನದ ಹಿಂದೆ ನನ್ನ ಮನೆಗೆ ಬಂದು ನಾನು ಎಂಎಲ್ ಸಿ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ ಎಂದರು. ಎಲ್ಲಿಂದ ಎಂದು ಕೇಳಿದ್ದಕ್ಕೆ ಮಂಡ್ಯ ಅಂದರು. ಆಗ ಆಶ್ಚರ್ಯ ಆಯ್ತು. ನಿನಗೆ ದೇವರು ಒಳ್ಳೇದು ಮಾಡಲಿ ಎಂದು ಹೇಳಿ ಕೆಲಸದಿಂದ ತೆರವು ಮಾಡಿದೆ. ಕೂಡಲೇ ಈ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೆ ತಂದೆ ಎಂದರು.

ಮಂಡ್ಯದಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಅಂತ ನಾರಾಯಣಗೌಡ ಮಾತನಾಡಿದ್ದರು. ಈ ವಿಚಾರವಾಗಿ ಮೈಸೂರಿನಲ್ಲಿ ಕೂಡ ಪ್ರಸ್ತಾಪವಾಗಿತ್ತು. ಆದರೆ ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿದ ವ್ಯಕ್ತಿ ಇಲ್ಲಿಗೆ ಮತ್ತೊಂದು ಪಕ್ಷದಿಂದ ಅಭ್ಯರ್ಥಿ ಆಗುತ್ತಾರೆ ಎಂಬ ಮುನ್ಸೂಚನೆ ಕೂಡ ಸಿಗಲಿಲ್ಲ. ಇದು ವಾಸ್ತವ ಎಂದು ಹೇಳಿದರು.

ಕೆಲವರು ಮಂಡ್ಯ ನಮ್ಮದೇ, ಇಲ್ಲಿ ನಾವೇ ಎಂದು ಕೊಂಡಿದ್ದಾರೆ. ಎಲ್ಲಿಂದಲೋ ಬಂದು ನಾವೇ ನಾವೇ ಎಂದುಕೊಂಡಿರುವವರನ್ನು ಇಲ್ಲಿಂದ ಹೋಗಿಸುವುದು ನಿಮ್ಮ ಕೈಯಲಿ ಇದೆ ಎಂದು ಮತದಾರರಿಗೆ ಎಸ್‌ ಟಿ ಎಸ್‌ ಕರೆಕೊಟ್ಟರು.

ಸಹಕಾರ ಇಲಾಖೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕಾಂಗ್ರೆಸ್ ಗೆ ಹೋಗಿದ್ದಾರೆ. ಮುಂದೆ ಸಹಕಾರ ಸಚಿವ ಸೋಮಶೇಖರ್ ಕೂಡ ಕಾಂಗ್ರೆಸ್ ಗೆ ಹೋಗ್ತಾರೆ ಎಂದು ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ನಮ್ಮ ತಂದೆ ವೆಟರ್ನರಿ ಇನ್ಸ್ ಪೆಕ್ಟರ್.‌ ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ. ನಿಜವಾದ ಮಣ್ಣಿನ ಮಕ್ಕಳು ಸರ್ಕಾರದಲ್ಲಿ ಕೃಷಿ, ಸಹಕಾರ ಇಲಾಖೆ ಕೇಳಬೇಕು. ಆದರೆ ಈ ಎರಡು ಇಲಾಖೆ ಬಿಟ್ಟು ಪಿಡಬ್ಲ್ಯೂಡಿ, ಹಣಕಾಸು, ಇಂಧನ ಇಲಾಖೆ ಕೇಳ್ತಾರಾ ಎಂದು ಪ್ರಶ್ನಿಸಿದರು.

ಅವರು ಮಾತ್ರ ಮಣ್ಣಿನ ಮಕ್ಕಳು, ನಾವು ಮಣ್ಣಿನ ಮಕ್ಕಳಲ್ಲವೇ ಎಂದು ನಾರಾಯಣಗೌಡ ನನ್ನ ಬಳಿ ಬಂದು ಹೇಳಿದಾಗ ನೀನು ಮಣ್ಣಿನ ಮಗನಾದರೆ ಈ ಸರ್ಕಾರ ತೆಗಿ ಎಂದು ತಮಾಷೆಗೆ ಹೇಳಿದೆ. ಆದರೆ ಅದನ್ನು ಮಾಡೇ ಬಿಟ್ಟರು. ನಾವು ಬಾಂಬೆಗೆ ಹೋಗುವುದಕ್ಕೆ ಮುಂಚೆ ಅವರು ಕೂತಿದ್ದರು ಎಂದು ಹಿಂದಿನ ಘಟನಾವಳಿಗಳನ್ನು ನೆನೆಪಿಸಿದರು.