ಕಸಾಪ ಚುನಾವಣೆ: ಗೆಲುವು ಸಾಧಿಸಿದ ಎಂ. ಶೈಲಕುಮಾರ್

ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಎಂ. ಶೈಲಕುಮಾರ್ 643 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಚಿತ್ರಕಲಾವಿದರೂ ಆಗಿರಿವ ಎಂ. ಶೈಲಕುಮಾರ್ ಅವರು ಒಟ್ಟು 1316 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಗಾಯಕ ಸಿ.ಎಂ. ನರಸಿಂಹಮೂರ್ತಿ 673 ಮತಗಳನ್ನು ಪಡೆದರು.

ಉಳಿದ ಸ್ಪರ್ಧಿಗಳಾದ ನಾಗೇಶ್ ಸೋಸ್ಲೆ 150, ಸ್ನೇಹಾ 22 ಮತ ಗಳಿಸಿದ್ದಾರೆ.

 ಶೈಲಕುಮಾರ್ ಅವರು, ಚಾಮರಾಜನಗರದ ತಾಲೂಕು ಕಚೇರಿ ಸಭಾಂಗಣದ ಮತಗಟ್ಟೆಯಲ್ಲಿ 266, ಆಡಳಿತ ಶಾಖೆ ಮತಗಟ್ಟೆಯಲ್ಲಿ 223 ಹಾಗೂ ಚುನಾವಣಾ ಶಾಖೆ ಮತಗಟ್ಟೆಯಲ್ಲಿ 112 ಮತಗಳು, ಯಳಂದೂರು ತಾಲೂಕಿನಲ್ಲಿ 143, ಕೊಳ್ಳೇಗಾಲ ತಾಲೂಕಿನಲ್ಲಿ 177, ಗುಂಡ್ಲುಪೇಟೆ ತಾಲೂಕಿನಲ್ಲಿ 328, ಹನೂರು ತಾಲೂಕಿನಲ್ಲಿ 67 ಮತಗಳನ್ನು ಪಡೆದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 4830 ಮತಗಳಿದ್ದು, 2183 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ 2161 ಮತಗಳು ಕ್ರಮಬದ್ಧವಾಗಿದ್ದು, 22 ಮತಗಳು ತಿರಸ್ಕೃತವಾಗಿವೆ.

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನವನ್ನು ಮಾಡುವ ಉದ್ದೇಶ ಇಟ್ಟಕೊಂಡೆದ್ದೇನೆ. ಈ ವಿಷಯಗಳನ್ನಿಟ್ಟುಕೊಂಡು ಮತಯಾಚನೆ ಮಾಡಿದ್ದೆ. ಜಿಲ್ಲೆಯ ಮತದಾರರು ಇದಕ್ಕೆ ಪೂರಕವಾಗಿ ಸ್ಪಂದಿಸಿ, ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ  ಸಲ್ಲಿಸುವುದಾಗಿ ಎಂ. ಶೈಲಕುಮಾರ್ ತಿಳಿಸಿದ್ದಾರೆ.