ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಕರ್ನಾಟಕ ರಾಜ್ಯದಾದ್ಯಂತ ಬುಧವಾರ 68 ಸ್ಥಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ಕಾರ್ಯಾಚರಣೆ ನಡೆದಿದೆ.
ವಿವಿದ ಜಿಲ್ಲೆಗಳಲ್ಲಿ ದೂರು ದಾಖಲಾದಂತೆ, ಚಾಮರಾಜನಗರ ಭ್ರಷ್ಟಾಚಾರ ನಿಗ್ರಹ ದಳ, ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರ ಕೆ. ಎಸ್. ಲಿಂಗೇಗೌಡ, ಕಾರ್ಯಪಾಲಕ ಅಭಿಯಂತರರು, ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಅವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಮೈಸೂರು ದಕ್ಷಿಣ ವಲಯ ಎಸಿಬಿ ಎಸ್ಪಿ ಅವರ ನೇತೃತ್ವದಲ್ಲಿ ಒಟ್ಟು 36 ಅಧಿಕಾರಿ ಹಾಗೂ ಸಿಬ್ಬಂದಿಗಳ 4 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 4 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ಸೇರಿದಂತೆ ವಿವಿದೆಡೆ ಶೋಧನಾ ಕಾರ್ಯ ಕೂಡ ಮುಂದುವರೆದಿದೆ.
ಎಸಿಬಿ ಬಲೆಗೆ ಬಿದ್ದಿರುವ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಎಕ್ಸಿಕ್ಯೂಟಿವ್ ಇಂಜಿನಿಯರ್(ಎಇ) ಕೆ.ಎಸ್.ಲಿಂಗೇಗೌಡ ಅವರ ಬೇನಾಮಿ ಆಸ್ತಿ ಮಾಡಿರುವ ಗುಮಾನಿ ಹಿನ್ನೆಲೆಯಲ್ಲಿ ಸ್ವಗ್ರಾಮ ಹನೂರು ತಾಲೂಕಿನ ಕಣ್ಣೂರು ಸೇರಿದಂತೆ ಸಂಬಂಧಿಗಳ ಮನೆಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ತಂಡ ಜಾಲಾಡುತ್ತಿದೆ.
ಗೌರಿ ಶಂಕರ ಕಲ್ಯಾಣ ಮಂಟಪ, ಹತ್ತಾರು ಎಕರೆ ಕೃಷಿ ಭೂಮಿ, ಮನೆಗಳು, ವಾಹನಗಳ ದಾಖಲೆ – ಆದಾಯದ ಮೂಲವನ್ನು ಎಸಿಬಿ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಮುಖ್ಯ ಕಡತಗಳನ್ನು ವಶಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. 6 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಬೆಳ್ಳಂಬೆಳಗ್ಗೆ ಲಿಂಗೇಗೌಡ ಸಂಬಂಧಿಕರು ಶಾಕ್ ಗೆ ಒಳಗಾಗಿದ್ದಾರೆ. ಲಿಂಗೇಗೌಡ ಅವರ ಮತ್ತೊಬ್ಬ ಸಹೋದರ ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಯಾಗಿದ್ದಾರೆ.