ಚಾಮರಾಜನಗರ: ಶಕ್ತಿ, ಚತುರತೆ, ಸೂಕ್ಷ್ಮತೆ ಬೇಟೆಗಾರನ ಛಲ – ಬಲವನ್ನು ಮೈಗೂಡಿಸಿಕೊಂಡಿರುವ ಝಾನ್ಸಿ ರಾಣಿ ಬಂದಿದ್ದಾಳೆ.
ಈಕೆ ಕೂಡಾ ಬಂಡೀಪುರದ ರಾಣಾನಂತೆ ಪರಾಕ್ರಮಿಯೂ ಹೌದು.
ಇದು ಯಾರಿರಬಹುದೆಂದು ಕುತೂಹಲವೆ…
ಇದು ಜರ್ಮನ್ ಶೆಫರ್ಡ್ ತಳಿಯ ಶ್ವಾನ..
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆಗಾರರ ಸೊಕ್ಕಡಗಿಸಲು ಝಾನ್ಸಿ ಎಂಬ ಸ್ನೈಪರ್ ಡಾಗ್ ತರಬೇತಿ ಮುಗಿಸಿಕೊಂಡು ಚಾಮರಾಜನಗರಕ್ಕೆ ಗುರುವಾರ ಎಂಟ್ರಿ ಕೊಟ್ಟಿದೆ.
ಬಂಡೀಪುರದಲ್ಲಿ ತನ್ನ ಪರಾಕ್ರಮ ಮೆರೆಯುತ್ತಿರುವ ರಾಣಾದಂತೆ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ(BRT) ಝಾನ್ಸಿ ಎಂಬ ಜರ್ಮನ್ ಶೆಫರ್ಡ್ ತಳಿಯ ಈ ಶ್ವಾನವು ಚಂಡೀಘಡದಲ್ಲಿ ಸ್ವಯಂ ಸೇವಾ ಸಂಸ್ಥೆಯಾದ ಟ್ರಾಫಿಕ್ ಮತ್ತು ಡಬ್ಲೂಡಬ್ಲೂಎಫ್-ಇಂಡಿಯಾದಿಂದ ಇಂಡೋ-ಟಿಬೆಟಿನ್ ಬಾರ್ಡರ್ ಪೊಲೀಸ್ ಫೋರ್ಸ್ (ಬಿಟಿಸಿ-ಐಟಿಬಿಪಿ) ಶಿಬಿರದಲ್ಲಿ 7 ತಿಂಗಳ ಕಠಿಣ ತರಬೇತಿ ಪಡೆದ ಬಳಿಕ ಗುರುವಾರ ಬಿಆರ್ಟಿಗೆ ಬಂದು ಕಾರ್ಯಾರಂಭ ಮಾಡಿದೆ.
ಪುಣಜನೂರು ವಲಯದಲ್ಲಿ ಶ್ವಾನವನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.
ಝಾನ್ಸಿಯನ್ನು ನೋಡಿಕೊಳ್ಳಲು ಫಾರೆಸ್ಟ್ ಗಾರ್ಡ್ ಬಸವರಾಜು ಹಾಗೂ ವಾಚರ್ ಸಿದ್ದರಾಮಣ್ಣ ಎಂಬವರಿಗೂ ತರಬೇತಿ ಕೊಡಲಾಗಿದೆ.
ಬಿಆರ್ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಈವರೆಗೂ ಸ್ನೈಪರ್ ಡಾಗ್ ಒಂದೂ ಕೂಡ ಇರಲಿಲ್ಲ. ಇದೇ ಮೊದಲ ಬಾರಿಗೆ ಝಾನ್ಸಿಯನ್ನು ಕರೆಸಿಕೊಳ್ಳಲಾಗಿದೆ.
ಝಾನ್ಸಿಯನ್ನು ಬಳಸಿಕೊಂಡು ಮರಗಳ್ಳತನ, ಕಳ್ಳಬೇಟೆಗಳಂತಹ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅರಣ್ಯಾಧಿಕಾರಿಗಳು ಕಾತುರದಿಂದಿದ್ದಾರೆ
ಈಗಾಗಲೇ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಣಾ ಮತ್ತು ಮುಧೋಳ್ ತಳಿಯ ಶ್ವಾನಗಳಿವೆ. ಕಳ್ಳಬೇಟೆಗಾರರು, ಹುಲಿ ಪತ್ತೆ ಕಾರ್ಯಾಚರಣೆ, ಇನ್ನಿತರ ಅರಣ್ಯ ಅಪರಾಧ ಪ್ರಕರಣ ಪತ್ತೆಗೆ ಝಾನ್ಸಿ ಅರಣ್ಯ ಇಲಾಖೆಗೆ ವರವಾಗಿ ಪರಿಣಮಿಸಲಿದೆ