ಸಕಲೇಶಪುರದಲ್ಲಿ 30 ಕಾಡಾನೆಗಳ ಪರೇಡ್ : ಬೆಚ್ಚಿಬಿದ್ದ ಜನತೆ

ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಕಾಟದಿಂದ ಜನ ರೋಸಿ ಹೋಗಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ,ಅರಕಲಗೂಡು, ಅರಸೀಕೆರೆ ಮತ್ತಿತರ ತಾಲೂಕುಗಳಲ್ಲಿ ಸದಾ ಆನೆಗಳ ದಾಳಿ ಇದ್ದೇ ಇರುತ್ತದೆ. ಬೆಳೆ ನಾಶವಾಗುವ ಜೊತೆಗೆ ಮಾನವನ ಮೇಲೂ ಆನೆಗಳು ದಾಳಿ ಮಾಡುವುದರಿಂದ ಸದಾ ಆತಂಕದಲ್ಲೇ ಜನ ಜೀವನ ಸಾಗಿಸುವಂತಾಗಿದೆ.

ಶುಕ್ರವಾರ ತಡರಾತ್ರಿಯಿಂದ ಶನಿವಾರ ಮುಂಜಾನೆವರೆಗೂ ಸಕಲೇಶಪುರ ತಾಲ್ಲೂಕಿನ ಕುಂಬಾರ ಕಟ್ಟೆ ಗ್ರಾಮದಲ್ಲಿ ಮೂವತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಗದ್ದೆಯ ನಡುವೆ ಪರೇಡ್ ರೀತಿಯಲ್ಲಿ ಸಂಚರಿಸುತ್ತಿದ್ದುದನ್ನು ಸ್ಥಳೀಯರು ನೋಡಿ ಬೆಚ್ಚಿಬಿದ್ದಿದ್ದಾರೆ.

ಆಲೂರು, ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಬೆಳೆ ಹಾನಿ ಸೇರಿದಂತೆ ಪ್ರಾಣಹಾನಿಯೂ ಹೆಚ್ಚುತ್ತಿದೆ.

ಅತಿವೃಷ್ಟಿ, ಬೆಳೆ ನಾಶ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕಾಡಾನೆಗಳ ಉಪಟಳವೂ ಸೇರಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕಾಡಾನೆ ಹಿಂಡು ರೈತರು ಹಾಗೂ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿರುವುದನ್ನು ಕಂಡರೂ ಕಾಣದಂತೆ ಇಲ್ಲಿನ ಜನಪ್ರತಿನಿಧಿಗಳು, ಶಾಸಕರುಅಧಿಕಾರಿಗಳು ಇದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಹಲವು ಬಾರಿ ಪ್ರತಿಭಟನೆ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚಿಗೆ ಹಾಸನಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರಲ್ಲಿ ಮನವಿ ಮಾಡಿದೆವು ಅದಕ್ಕೆ ಅವರು ಸ್ಪಂದಿಸಿದ್ದು ಕಾಡಾನೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಯಾವ ಸಚಿವರಾಗಲಿ ಅಥವಾ ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ. ಸರ್ಕಾರದಿಂದ ನಿರ್ದೇಶನವೂ ಬಂದಿಲ್ಲ. ಆದರೆ ಆನೆಗಳ ಉಪಟಳ ಮುಂದುವರೆದಿದೆ. ಹಾಗಾಗಿ ಜನರ ಅರಣ್ಯರೋದನವೂ ನಿಂತಿಲ್ಲ.