ಚಾಮರಾಜನಗರ : ಕಿರಿಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಧರಣಿ ನಡೆಸುತ್ತಿರುವ ಹಿನ್ನೆಲೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ 15ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಪರದಾಡಬೇಕಾದ ಪರಿಸ್ಥಿತಿ ಇಲ್ಲಿನ ಹಳೆ ಆಸ್ಪತ್ರೆಯಲ್ಲಿ ಎದುರಾಗಿದೆ.
ಭತ್ಯೆ ಹಾಗೂ ವೇತನ ಸಿಗದ ಹಿನ್ನೆಲೆ ಸಿಬ್ಬಂದಿ ಧರಣಿ ನಡೆಸುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿಗಳು ಡಯಾಲಿಸಿಸ್ ಸೌಲಭ್ಯ ಸಿಗದೆ ಆಸ್ಪತ್ರೆ ಬಾಗಿಲಲ್ಲೇ ಕುಳಿತು ಅಸಮಾಧಾನ ಹೊರ ಹಾಕಿದ್ದಾರೆ.
ಇಲ್ಲಿನ ಹಳೆ ಆಸ್ಪತ್ರೆಯಲ್ಲಿ ಒಟ್ಟು 6 ಡಯಾಲಿಸಿಸ್ ಯಂತ್ರಗಳಿವೆ. ತಾಂತ್ರಿಕ ಸಿಬ್ಬಂದಿಗೆ ಸರಿಯಾಗಿ ವೇತನ ನೀಡದಿದ್ದರಿಂದ ಸಿಬ್ಬಂದಿ ಸೇವೆಗೆ ಗೈರಾಗಿದ್ದಾರೆ.
ಡಿಹೆಚ್‍ಒ ಆಸ್ಪತ್ರೆಗೆ ಭೇಟಿ ನೀಡಿ ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಮುಂದುವರೆದ ವೈದ್ಯರ ಪ್ರತಿಭಟನೆ: ಕೋವಿಡ್ ಭತ್ಯೆಗೆ ಆಗ್ರಹಿಸಿ ಸಿಮ್ಸ್?ನ 136 ಮಂದಿ ವೈದ್ಯರು ಕೈಗೊಂಡಿರುವ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ. 6 ತಿಂಗಳಿನಿಂದ ಬಾಕಿಯಿರುವ ಕೋವಿಡ್ ಭತ್ಯೆ ಭರಿಸುವಂತೆ ಆಗ್ರಹಿಸಿದ್ದಾರೆ.