ಚಿಕ್ಕಮಗಳೂರು:ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸಲು ಆರಂಭವಾಗಿದ್ದು, ಮತದಾರರು ಬದಲಾವಣೆ ಬಯಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಆಡಳಿತ ಕುಸಿದಿದೆ. ಕೇಂದ್ರ ಸರಕಾರವೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಯಾವುದೇ ಸರ್ಕಾರಿ ಕಚೇರಿಗೆ ಹೋಗಿ ಟೇಬಲ್ ಗುದ್ದಿದರೆ ಕಾಸು ಕೇಳುತ್ತಾರೆ. ಇಂತಹ ದುಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರ ಸೃಷ್ಟಿಸಿರುವ ಪರಿಸ್ಥಿತಿ. ಬಿಜೆಪಿಯ ಹಿರಿಯ ನಾಯಕರಾದ ಯತ್ನಾಳ್ ಹಾಗೂ ವಿಶ್ವನಾಥ್ ಅವರು ಸರ್ಕಾರದ ವಿರುದ್ಧವೇ ಆರೋಪ ಮಾಡಿದ್ದಾರಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಚುನಾವಣೆ ಸಮಯದಲ್ಲಿ ಯಾರೂ, ಯಾವುದೇ ದೂರು ನೀಡದಿದ್ದರೂ ಪ್ರಧಾನಿಗಳು ಬಂದು ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದರು. ನಾವು ಆಗ ಅದರ ವಿರುದ್ಧ ಸವಾಲು ಹಾಕಿದೆವು. ಅವರ ಸರ್ಕಾರ ಬಂದ ನಂತರ 10 ಪರ್ಸೆಂಟ್ ಲಂಚ ಕೊಟ್ಟಿರುವವರಿಂದ ದೂರು ತೆಗೆದುಕೊಂಡು ವಿಚಾರಣೆ ನಡೆಸಿ ನಾವು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿಸಬಹುದಿತ್ತು. ಶಿಕ್ಷೆ ನೀಡುವುದಿರಲಿ ತನಿಖೆ ನಡೆಸಲೂ ಹೋಗಲಿಲ್ಲ ಎಂದರು.
ಆದರೆ ಈಗ ರಾಜ್ಯದ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಲಂಚದ ಹಾವಳಿ ಬಗ್ಗೆ ದೂರಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಅಷ್ಟೆಲ್ಲ ಲಂಚ ಕೊಟ್ಟು ನಮ್ಮಿಂದ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಇಡೀ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟ ರಾಜ್ಯ ಸರ್ಕಾರ ಅಂತೇನಾದರೂ ಇದ್ದರೆ ಅದು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಎಂದು ಡಿಕೆಶಿ ಗಂಭೀರ ಆರೋಪ ಮಾಡಿದರು.
ನಿಮ್ಮ ಕ್ಷೇತ್ರದಲ್ಲಿ ಲೋಕಸಭೆ ಸದಸ್ಯರು, ಕೇಂದ್ರದ ಮಂತ್ರಿಗಳು ಇದ್ದಾರೆ. ಇಲ್ಲಿರುವ ಕಾಫಿ, ಅಡಿಕೆ, ರಬ್ಬರ್, ಮೆಣಸು ಬೆಳೆ ಕೃಷಿ ಅಲ್ಲವೇ? ಅವರು ಜಮೀನಿಗೆ ಸಾಲ ಪಡೆದರೆ ಕೈಗಾರಿಕೆಗಳಿಗೆ ನೋಟೀಸ್ ಜಾರಿ ಮಾಡುವಂತೆ ಇವರಿಗೂ ಜಾರಿ ಮಾಡುತ್ತಾರೆ. ಅವರನ್ನು ಹರಾಜು ಹಾಕಲು ಕಾಯ್ದೆ ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಶೋಭಕ್ಕ, ಸಿ.ಟಿ. ರವಿ, ಯಡಿಯೂರಪ್ಪ ಅವರು ಯಾಕೆ ಪ್ರತಿಭಟನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.