ಓಮಿಕ್ರಾನ್ ಸೋಂಕಿತ ವ್ಯಕ್ತಿಯ ಸಂಪರ್ಕಿತರು ಸೇಫ್

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಐದು ಮಂದಿಗೆ ಯಾವುದೇ  ಸೋಂಕು ತಗುಲಿಲ್ಲ,ಹಾಗಾಗಿ  ಸರ್ಕಾರ ಹಾಗೂ ಬೆಂಗಳೂರು ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಬುಧವಾರ ಅಥವಾ ಗುರುವಾರ ಸಂಪರ್ಕಿತರ ಕುರಿತು ಆರೋಗ್ಯ ಇಲಾಖೆ ಅಧಿಕೃತ ವರದಿ ಪ್ರಕಟಿಸಲಿದೆ.

ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ 46 ವರ್ಷದ ಬೆಂಗಳೂರಿನ ವೈದ್ಯರೊಬ್ಬರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿತ್ತು. ಇವರ ಸಂಪರ್ಕದಲ್ಲಿದ್ದ ಪತ್ನಿ ಸೇರಿದಂತೆ ಐದು ಮಂದಿಯನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಿ ಗಂಟಲು ದ್ರವವನ್ನು ಜಿನೋಮ್ ಸೀಕ್ವೆನ್ಸ್ ಗೆ ಕಳುಹಿಸಲಾಗಿತ್ತು.

ಅದೃಷ್ಟವಶಾತ್ ಯಾರಿಗೂ ಕೂಡ ಓಮಿಕ್ರಾನ್ ಸೋಂಕು ತಗುಲಿಲ್ಲ ಎಂಬುದು  ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಇಬ್ಬರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿತ್ತು. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದ್ದರಿಂದ ಸಹಜವಾಗಿ ಬೆಂಗಳೂರು ಜನ ಆತಂಕಗೊಂಡಿದ್ದರು.

ಓಮಿಕ್ರಾನ್ ಸೋಂಕಿತ ವೈದ್ಯರು ಚೇತರಿಸಿಕೊಂಡಿದ್ದು, ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.