ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಊಹಪೋಹದ ಸುದ್ದಿಗಳು ಹರಿದಾಡುತ್ತಿವೆ. ಚುನಾವಣೆ ಘೋಷಣೆ ಬಳಿಕ ಕಾಂಗ್ರೆಸ್ ಪಕ್ಷ ನಮ್ಮ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಹೇಳಿದೆ. ಜೆಡಿಎಸ್ ಆರು ಕ್ಷೇತ್ರದಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸಿ ಬೇರೆ ಕಡೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಹೇಳುತ್ತಿದ್ದಾರೆ, ಆದರೆ ಬಿಜೆಪಿ ಪಕ್ಷವು ನಮ್ಮಿಂದ ಯಾವುದೇ ಬೆಂಬಲ ಕೋರಿಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪನವರು ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ನಮಗೆ ಬೆಂಬಲ ನೀಡಿ ಎಂದು ಕೋರಿದ್ದಾರೆ. ಅದು ಅಷ್ಟಕ್ಕೆ ಸೀಮಿತವಾಗಿದೆ. ಹಾಗಂತ ಇದು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ ಎಂದು ಹೇಳಿದರು.
ಕೆಲವೆಡೆ ಸ್ಥಳೀಯ ನಾಯಕರಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರ ಬಿಟ್ಟಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.