ಬಿಜೆಪಿ ಸಂಸದರಿಗೆ ಕಠಿಣ ಶಬ್ಧಗಳಲ್ಲಿ ಮೋದಿ ಎಚ್ಚರಿಕೆ

ನವದೆಹಲಿ: ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ಶಬ್ಧಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಹಮ್ಮಿಕೊಂಡಿದ್ದ ಪಕ್ಷದ ಸಂಸದೀಯ ಸಭೆಯಲ್ಲಿ ಮಾತನಾಡಿದ ಮೋದಿನೀವು ಬದಲಾಗಿ ಇಲ್ಲವಾದರೆ ನಾವೆ ಬದಲಾವಣೆ ಮಾಡಬೇಕಾಗುತ್ತದೆ. ಮೊದಲು ನೀವು ನಿಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ನಿಮ್ಮನ್ನು ತಿದ್ದಿ, ಬುದ್ದಿ ಹೇಳಿ ಮಕ್ಕಳಂತೆ ನಡೆಸಿಕೊಳ್ಳುವುದು  ನಮಗೆ ಒಳ್ಳೆಯದಲ್ಲ ಎಂದು ಕಡಕ್ ಆಗಿ ಹೇಳಿದ್ದಾರೆ

ಇತ್ತೀಚಿನ ದಿನಗಳಲ್ಲಿ ಸಂಸತ್ ಕಲಾಪದಲ್ಲಿ ಸದಸ್ಯರು  ಗೈರಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಂಸದರು ಮಕ್ಕಳಂತೆ ನಡೆದುಕೊಳ್ಳಬಾರದು ಎಂದು ಬುದ್ದಿ ಹೇಳಿದ್ದಾರೆ.

ಸಂಸತ್ ನಲ್ಲಿ ಪ್ರತಿಪಕ್ಷವನ್ನು  ಎದುರಿಸಬೇಕಾದರೆ ನಮ್ಮ ಒಗ್ಗಟ್ಟು ಬಹಳ ಮುಖ್ಯ. ನಾವು ಆಡಳಿತ ಪಕ್ಷದಲ್ಲಿದ್ದೇವೆ. ಹಲವಾರು ವಿಷಯಗಳನ್ನು ಎದುರಿಸಬೇಕಾಗುತ್ತದೆ, ಇತ್ತೀಚೆಗೆ ನಾಗಾಲ್ಯಾಂಡ್ನಲ್ಲಿ ಸೇನೆ ಕಾರ್ಯಾಚರಣೆಯಲ್ಲಿ 14 ಮಂದಿ ಹತ್ಯೆ ಪ್ರಕರಣ,ರಾಜ್ಯಸಭೆಯಲ್ಲಿ ಗದ್ದಲ ಮಾಡಿದ 12 ಮಂದಿ ಸದಸ್ಯರನ್ನು ಅಮಾನತುಗೊಳಿಸಿದ್ದು ಹೀಗೆ ಹಲವು ವಿಷಯ ಇಟ್ಟುಕೊಂಡು ಕ್ಯಾತೆ ತೆಗೆಯುವ ಪ್ರತಿ ಪಕ್ಷಗಳಿಗೆ ಸರಿ ಉತ್ತರ ಕೊಡಬೇಕಿದೆ  ಇದಕ್ಕೆಲ್ಲ ಸನ್ನದ್ದರಾಗಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ರೂಪಿಸಿದ ಮಹತ್ವದ ಕೃಷಿ ತಿದ್ದುಪಡಿ ಮಸೂದೆಗಳನ್ನು ರೈತ ಸಂಘಟನೆಗಳ ಪ್ರತಿಭಟನೆಯಿಂದ ಹಿಂಪಡೆಯುವ ಅನಿವಾರ್ಯತೆ ಎದುರಾಯಿತು. ಪ್ರತಿಭಟನೆಗಳು, ಟೀಕೆಗಳು ಎದುರಾದ ವೇಳೆ ಬಿಜೆಪಿಯ ಸಂಸದರು ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದಿವೆ.

ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾವಣೆ ಎದುರಾಗಲಿದೆ. ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಬೇಕು. ಇದಕ್ಕೆ ಸಂಸದರ ಪಾತ್ರ ಬಹಳ ಮುಖ್ಯವಾಗಿದೆ ಎಂದಿದ್ದಾರೆ.