ಸ್ಥಳೀಯ ಸಂಸ್ಥೆಗಳಿಗೆ ಬಿಜೆಪಿ, ಜೆಡಿಎಸ್ ಕೊಡುಗೆ ಏನೇನೂ ಇಲ್ಲ -ಸಿದ್ದು ಟೀಕಾ ಪ್ರಹಾರ

ಮೈಸೂರು:ಸ್ಥಳೀಯ ಸಂಸ್ಥೆಗಳಿಗೆ ಬಿಜೆಪಿ, ಜೆಡಿಎಸ್ ಕೊಡುಗೆ ಏನೇನೂ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ  ಮಾತನಾಡಿದ ಅವರು,ವಿಧಾನ ಪರಿಷತ್ ನಲ್ಲಿ75 ಸ್ಥಾನಗಳಿವೆ‌‌ ಒಟ್ಟು 20 ಸ್ಥಾನಗಳಿಗೆ ಕಾಂಗ್ರೆಸ್ ಸ್ಪರ್ಧೆ ಮಾಡಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾವು ಟಿಕೇಟ್ ನೀಡಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯ ಕಾಪಾಡಿಕೊಂಡಿದೆ ಎಂದು ಹೇಳಿದ ಅವರು,

ಪರಿಶಿಷ್ಟ ಜಾತಿಗೆ 1 ಪರಿಶಿಷ್ಟ ಪಂಗಡಕ್ಕೆ 1, ಒಬಿಸಿ 5, ಬಂಟ 1, ಮುಸ್ಲಿಂ ಹಾಗೂ ಮಹಿಳೆಯನ್ನು ಅಭ್ಯರ್ಥಿ ಮಾಡಿದ್ದೇವೆ.

ಬೇರೆ ಯಾವುದೇ ಪಕ್ಷ ಸಾಮಾಜಿಕ ನ್ಯಾಯ ಕಾಪಾಡಿಲ್ಲ ಎಂದು ಹೇಳಿದರು.

ಸೋಲಿನ ಭಯದಿಂದ  ತಾ.ಪಂ, ಜಿ.ಪಂ. ಚುನಾವಣೆಗಳನ್ನು ಬಿಜೆಪಿಮುಂದೂಡಿದೆ ಈ ಮೂಲಕ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರ ಹಕ್ಕು ಕಿತ್ತುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐದು ವರ್ಷಕ್ಕೆ ಒಮ್ಮೆ ಕಡ್ಡಾಯವಾಗಿ ಚುನಾವಣೆ ನಡೆಯಲೇಬೇಕು ಆದರೆ,ಸೋಲುವ ಭೀತಿಯಲ್ಲಿ ಚುನಾವಣೆ ನಡೆಸುತ್ತಿಲ್ಲ ಎಂದು ಟೀಕಿಸಿದರು.

ಕ್ಷೇತ್ರ ವಿಂಗಡಣೆ, ಮೀಸಲಾತಿ ನೆಪ,ಕೋರ್ಟ್ ಕೇಸ್ ನೆಪ ಮಾಡಿಕೊಂಡು ಚುನಾವಣೆ ಮಾಡಿಲ್ಲ. ಪರಿಣಾಮ ತಾ.ಪಂ., ಜಿ.ಪಂ. ಸದಸ್ಯರಿಲ್ಲದೆ ಎಂಎಲ್‍ಸಿ ಚುನಾವಣೆ ನಡೆಯುತ್ತಿದೆ.

ಈ ರೀತಿ ಆಗಿರೋದು ಇದೇ ಮೊದಲು ಎಂದು ಆರೋಪಿಸಿದರು.

ಕಳೆದ ಮೂರುವರೆ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆ ವಿತರಣೆ ಮಾಡಿಲ್ಲ.

ನಾನು ಮುಖ್ಯಮಂತ್ರಿ ಆಗಿದ್ದಾಗ ಐದು ವರ್ಷದಲ್ಲಿ 15 ಲಕ್ಷ ಮನೆ ನೀಡಿದ್ದೇನೆ. ನಿಮ್ಮ ಸರ್ಕಾರ ಎಷ್ಟು ಮನೆ ಕೊಟ್ಟಿದೆ ಎಂಬುದನ್ನು ಸಾಬೀತು ಪಡಿಸಲು ಸವಾಲು ಹಾಕಿದ್ದೆ ಆದರೆ ಬೊಮ್ಮಾಯಿ ಬರಲೇ ಇಲ್ಲ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಕೋವಿಡ್ ನೆಪದಲ್ಲಿ ಲಕ್ಷಾಂತರ ಹಣ ಲೂಟಿ ಮಾಡಿದೆ,ಕೇಂದ್ರ ಸರ್ಕಾರ 4.5 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿದರೆ ಇವರು 18.5 ಲಕ್ಷ ಕೊಟ್ಟು ಖರೀದಿ ಮಾಡಿದ್ದಾರೆ ಎಂದು ದೂರಿದರು.

ಪ್ರಧಾನಿ ಮೋದಿ ನಾನೂ ತಿನ್ನಲ್ಲ ತಿನ್ನೋರಿಗೂ ಬಿಡಲ್ಲ ಅಂತಾರೆ ಅದರೆ ನಮ್ಮ ರಾಜ್ಯದಲ್ಲಿ ಶೇ.70ರಷ್ಟು ಭ್ರಷ್ಟಾಚಾರ ತುಂಬಿದೆ ಎಂದು ಸಿದ್ದು ಗಂಭೀರ ಆರೋಪ ಮಾಡಿದರು.

ಇಷ್ಟೊಂದು ಭ್ರಷ್ಟ, ದುರಾಡಳಿತ, ಕೆಟ್ಟ ಸರ್ಕಾರವನ್ನು ಎಂದೂ ನೋಡಿರಲೇ ಇಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಂಬಳ ಕೊಡೋಕೆ, ಪಿಂಚಣಿ ನೀಡಲೂ  ಹಣ  ಇರಲ್ಲ  ಎಂದು ಟೀಕಿಸಿದರು.

ಐದು ರಾಜ್ಯಗಳಲ್ಲಿ ಸೋತ ಮೇಲೆ, ಕೃಷಿ ಕಾಯ್ದೆ ವಾಪಸ್ ಪಡೆದಿದ್ದಾರೆ. ಮೊದಲೇ ಕಾಯ್ದೆ ವಾಪಸ್ ಪಡೆದಿದ್ರೆ ರೈತರು ಸಾಯುತ್ತಿರಲಿಲ್ಲ,ಹೋರಾಟದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರಕ್ಕಾಗಿ 25 ಲಕ್ಷ ಕೊಡಬೇಕು ಎಂದು ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು.

ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ  ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು ನಾನು ಎಂದೂ ಅವರ ಬಗ್ಗೆ ವಯಿಕ್ತಿಕವಾಗಿ ಮಾತನಾಡಿಲ್ಲ, ವಿಷಯಾಧಾರಿತವಾಗಿ ಮಾತನಾಡಿದ್ದೇನೆ ನನ್ನ ಬಗ್ಗೆ ಹೇಗೆ ಮಾತನಾಡುತ್ತಾ ಹೋದರೆ ಜೆಡಿಎಸ್ ಬಗ್ಗೆ ಬಿಚ್ಚಿಡಬೇಕಾಗುತ್ತೆ ಎಂದು ಹೇಳಿದರು.