ಪರಿಸ್ಥಿತಿ ನೋಡಿಕೊಂಡು ಹೊಸ ಮಾರ್ಗಸೂಚಿ – ಸಿಎಂ ಬೊಮ್ಮಾಯಿ

ಬೆಂಗಳೂರು:ಇನ್ನೂ ಒಂದು ವಾರ ಪರಿಸ್ಥಿತಿಯನ್ನು ನೋಡಿಕೊಂಡು ಕೋವಿಡ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು  ತೀರ್ಮಾನಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ  ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಸಚಿವರು, ಅಧಿಕಾರಿಗಳು,ತಜ್ಞರ ಜೊತೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಒಂದು ವಾರ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ ಇದು ಸಮಾಧಾನದ ವಿಷಯ, ಹೊಸ ಮಾದರಿಯ ಓಮಿಕ್ರಾನ್ ಸೋಂಕು ಕಾಣಿಸಿಕೊಂಡರೂ ಗಾಬರಿಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞರು ಸಲಹೆ ಮಾಡಿದ್ದಾರೆ. ಆದರೂ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸರ್ಕಾರ ಅದನ್ನು ಪರಿಸ್ಥಿತಿಗೆ ತಕ್ಕಂತೆ ಅನುಷ್ಠಾನ ಮಾಡಲಿದೆ ಎಂದು ಹೇಳಿದರು.

ವಿದ್ಯಾರ್ಥಿ ನಿಲಯಗಳು, ನವೋದಯ ಶಾಲೆಗಳು, ಶಾಲಾಕಾಲೇಜುಗಳಲ್ಲಿ ಹೆಚ್ಚು ನಿಗಾ ವಹಿಸಲು ತಜ್ಞರು ಶಿಫಾರಸ್ಸು ಮಾಡಿದ್ದಾರೆ, ಸದ್ಯಕ್ಕೆ ನಮ್ಮ ಮುಂದೆ ರಾಜ್ಯಾದ್ಯಂತ ಕಫ್ರ್ಯೂ ವಿಧಿಸುವ ಅಥವಾ ನಿಬಂಧನೆ ಹಾಕುವ ಪ್ರಸ್ತಾವನೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಶಾಲಾ ಕಾಲೇಜುಗಳಲ್ಲಿ ಕ್ಲಸ್ಟರ್ ಮ್ಯಾನೇಜನ್ಮೆಂಟ್ ಮತ್ತು ವಾಕ್ಸಿನೇಷನ್ ಡ್ರೈವ್ ಮಾಡಬೇಕೆಂದು ತಜ್ಞರು, ಸಚಿವರು ಸಲಹೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಗಡಿಭಾಗದ ಜಿಲ್ಲೆಗಳಲ್ಲಿ ಈಗಿರುವ ನಿಯಮಗಳ ಜತೆಗೆ ಇನ್ನಷ್ಟು ನಿಯಮಗಳನ್ನು ಜಾರಿ ಮಾಡುತ್ತೇವೆ. ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಈಗ ಇರುವ ನಿಯಮಗಳು  ಮುಂದುವರೆಯಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಕ್ರಿಸ್‍ಮಸ್ ಮತ್ತು ಹೊಸ ವರ್ಷ ಆಚರಣೆಗೆ ಏನೇನು ನಿಯಮಗಳನ್ನು ಜಾರಿ ಮಾಡಬೇಕು ಎಂಬುದರ ಬಗ್ಗೆ ಸಚಿವರು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ನೈಟ್ ಕಫ್ರ್ಯೂ ವಿಧಿಸುವ ಬಗ್ಗೆ ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಅಂತಿಮವಾಗಿ ತಜ್ಞರು ನೀಡುವ ಸಲಹೆಗಳು ಮತ್ತು ಶಿಫಾರಸ್ಸಿನ ಮೇಲೆ ಸರ್ಕಾರ ಮುಂದುವರೆಯಲಿದೆ ಯಾರೂ  ಗೊಂದಲಕ್ಕೆ ಒಳಗಾಗಬಾರದು ಎಂದು ಸಿಎಂ ಮನವಿ ಮಾಡಿದರು.