ಬೆಂಗಳೂರು: ರಾಜ್ಯದ ವಿಧಾನ ಪರಿಷತ್‍ನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಮತದಾನವಾಗಿದ್ದು,ಒಟ್ಟು 90 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
ವಿಧಾನಪರಿಷತ್ ಸಭಾನಾಯಕ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿ ಮಠ ಸೇರಿದಂತೆ ಒಟ್ಟು 90 ಅಭ್ಯರ್ಥಿಗಳ ಭವಿಷ್ಯವನ್ನು ಗ್ರಾಮಪಂಚಾಯಿತಿ ಸದಸ್ಯರು ಬರೆದಿದ್ದಾರೆ.
ಬೀದರ್, ಗುಲ್ಬರ್ಗಾ, ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಮೈಸೂರು ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಿತು.
ಸಂಸದರು, ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಪುರಸಭೆ, ನಗರಸಭೆ, ಗ್ರಾಪಂ ಸದಸ್ಯರು ತಮ್ಮ ಮತಗಟ್ಟೆಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಸೇರಿದಂತೆ ಒಟ್ಟು 98,846 ಮತದಾರರಿದ್ದು, 6073 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಮತದಾನ ನಡೆಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವ್ ತಾಲ್ಲೂಕಿನ ಮತಗಟ್ಟೆ 297ರಲ್ಲಿ ಮತ ಚಲಾಯಿಸಿದರು. ಯಡಿಯೂರಪ್ಪ ಅವರು ಶಿಕಾರಪುರದ ಪುರಸಭೆಯಲ್ಲಿ ಮತದಾನ ಮಾಡಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮತ ಚಲಾಯಿಸಿದರು.