ಮತಾಂತರ ಎನ್ನುವುದು ಸಮಾಜಕ್ಕೆ ಒಳ್ಳೆಯದಲ್ಲ -ಸಿಎಂ

ಹುಬ್ಬಳ್ಳಿ: ಮತಾಂತರ ಎನ್ನುವುದು ಸಮಾಜಕ್ಕೆ ಒಳ್ಳೆಯದಲ್ಲ, ಹೀಗಾಗಿ ಕಾನೂನು ತರುವ ಪ್ರಯತ್ನವನ್ನು ನಮ್ಮ‌ ಸರ್ಕಾರ ಮಾಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಎಂ ತಮ್ಮ ನಿವಾಸದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಹಿಂದೂ, ಇಸ್ಲಾಂ,‌ ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಸಂವಿಧಾನಾತ್ಮಕವಾಗಿ ರಚನೆಯಾಗಿವೆ. ಅವರಿಗೆ ಯಾವುದೇ ಆತಂಕ ಬೇಡ. ಈಗಾಗಲೇ ಕ್ರಿಶ್ಚಿಯನ್ ಸಮೂದಾಯದ ನಾಯಕರಿಗೆ ಮಾತನಾಡಿದ್ದು, ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಬದಲಾಗಿ ಬಡತನವನ್ನು ದುರುಪಯೋಗ ಮಾಡಿಕೊಂಡು ಮತಾಂತರ ಮಾಡುವುದು ತಪ್ಪು. ಹಾಗಾಗಿ ಆಸೆ ಆಮಿಷವೊಡ್ಡಿ ಮತಾಂತರ ಆಗುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದರು.

ಮತಾಂತರ ಕಾಯಿದೆ ಚರ್ಚೆಗೆ ಮುನ್ನ ಆ ವಿಷಯವಾಗಿ ಒಂದು ಕಮಿಟಿ ರಚನೆ ಮಾಡಲಾಗಿದೆ. ಅಲ್ಲಿ ಕಾನೂನು ಇಲಾಖೆಯ ಕಮಿಟಿ ಮತಾಂತರದ ವಿಷಯವಾಗಿ ಸಂಪೂರ್ಣ ಪರಿಶೀಲನೆ ಮಾಡಲಾಗುತ್ತಿದೆ. ಆ ವರದಿ ನಮ್ಮ ಕ್ಯಾಬಿನೆಟ್ ಗೆ ಬರುತ್ತದೆ. ಆಗ ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸುತ್ತೇವೆ. ನಂತರ ವಿಧಾನ ಸಭೆಗೆ ಬಂದರೆ ಬೆಳಗಾವಿಯಲ್ಲಿಯೇ ಮತಾಂತರ ಕಾಯಿದೆ ಕುರಿತು ಚರ್ಚೆ ಮಾಡಲಾಗುವುದು ಎಂದರು.

ಸೋಮವಾರದಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದೆ. ಈಗಾಗಲೇ ಎಲ್ಲ ತಯಾರಿ ಮಾಡಿದ್ದೇವೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಹ್ಯಾಕ್ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈಗಾಗಲೇ ಪ್ರಧಾನಿಗಳು ಟ್ವಿಟರ್ ಹ್ಯಾಕ್ ಕುರಿತು ಮಾತನಾಡಿದ್ದಾರೆ. ಹಾಗಾಗಿ ತಪ್ಪಿತಸ್ಥರನ್ನು ಗುರುತಿಸಲು ಕಾರ್ಯಾಚರಣೆ ಕೂಡಾ ಮಾಡಲಾಗುತ್ತಿದೆ. ಅದಲ್ಲದೇ ಇಂತಹ ಹ್ಯಾಕ್ ಆಗುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ತಾಂತ್ರಿಕ ಬಲದಿಂದ ಅವುಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಒಮೈಕ್ರಾನ್ ಟೆಸ್ಟಿಂಗ್ ಲ್ಯಾಬ್ ಗಳನ್ನು ಹೆಚ್ಚಿಸಲಾಗುವುದು, ಈಗಾಗಲೇ ಒಂದು ಜಿನೋಮಿಕ್ ಸ್ವಿಕ್ವೇನ್ಸ್ ಲ್ಯಾಬ್ ನ್ನು ಹೆಚ್ಚಿಗೆ ಮಾಡುತ್ತೇವೆ ಎಂದರು.