ಉತ್ತರ ಪ್ರದೇಶ: ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ ಗಂಗಾನದಿ ತಟದಿಂದ ನೇರ ಸಂಪರ್ಕ ಕಲ್ಪಿಸುವ ಕಾರಿಡಾರ್ ಯೋಜನೆ ಪೂರ್ಣಗೊಂಡಿದ್ದು ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ.
ಸೋಮವಾರ ಬೆಳಗ್ಗೆ ವಾರಣಾಸಿಗೆ ಮೋದಿಯವರು ಆಗಮಿಸಿದ್ದು ಮೊದಲು ಕಾಲಭೈರವೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಅವರು ಕಾಲಭೈರವ ಸ್ವಾಮಿಗೆ ಮಂಗಳಾರತಿ ಮಾಡಿದರು.ಆನಂತರ
ಕಾಶಿವಿಶ್ವನಾಥ ಧಾಮ ಉದ್ಘಾಟಿಸಿದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಅವರು ಮೋದಿ ಅವರಿಗೆ ಸಾಥ್ ನೀಡಿದರು.
ವಾರಣಾಸಿಯು ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವು ಆಗಿರುವುದರಿಂದ ಇಲ್ಲಿನ ಅಭಿವೃದ್ಧಿಗೆ ಅವರು ಕಂಕಣತೊಟ್ಟು ನಿಂತಿದ್ದಾರೆ.
ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರದ ರಸ್ತೆ ಇಕ್ಕಟ್ಟಾಗಿದ್ದುದರಿಂದ ಜನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು.
ಕೇವಲ ಮೂರು ಸಾವಿರ ಅಡಿ ಇದ್ದ ಕಾಶಿವಿಶ್ವನಾಥ ದೇಗುಲವನ್ನು ಇದೀಗ ಅಭಿವೃದ್ಧಿಪಡಿಸಿ 5 ಲಕ್ಷ ಚದರ ಅಡಿವರೆಗೆ ವಿಸ್ತರಿಸಲಾಗಿದೆ.
ಕಾಶಿ ಕ್ಷೇತ್ರದ ಇತಿಹಾಸ ಸಂಸ್ಕೃತಿ ಪ್ರತಿಬಿಂಬಿಸುವ ಮ್ಯೂಸಿಯಮ್ ಅನ್ನು ನಿರ್ಮಾಣ ಮಾಡಲಾಗಿದೆ, ಹೋಮ ಹವನಕ್ಕೆ ಅನುಕೂಲ ವಾಗುವಂತೆ ಹೊಸ ಯಜ್ಞಶಾಲೆಯನ್ನು ಸೃಷ್ಟಿಸಲಾಗಿದೆ.
ಬನಾರಸ್ ಹಾಗೂ ಇತರ ಭಾಗದ ಆಹಾರ ಸಿಗುವ ಫುಡ್ ಸ್ಟ್ರೀಟ್ ನಿರ್ಮಾಣ ಮಾಡಲಾಗಿದೆ. ವಿಶ್ವನಾಥ ದೇಗುಲದ ಮುಂಭಾಗದಲ್ಲಿ ಹಲವು ಕಟ್ಟಡಗಳು ಇದ್ದುದರಿಂದ ದೇಗುಲದಿಂದ ಗಂಗಾನದಿ ದರ್ಶನ ಮಾಡಲು ಭಕ್ತರಿಗೆ ಅಸಾಧ್ಯವಾಗಿತ್ತು. ಇದನ್ನು ಮನಗಂಡ ಪ್ರಧಾನಿಯವರು ದೇಗುಲದ ಸ್ಥಳವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿದ್ದಾರೆ. ಇದಕ್ಕಾಗಿಯೇ 300 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ದೇಗುಲದಲ್ಲಿ ಗಂಗಾರತಿ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇವಾಲಯದ ಸಿಬ್ಬಂದಿಗಳ ವಿಶ್ರಾಂತಿಗಾಗಿ ವಿಶ್ರಾಂತಿ ತಾಣವನ್ನು ಮಾಡಿಕೊಡಲಾಗಿದೆ. ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸಲು ಸಭಾಂಗಣವನ್ನು ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ.
ಕಾಶಿ ವಿಶ್ವನಾಥ ದೇಗುಲ ಹಾಗೂ ಗಂಗಾನದಿ ನಡುವೆ ಕಾರಿಡಾರ್ ನಿರ್ಮಾಣವಾಗಿದ್ದು ಇದು ಐತಿಹಾಸಿಕ ಯೋಜನೆಯಾಗಿದೆ.
ಎರಡು ದಿನಗಳ ಕಾಲ ಕಾರಿಡಾರ್ ಉದ್ಘಾಟನಾ ಸಮಾರಂಭ ಹಾಗೂ ಸಾಂಸ್ಕೃತಿಕ ಸಮಾವೇಶ ಅಲ್ಲದೆ ದೇಶದಲ್ಲಿ ಬಿಜೆಪಿ ಪ್ರತಿನಿಧಿಸುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳ ಸಮಾವೇಶವು ಇದೇ ಸಂದರ್ಭದಲ್ಲಿ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದಾರೆ.