ಅಧಿವೇಶನ ಸಮರ್ಥವಾಗಿ ಎದುರಿಸಲು ಸಿದ್ದ -ಬೊಮ್ಮಾಯಿ

ಬೆಂಗಳೂರು:  ಸೋಮವಾರದಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನವನ್ನು ಸಮರ್ಥವಾಗಿ ಎದುರಿಸಲು  ಸಜ್ಜಾಗಿದ್ದೇವೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ವಿಷಯವನ್ನು ಪ್ರಸ್ತಾಪಿಸಿದರೂ ಸರ್ಕಾರ ಸಮರ್ಥವಾಗಿ ಎದುರಿಸಲಿದೆ. ನಾವು  ಪೂರ್ವ ತಯಾರಿ ಮಾಡಿಕೊಂಡಿದ್ದೇವೆ ಎಂದರು.

ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಯಾವುದೇ ವಿಷಯಗಳನ್ನು ಪ್ರಸ್ತಾಪಿಸಿದರೂ  ಅಭ್ಯಂತರವಿಲ್ಲ. ಕಾಂಗ್ರೆಸ್ ನವರು ಮತಾಂತರ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಮಾಹಿತಿ ಇದೆ. ಇದರಲ್ಲಿ ನನಗೇನೂ ವಿಶೇಷತೆ ಕಾಣುತ್ತಿಲ್ಲ. ಕಾಂಗ್ರೆಸ್ ಎಷ್ಟೇ ಆದರೂ ವಿರೋಧಪಕ್ಷವಲ್ಲವೇ ಎಂದು ವ್ಯಂಗ್ಯವಾಡಿದರು.

ಸದನದಲ್ಲಿ ಕಲಾಪ ಉತ್ತಮವಾಗಿ ನಡೆದರೆ ಸಾರ್ಥಕವಾಗುತ್ತದೆ ಎಂದು ಆಶಿಸಿದರು.

ಡಿಸೆಂಬರ್ 13 ರಂದು ಸಂಜೆ ನಾನು ವಾರಾಣಾಸಿಗೆ ಭೇಟಿ ನೀಡಲಿದ್ದೇನೆ. ಅಲ್ಲಿ ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದಾರೆ. ಅದರಲ್ಲಿ ಪಾಲ್ಗೊಂಡು ನಂತರ ಅಯೋಧ್ಯೆಗೆ ಭೇಟಿ ಕೊಡಲಿದ್ದೇನೆ. 14ರ ಸಂಜೆ ಬೆಳಗಾವಿಗೆ ಹಿಂತಿರುಗುತ್ತೇನೆ ಎಂದು ಸಿಎಂ ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಆರ್‍ಟಿಪಿಸಿಆರ್ ಟೆಸ್ಟ್‍ಗೆ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಪ್ರಮಾಣದಲ್ಲಿ ಶುಲ್ಕ ತೆಗೆದುಕೊಳ್ಳಲಾಗುತ್ತಿದೆ, ಆಧುನಿಕ ಉಪಕರಣಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಮೂಲಕ ಪರೀಕ್ಷೆ ನಡೆಸಬೇಕಾಗಿರುವುದರಿಂದ ಕಾಲಕಾಲಕ್ಕೆ ಶುಲ್ಕ ಪರಿಷ್ಕರಣೆಯಾಗುತ್ತದೆ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡರು.