ಅದ್ದೂರಿ ದಸರಾ ಮಾಡುವ‌ ಚಿಂತನೆ -ಎಚ್.ಸಿ.ಮಹದೇವಪ್ಪ

ಮೈಸೂರು : ಈ‌ ಬಾರಿ ದಸರಾ ಮಹೋತ್ಸವವನ್ನು ಎಲ್ಲರನ್ನು ಆಹ್ವಾನಿಸಿ ಅದ್ದೂರಿಯಾಗಿಯೇ ಮಾಡಬೇಕೆಂದು ಚಿಂತಿಸಲಾಗಿದೆ‌ ಎಂದು ಜಿಲ್ಲಾ‌ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.

ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ,ದಸರಾ ಮಹೋತ್ಸವ ಈ ಬಾರಿ  ಅದ್ಧೂರಿಯಾಗಿರುತ್ತಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದು ಅರ್ಧ ಊಟ ಮಾಡಿ ಎಂದು ಹೇಳಲು ಸಾಧ್ಯನಾ, ಕಷ್ಟಾನೊ, ಸುಖಾನೊ ಮರಿಯಂತು ಹೊಡೆಯುತ್ತೇವೆ ಅಲ್ವಾ, ಹಾಗೆ ಎಲ್ಲರನ್ನು ಕರೆದು ಅದ್ದೂರಿಯಾಗಿಯೇ ಮಾಡೋಣ ಎಂದು ನಗುತ್ತಾ ಉತ್ತರಿಸಿದರು.

ಕೋವಿಡ್ ನಿಂದ ಜನ ತತ್ತರಿಸಿ ಹೋಗಿದ್ದರು. ಈಗ ಎಲ್ಲವೂ ಸುಭೀಕ್ಷವಾಗಿ ನಡೆಯುತ್ತಿದೆ. ಹೊಸ ಸರ್ಕಾರ ಬಂದಿದೆ, ಉತ್ತಮ ಮಳೆಯಾಗಿದೆ. ಎಲ್ಲರೂ ಮನ ಬಿಚ್ಚಿ ಉತ್ತಮ ದಸರಾ ಮಾಡೋಣ ಎಂದು ತಿಳಿಸಿದರು.

ಮೈಸೂರಿನ ಸಂಸ್ಕೃತಿ, ಮಹರಾಜರ ಪರಂಪರೆ ಎಲ್ಲವನ್ನು ಉಳಿಸಿಕೊಂಡು ದಸರಾ ಮಾಡಬೇಕಿದೆ.

ಇದೆಲ್ಲದರ ಬಗ್ಗೆ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಪೂರ್ವ ಮುಂಗಾರು ಮಳೆ ವಿವಿಧ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಬಿದ್ದಿದೆ. ವಾಡಿಕೆಯಂತೆ ಮಾರ್ಚ್ ನಿಂದ ಮೇ ವರಗೆ 198  ಮಿ.ಮೀ ಬೀಳಬೇಕಿತ್ತು. ಈ ಬಾರಿ 207 ಮಿ.ಮೀ ಗೂ ಹೆಚ್ಚು  ಮಳೆಯಾಗಿದೆ ಎಂದು ತಿಳಿಸಿದರು.ಮೈಸೂರಲ್ಲಿ ಮಳೆ ಕೊರತೆಯಾಗಿದೆ.

ಮುಂಗಾರಿನಲ್ಲಿ 3.97 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು,ಈಗ 2.11 ಬಿತ್ತನೆ ಆಗಿದೆ ಎಂದು ‌ಎಚ್.ಸಿ.ಮಹದೇವಪ್ಪ ತಿಳಿಸಿದರು.