ಸ್ತ್ರೀ ಅಂದರೆ ಅಷ್ಟೇ ಸಾಕೆ…

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com

ಉದಾರೀಕರಣ, ಡಿಜಿಟಲೀಕರಣ ತಂತ್ರಜ್ಞಾನದ ಈ ಯುಗದಲ್ಲಿ  ಮಹಿಳೆಯರು  ಜಗತ್ತಿನಾದ್ಯಂತ ಸಾಧನೆಯನ್ನು ತೋರುತ್ತಿದ್ದಾರೆ.

ಅದರೂ ಶೋಷಣೆಯಿಂದ ಮುಕ್ತವಾಗಿಲ್ಲ. 2011ರ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 914 ಹೆಣ್ಣುಮಕ್ಕಳಿದ್ದಾರೆ.

ಹುಟ್ಟಿದ 12 ಮಿಲಿಯನ್ ಹೆಣ್ಣು ಮಕ್ಕಳಲ್ಲಿ, 3 ಮಿಲಿಯನ್ ಮಕ್ಕಳು ತಮ್ಮ 15ನೆಯ ಹುಟ್ಟು ಹಬ್ಬವನ್ನು ಕಾಣುವುದಿಲ್ಲ. 1 ಮಿಲಿಯನ್ ಹೆಣ್ಣು ಮಕ್ಕಳು ಹುಟ್ಟಿದ ಮೊದಲ ವರ್ಷದೊಳಗೇ ಕಾಣೆಯಾಗುತ್ತಾರೆ. ಪ್ರತಿ 6 ನೇ ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಣ್ಣಿಗೆ ಈಗಲೂ ರಕ್ಷಣೆಯಿಲ್ಲ.

ತಾನು ಕಷ್ಟಪಟ್ಟು  ಉಳಿಸಿದ ಉಳಿತಾಯದ ಹಣದಲ್ಲಿ, ಸ್ತ್ರೀ ಶಕ್ತಿ ಸಂಘಗಳಲ್ಲಿ ಇಡುವ,  ಮನೆಯ ಉಪಯೋಗಕ್ಕೆಂದು ಪಡೆಯುವ ಸಾಲದ ಹಣದಲ್ಲಿ ಪಡೆದು ಬಳಸುವ, ತಾನು ಅರ್ಥಿಕ ನೆರವು ನೀಡಬಲ್ಲೆ, ನನಗೂ ಆ ಚೈತನ್ಯ ವಿದೆ ಎಂದೂ ಪ್ರತಿಪಾದಿಸಿದರು ಪುರುಷನ ಅಸ್ತಿತ್ವದಲ್ಲಿ ಮರೆಯಾಗುತ್ತಿದೆ.

 ಇನ್ನು ರಾಜಕೀಯ ಕ್ಷೇತ್ರದಲ್ಲಿ, ಇಂದು ಉನ್ನತ ಮಟ್ಟದ ಹುದ್ದೆಯನ್ನು ಸಂಪಾದಿಸಿದರೂ ಪುರುಷರು ತಮ್ಮ ಅಂಕೆಯಲ್ಲಿ ಇರಬೇಕು ಎಂದೂ ಬಯಸುವ ಮನಸ್ಥಿತಿ ಹೋಗದೆ ಇರುವುದಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಮಹಿಳೆ ತಾಲ್ಲೂಕು, ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಆಯ್ಕೆಗೊಂಡಿದಂತಹ ಸಂದರ್ಭದಲ್ಲಿ ಆಕೆಯ ಹೆಸರಿನಲ್ಲಿ ಅವಳ ಗಂಡ ಎನ್ನಿಸಿಕೊಂಡ ಪ್ರಾಣಿ ಅಧಿಕಾರವನ್ನು ನಡೆಸುತ್ತಿರುವುದೇ ಸಾಕ್ಷಿ.

ಮಹಿಳೆಯು  ಆಟೋ ರಿಕ್ಷಾ, ಬಸ್‍ಗಳನ್ನೂ  ಓಡಿಸುತ್ತಾ, ತಾನು ಹೊಟ್ಟೆ ಹೊರೆಯುತ್ತಾ, ತನ್ನ ಕುಟುಂಬವನ್ನು ನಿರ್ವಹಣೆ ಮಾಡುವ ಸರ್ಕಾರಿ, ಖಾಸಗಿ ಬಸ್‍ಗಳಲ್ಲಿ ನಿರ್ವಾಹಕಿಯಾಗಿ ಅಷ್ಟೇ ಅಲ್ಲ, ಬಸ್‍ಗಳ ಗ್ಯಾರೇಜ್‍ಗಳಲ್ಲಿಯೂ, ವರ್ಕ್‍ಶಾಪ್‍ಗಳಲ್ಲಿಯೂ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ಉದಾಹರಣೆಗಳೂ ಇಂದು ಸಾಕಷ್ಟಿವೆ.

ಕ್ರೀಡಾ ಕ್ಷೇತ್ರದಲ್ಲೂ ಮಹಿಳೆ ತನ್ನ ಕುಟುಂಬದ, ಗ್ರಾಮದ, ರಾಜ್ಯದ, ರಾಷ್ಟ್ರದ ಹೆಸರನ್ನು ಉತ್ತುಂಗಕ್ಕೆ ಕರೆದೊಯ್ದಿರುವುದಕ್ಕೆ ಕಳದ ವರ್ಷ ನಡೆದ ಒಲಂಪಿಕ್ಸ್ ಸಾಕ್ಷಿಯಾಗಿದೆ.

ಕಲ್ಪನಾ ಚಾವ್ಲಾ, ಸುನಿತಾ ವಿಲಿಯಂಸ್ ಅಂತಹವರು ಬಾಹ್ಯಾಕಾಶ ಯಾನ ಮಾಡಿ ಬಂದಿರುವ ಈ ತಂತ್ರಜ್ಞಾನ ಯುಗದಲ್ಲಿಯೂ ಮಹಿಳೆಯರ ಮೇಲೆ ದಿನಕ್ಕೊಂದು ಅತ್ಯಾಚಾರ, ದೌರ್ಜನ್ಯ ಪ್ರಕರಣ ನಡೆಯುತ್ತಿರುವುದು ತುಂಬಾ ನೋವಿನ ವಿಚಾರ ಅನಿಸುತ್ತಿದೆ.

ಮಹಿಳೆಯರ ಅನೇಕ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರಕಿಲ್ಲ. ಮಹಿಳೆ ಈಗಲೂ ಅಬಲೆ. ಶ್ರೇಣೀಕೃತ ವ್ಯವಸ್ಥೆ ಹೆಂಡತಿಯನ್ನು ಕೆಳಗಿಳಿಸಿ ಗಂಡನನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ.

ಹೆಣ್ಣು ಮಕ್ಕಳು ದೈಹಿಕ ಸಾಮಥ್ರ್ಯದ ಜೊತೆಗೆ ಮಾನಸಿಕ ಸದೃಢತೆಯನ್ನೂ ಗಳಿಸಬೇಕು. ಅವಿಭಕ್ತ ಕುಟುಂಬದಲ್ಲಿ ಇಂದಿಗೂ ಮಹಿಳೆಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಸ್ತ್ರೀಯರನ್ನು ಮುಖ್ಯ ವಾಹಿನಿಗೆ ತರಬೇಕು ಎನ್ನುವ ವ್ಯಕ್ತಿಗಳು ಅವಳ ತುಳಿಯುವ ಕೆಲಸ ಮಾಡುತ್ತಿರುತ್ತಾರೆ.

ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ,ಅವಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಹಕ್ಕುಗಳ ಅರಿವಿರ ಬೇಕಾಗುತ್ತದೆ. ಈ ಅರಿವು ಮೂಡಿಸುವ ಜವಾಬ್ದಾರಿ ಪೋಷಕರದ್ದು.

ಮಾನವ ಸಂಪನ್ಮೂಲದಲ್ಲಿ ಸುಮಾರು ಅರ್ಧ ಪಾಲು ಹೆಣ್ಣುಗಳದ್ದು.ಆದರೆ,ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ.

ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿ ಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಹೆಣ್ಣು ಮಕ್ಕಳೆಲ್ಲ ಶಿಕ್ಷಿತರಾದಾಗ ಮಾತ್ರ, ಸಂವಿಧಾನದ ಕಲ್ಪನೆಯ ಭಾರತವನ್ನು ನಾವು ತಲುಪಲು ಸಾಧ್ಯ.

ಇಂಡಿಯನ್ ನ್ಯಾಷನಲ್ ಬಾರ್ ಅಸೋಸಿಯೇಷನ್ ಬಹಿರಂಗಪಡಿಸಿದ 2018ರ ಸಮೀಕ್ಷೆಯ ಪ್ರಕಾರ,

ಸಮೀಕ್ಷೆಯಲ್ಲಿ ಭಾಗಿಯಾಗಿದ್ದ 8,347 ಮಂದಿಯ ಪೈಕಿ ಶೇ 20ರಷ್ಟು ಮಹಿಳೆಯರು ‘ನಾನು ಮತ್ತು ನನ್ನ ಕುಟುಂಬ ಸದಸ್ಯರಲ್ಲಿ ಒಬ್ಬರು ಒಮ್ಮೆ ಅಥವಾ ಎರಡು ಬಾರಿ ಇದನ್ನು ಅನುಭವಿಸಿದ್ದೇವೆ’ ಎಂದು ಹೇಳಿದ್ದಾರೆ. ಆದರೆ ಶೇ 9ರಷ್ಟು ಮಂದಿ ‘ಹಲವು ಬಾರಿ’ ಇಂಥ ಘಟನೆ ಎದುರಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ಶೇ 68ರಷ್ಟು ಜನರು ಇಂತಹ ಘಟನೆಗಳನ್ನು ಹೇಳಿಕೊಳ್ಳುವುದೇ ಇಲ್ಲ. ಬಹುತೇಕರು ಇಂತಹ ಘಟನೆಗಳನ್ನು ಸಹಿಸಿಕೊಳ್ಳುತ್ತಾರೆ. ಲೈಂಗಿಕ ಕಿರುಕುಳಕ್ಕೆ ಒಳಗಾಗುವುದನ್ನು ಕ್ಷುಲ್ಲಕ ಸಮಸ್ಯೆ ಎಂದುಕೊಳ್ಳುತ್ತಾರೆ. ದೂರು ನೀಡಿದರೆ ಪೊಲೀಸ್ ಠಾಣೆ ಅಥವಾ ಕೋರ್ಟ್ಗೆ ಅಲೆದಾಡಬೇಕು, ಸಾಮಾಜಿಕವಾಗಿ ಅಪಮಾನ ಎದರಿಸಬೇಕು, ದುಷ್ಕರ್ಮಿಗಳು ಸೇಡು ತೀರಿಸಿಕೊಳ್ಳುತ್ತಾರೆ ಎಂಬಿತ್ಯಾದಿ ಕಾರಣಗಳಿಂದ ಬಹುತೇಕರು ಇಂತಹ ಘಟನೆಗಳನ್ನು ಅಲ್ಲಿಗೇ ಕೈಬಿಡುತ್ತಾರೆ ಎಂದು ವರದಿ ಅಭಿಪ್ರಾಯಪಟ್ಟಿತ್ತು

ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಎದುರಿಸುತ್ತಿರುವ ಮಹಿಳೆಯರ ನೈಜ ಸಂಖ್ಯೆ ಹೆಚ್ಚೇ ಇದೆ. ಏಕೆಂದರೆ, ಅನೇಕ ಮಹಿಳೆಯರು ಇಂತಹ ಘಟನೆಗಳನ್ನು ಕುಟುಂಬದವರ ಜೊತೆ ಹೇಳಿಕೊಳ್ಳದಿರಬಹುದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಹಿಂಸೆ ಎದುರಿಸುವವರ ಸಂಖ್ಯೆ ಹೆಚ್ಚಿದ್ದರೂ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುವ ಪ್ರಮಾಣ ಕಡಿಮೆ ಎಂದು ವರದಿ ತಿಳಿಸಿದೆ.

ಪ್ರತಿ ವರ್ಷವೂ ಕೂಡ ಹೊಸ ಹೊಸ ಆಯಾಮ ಚಿಂತನೆಗಳನ್ನು ಹೊರತರುವ ಜೊತೆಯಲ್ಲಿ 1996 ಮಹತ್ವದ ವಿಷಯ ಅಥವಾ ಥೀಮ ಆಧಾರದ ಮೇಲೆ ಆಚರಿಸಲಾಗುತ್ತದೆ. ಈ ಮೂಲಕ ಪ್ರತಿವರ್ಷವೂ ಮಹಿಳಾ ಅಭಿವೃದ್ಧಿ ಹಾಗೂ ಸಬಲೀಕರಣಕ್ಕೆ ಪೂರಕವಾದ ಥೀಮ್ ನ್ನು ನಿರ್ಣಯಿಸಿ ಅದರ ಅಭಿವೃದ್ಧಿಗೆ ಶ್ರಮವಹಿಸುತ್ತಿದೆ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಣೆಗೊಂಡು ಬರುತ್ತಿದೆ.

ಮಹಿಳಾ ದಿನಾಚರಣೆ 2022 ರ ಥೀಮ್   ‘ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ವಿಷಯದ ಆಧಾರದ ಮೇಲೆ ಮಹಿಳಾ ದಿನಾಚರಣೆ ಆಚರಿಸಲಾಗ್ತಿದೆ. ನಮ್ಮ ರಾಜ್ಯದಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಪ್ರತಿ ವರ್ಷವೂ ಒಂದೊಂದು ಜಿಲ್ಲೆಯಲ್ಲಿ  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಾರೆ.

ಈ ವರ್ಷ ಕಲಬುರಗಿಯಲ್ಲಿ ಆಚರಣೆ ನಡೆಯುತ್ತದೆ, ಸಾಮರಸ್ಯ, ಸಮಾನತೆ, ನಮ್ಮ ಶಿಲ್ಪಿ ನಾವೇ ಎಂಬ ವಿಷಯಾಧಾರಿತವಾಗಿ  ಸಮಾವೇಶ ನಡೆಸುತ್ತಿದ್ದಾರೆ.

ಕಳೆದ ಎರೆಡುವರ್ಷಗಳಿಂದ ಕೋವಿಡ್ ಯಿಂದಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿತ್ತು. ಅದರಲ್ಲಿ ದುಡಿಯುವ, ಸಾಂಸಾರಿಕ ಜವಾಬ್ದಾರಿ ಹೊತ್ತಿದ್ದ ಮಹಿಳೆಯರು ತಮ್ಮ ಮನೆ ಸಂಸಾರವನ್ನು ಅತ್ಯಂತ ಸಮರ್ಪಕವಾಗಿ ನಡೆಸಿದರು, ಜೊತೆಗೆ ಇದೆ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಮಾನಸಿಕ, ದೈಹಿಕ ದೌರ್ಜನ್ಯಗಳು, ಬಾಲ್ಯ ವಿವಾಹದಂತಹ  ಶತಮಾನಗಳ ಹಿಂದೆ ನೂಕುವ ಅನೇಕ ಪ್ರಕರಣಗಳು ಅತಿ ಹೆಚ್ಚಾಗಿಯೇ ಕಂಡು ಬಂದಾವು, ಜೊತೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮತ್ತೆ ಶುರುವಾಗಿ ಅಲ್ಲಿನ ಮಹಿಳೆಯರ ಸ್ವಾತಂತ್ರ್ಯ, ಶಿಕ್ಷಣ, ಸ್ಥಾನಮಾನ ಎಲ್ಲವನ್ನೂ ಕಿತ್ತುಹಾಕಿ ಆಕೆಯನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸಿ ಇಡುವ ಕೇವಲ ಭೋಗದ ವಸ್ತುವಾಗಿಸು ಕೆಲಸ ನಡೆದಿದೆ, ಇಡೀ ಜಗತ್ತು ಖಂಡಿಸುವುದನ್ನು ಬಿಟ್ಟು ಏನೂ ಮಾಡದ ಸ್ಥಿತಿಯಲ್ಲಿದೆ, ಮತ್ತೆ ಆಕೆಯನ್ನು ಗುಲಾಮತನಕ್ಕೆ ನೂಕಿದೆ.

ಮಯನ್ಮಾರ್ ನಲ್ಲಿ ಸೇನಾ ಆಡಳಿತ ಮಾನವ ಹೋರಾಟಗಾರ್ತಿ ಸೂಕಿಯನ್ನು ಬಂಧಿಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಯುಕ್ರೇನ್ ಮತ್ತು ರಷ್ಯಾ ಯುಧ್ದ ದಿಂದ ಅಲ್ಲಿನ ಮಹಿಳೆಯರ ಸ್ಥಿತಿಯ ಬಗ್ಗೆ ಜಗತ್ತು ಆತಂಕಕ್ಕೆ ಈಡಾಗಿದೆ. ಇವೆಲ್ಲವುಗಳನ್ನು ಮೀರಿ ಬದುಕು ಕಟ್ಟಿಕೊಳ್ಳವ ಅಕೆಯ ಮನಸ್ಥಿತಿಗೆ  ಸಾವಿರ ಕೋಟಿ ನಮನಗಳು,

ಜಗತ್ತಿನ ಎಲ್ಲ ಮಹಿಳೆಯರಿಗೆ  ಮಹಿಳಾ ದಿನಾಚರಣೆಯ ಶುಭಾಶಯಗಳು.