ಹುಬ್ಬಳ್ಳಿ: ಕಾಂಗ್ರೆಸ್ ಗೆ ಬಿಜೆಪಿಯಿಂದ ಕೇವಲ ಒಂದಿಬ್ಬರಲ್ಲ ಅನೇಕ ನಾಯಕರು ಬರಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಬಿಜೆಪಿಯಲ್ಲಿನ ವೈಫಲ್ಯತೆಗೆ ಬೇಸತ್ತು ಹಲವರು ಕಾಂಗ್ರೆಸ್ ಗೆ ಬರಲು ಮುಂದಾಗಿದ್ದಾರೆ ಎಂದು ಹೇಳಿದರು.
ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಸೋಮಶೇಖರ ಕಾಂಗ್ರೆಸ್ ಗೆ ಸೇರ್ಪಡೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಇನ್ನೂ ಅನೇಕರು ಬರಲು ಇಚ್ಚಿಸಿದ್ದಾರೆ ಎಂದು ತಿಳಿಸಿದರು.
ಮಹದಾಯಿ ಕಾಮಗಾರಿಗೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉತ್ತರಿಸಬೇಕು. ಇದೇ ಮಹದಾಯಿ ನೀರನ್ನು ತಂದೇ ಬಿಟ್ಟೆವು ಎಂಬ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಮಾಡಿದ್ದರು,ಅದ್ಯಾಕೆ ಆಗಲಿಲ್ಲ ಎಂದು ನೀವೇ ಪ್ರಶ್ನಿಸಿ ಎಂದರು.
ಈ ತಿಂಗಳು ಕಳೆಯಲಿ ನಂತರ ನೋಡಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆಗಳು ಬರಲಿವೆ ಕಾದು ನೋಡಿ ಎಂದು ಶೆಟ್ಟರ್ ಅವರ ಫ್ಲಡ್ ಗೇಟ್ ಓಪನ್ ಆಗಲಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು ಡಿಕೆಶಿ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿ, ಯಾವಾಗ ಬೇಕಂತೆ ರಾಜೀನಾಮೆ ಕೊಡೋಣ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಶಾಲು ಹಾಕಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದರು. ಅವರನ್ನು ಯಾಕೆ ಬಂಧನ ಮಾಡಲಿಲ್ಲ. ಬಿಜೆಪಿಯವರಿಗೆ ಬದ್ಧತೆ ಇದೆಯಾ ಎಂದು ಕಾರವಾಗಿ ಪ್ರಶ್ನಿಸಿದರು.