ಬೆಂಗಳೂರು: ಅನಾರೋಗ್ಯದಿಂದ ರಾಜ್ಯಸಭೆ ಕಲಾಪದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಈ ಮಾಹಿತಿ ನೀಡಿದ್ದಾರೆ.
ಅಲ್ಲದೆ, ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಮಹತ್ವದ ಸಭೆಯನ್ನು ಆಯೋಜಿಸಲಾಗಿದ್ದು, ಸೊಂಟದ ನೋವಿನ ಕಾರಣ ಆ ಸಭೆಯಲ್ಲೂ ಬಹಳ ಹೊತ್ತು ಕೂರಲು ತಮ್ಮಿಂದ ಆಗಲಿಲ್ಲ, ಸ್ವಲ್ಪ ಸಮಯದ ನಂತರ ವೈದ್ಯರಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನೋವು ಕಡಿಮೆಯಾದರೆ ಬುಧವಾರ ಕಲಾಪದಲ್ಲಿ ಭಾಗಿಯಾಗುತ್ತೇನೆ ಎಂದೂ ಕೂಡಾ ಹೇಳಿದ್ದಾರೆ.
ವಿಶ್ರಾಂತಿ ನಡುವೆಯೇ ದೇವೇಗೌಡರು ಮನೆಯಲ್ಲಿಯೇ ಟೀವಿಯಲ್ಲಿ ರಾಜ್ಯಸಭೆ ಕಲಾಪದ ನೇರ ಪ್ರಸಾರ ವೀಕ್ಷಿಸಿದ್ದಾರೆ.