ಅಪ್ಪು ನೆನೆದು ಕಣ್ಣೀರಾದ ಶಿವಣ್ಣ, ರಾಘಣ್ಣ

ಬೆಂಗಳೂರು: ನಟರುಗಳಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್  ಅಪ್ಪು ಅವರನ್ನು ನೆನೆದು  ಕಣ್ಣೀರು ಹಾಕಿದ್ದು ಕಂಡು ಸಭಿಕರ ಕಣ್ಣಾಲಿಗಳು ತುಂಬಿಬಂದಿತು.

ಭಾನುವಾರ ಸಂಜೆ ಅರಮನೆ ಮೈದಾನದಲ್ಲಿ ನಡೆದ‘ಜೇಮ್ಸ್’ ಪ್ರಿ-ರಿಲೀಸ್ ಇವೆಂಟ್ ನಲ್ಲಿ  ಪುನೀತ್ ರಾಜ್‍ಕುಮಾರ್ ನೆನೆದು ಇಬ್ಬರು ಅಣ್ಣಂದಿರು ಒಬ್ಬರನ್ನೊಬ್ಬರು ‌ಅಪ್ಪಿ ದುಃಖಿಸಿದರು.

ವೇದಿಕೆಗೆ ಬಂದ ಕೂಡಲೇ ರಾಘವೇಂದ್ರ ರಾಜ್​ ಕುಮಾರ್  ಎಮೋಷನಲ್ ಆದರು.  ಎಮೋಶನಲ್ ಆಗಬಾರದು ಅಂದುಕೊಳ್ಳುತ್ತೇನೆ ಆದರೆ  ಆಗೇಬಿಡುತ್ತದೆ ಎಂದು ಮರುಗಿದರು.

ಚೆನ್ನಾಗಿ ಓಡುತ್ತಿದ್ದ ಗಾಡಿ ನಿಲ್ಲಿಸಿದ್ಯಾಕೆ? ನಂಗೆ ಹಾರ್ಟ್ ಅಟ್ಯಾಕ್ ಆಗಿತ್ತು.. ಸ್ಟ್ರೋಕ್ ಆಗಿತ್ತು. ಆದರೂ ಇದ್ದೇನೆ. ಇನ್ನು ಮುಂದೆ ನನ್ನಿಂದ ಆಗುವುದಿಲ್ಲ, ಅವನನ್ನು ಹುಡುಕಿಕೊಂಡು ಹೋಗುತ್ತೇನೆ ಎಂದು  ಭಾವುಕರಾದರು ಇದರಿಂದ  ಅಭಿಮಾನಿಗಳ ಹೃದಯಗಳೂ ಭಾರವಾದವು.

ನಂತರ ವೇದಿಕೆಗೆ ಬಂದ ಶಿವರಾಜಕುಮಾರ್, ತಮ್ಮನ ತಬ್ಬಿಕೊಂಡು ಸಮಾಧಾನ ಹೇಳುತ್ತಾ ಕಣ್ಣೀರಿಟ್ಟರು.

ಈ ವೇಳೆ ಮಾತನಾಡಿದ ಶಿವರಾಜ್​ಕುಮಾರ್ ರಾಘು ಮಾತನಾಡಿದ್ದು ನೋವು ಜಾಸ್ತಿಯಾಯಿತು. ಇವರಿಬ್ಬರೂ ನನಗಿಂತ ಚಿಕ್ಕವರು. ನಾನು ಹೇಗೆ ಇದನ್ನೆಲ್ಲಾ ನೋಡುತ್ತಾ ಇರಬೇಕು ಎಂದು ನೋವಿನಲ್ಲೇ ಪ್ರಶ್ನಿಸಿದರು.

ಹೊರಗಿನಿಂದ ನೋಡುವುದಕ್ಕೆ ನಗುತ್ತಾ ಇರುತ್ತೇವೆ. ಆದರೆ ಬಹಳ  ನೋವಾಗುತ್ತದೆ. ಅಪ್ಪ ಅಮ್ಮನ ಜತೆಗೆ ಚಿಕ್ಕವನು ಹೋಗಿದ್ದು ಬಹಳ ನೋವು ತಂದಿದೆ. ಆದರೆ ಇಂತಹ ತಮ್ಮನನ್ನು ಪಡೆಯಲು ತುಂಬಾ ಪುಣ್ಯ ಮಾಡಿದ್ದೆವು ಎಂದು ದುಃಖಿಸುತ್ತಲೇ ಹೇಳಿದರು.

ಅಪ್ಪು ಜತೆ ನಟಿಸೋ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸ್ಕ್ರಿಪ್ಟ್ ಕೂಡ ಕೇಳಿದ್ದೆವು ಎಂದು ಶಿವಣ್ಣ ಸ್ಮರಿಸಿದರು.

ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಮುಂದೆ ಚಿತ್ರ ರಿಲೀಸ್ ಆದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಶಕ್ತಿಧಾಮಕ್ಕೆ ಬಜೆಟ್​ನಲ್ಲಿ ಅನುದಾನ ಘೋಷಿಸಿದಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಿವರಾಜ್ ಕುಮಾರ್ ಧನ್ಯವಾದ ಹೇಳಿದರು.