ಅಪರಾಧ ಹಿನ್ನೆಲೆಯ ಅಭ್ಯರ್ಥಿಯ ವಿವರ 48 ಗಂಟೆಯೊಳಗೇ ಸಾರ್ವಜನಿಕವಾಗಿ ಪ್ರಕಟಿಸಲು ಸುಪ್ರೀಂ ಆದೇಶ

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ರಾಜಕೀಯದಲ್ಲಿ ಅಪರಾಧ ಹಿನ್ನೆಲೆಯನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.

ಚುನಾವಣಾ ಕಣಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸುವ ವ್ಯಕ್ತಿಯ ಕ್ರಿಮಿನಲ್ ಹಿನ್ನೆಲೆಯನ್ನು 48 ಗಂಟೆಯೊಳಗೇ ಸಾರ್ವಜನಿಕರ ಮುಂದೆ ಇಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದ್ದು, ಈ ಪ್ರಕ್ರಿಯೆ ಕಡ್ಡಾಯ ಹಾಗೂ ಯಾವ ಕಾರಣಕ್ಕೂ ತಪ್ಪಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

2020 ಫೆಬ್ರವರಿಯಲ್ಲಿ ಇದೇ ರೀತಿ ನೀಡಿದ್ದ ಆದೇಶಕ್ಕೆ ಮಾರ್ಪಾಡು (ಆದೇಶದ ಪ್ಯಾರಾ 4.4) ತಂದಿರುವ ನ್ಯಾಯಾಲಯವು ಈ ಆದೇಶ ನೀಡಿದ್ದು, ಚುನಾವಣೆಗೂ ಮೊದಲೇ ಅಭ್ಯರ್ಥಿಗಳ ಅಪರಾಧ ಚರಿತ್ರೆಯನ್ನು ಆಯಾ ವ್ಯಕ್ತಿ ಅಭ್ಯರ್ಥಿಯಾಗಿ ಪ್ರಕಟಗೊಂಡ 48 ಗಂಟೆಗಳ ಒಳಗಾಗಿ ಸಾರ್ವಜನಿಕಗೊಳಿಸಬೇಕು, ಇಲ್ಲವೇ ಅಥವಾ ನಾಮಪತ್ರ ಸಲ್ಲಿಕೆಯ ದಿನಕ್ಕೆ ಎರಡು ವಾರಕ್ಕೆ ಮುನ್ನ ಪ್ರಕಟಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಚುನಾವಣಾ ರಾಜಕೀಯದಲ್ಲಿ ಹೆಚ್ಚುತ್ತಿರುವ ಅಪರಾಧೀಕರಣವನ್ನು ಹತ್ತಿಕ್ಕಲು ನ್ಯಾಯಾಲಯ ನೀಡಿರುವ ಈ ಆದೇಶವನ್ನು ಐತಿಹಾಸಿಕ ಎಂದು ಬಣ್ಣಿಸಲಾಗಿದೆ.

2020ರಲ್ಲಿ ಬಿಹಾರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವಾರು ಅಭ್ಯರ್ಥಿಗಳು ಕಾನೂನು ವ್ಯಾಪ್ತಿಯಿಂದ ತಪ್ಪಿಸಿಕೊಂಡು ತಮ್ಮ ಅಪರಾಧ ವಿವರಗಳನ್ನು ಬಹಿರಂಗಗೊಳಿಸಿರಲಿಲ್ಲ. ಈ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಶೇ.. 17ರಷ್ಟು ಹೆಚ್ಚಾಗಿರುವುದನ್ನು ಗಮನಿಸಿತಲ್ಲದೆ, ಅಪರಾಧ ಕೃತ್ಯಗಳ ವಿವರಗಳನ್ನು ಮುಚ್ಚಿಟ್ಟ ಜನ ಪ್ರತಿನಿಧಿಗಳ ಬಗ್ಗೆ ಅತೃಪ್ತಿಯನ್ನು ಹೊರಹಾಕಿತು.

ಅಭ್ಯರ್ಥಿಯ ಅಪರಾಧ ವಿವರಗಳನ್ನು ಪಕ್ಷಗಳ ವೆಬ್ಸೈಟ್ನಲ್ಲಿ ಸಮಗ್ರವಾಗಿ ಪ್ರಕಟಿಸಲೇಬೇಕು ಎಂದು ಆದೇಶಿಸಿರುವ ನ್ಯಾಯಾಲಯವು, ಇದನ್ನು ತಪ್ಪಿಸುವ ಹಾಗೆಯೇ ಇಲ್ಲ ಎಂದು ಹೇಳಿದೆ.

ಈ ಬಗ್ಗೆ ಸುಪ್ರೀಂ ಕೋರ್ಟ್ ಹಿಂದಿನ ಆದೇಶದ ಅನ್ವಯ ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಳಿಗೂ ಸೂಚನೆ ನೀಡಿತ್ತು. ಆದರೂ ಅನೇಕ ಅಭ್ಯರ್ಥಿಗಳ ಅಪರಾಧ ವಿವರಗಳನ್ನು ರಾಜಕೀಯ ಪಕ್ಷಗಳು ಬಹಿರಂಗಗೊಳಿಸಿರಲಿಲ್ಲ.