6ರಿಂದ ಯುವದಸರಾ ಆರಂಭ: ವ್ಯಾಪಕ ಪೊಲೀಸ್ ಬಂದೋಬಸ್ತ್-ವಿಷ್ಣುವರ್ಧನ್

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ಸಿಕ್ಕಿದ್ದು ಅಕ್ಟೋಬರ್ 6ರಿಂದ ಯುವದಸರಾ ಆರಂಭವಾಗಲಿದೆ, ಹಾಗಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಯುವ ದಸರಾ ವಿಶೇಷಾಧಿಕಾರಿ ಹಾಗೂ ಎಸ್ ಪಿ ವಿಷ್ಣುವರ್ಧನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿಷ್ಣುವರ್ಧನ್, ಮೈಸೂರು ಹೊರವಲಯದ ಉತ್ತನಹಳ್ಳಿ ಬಳಿ ವಿಶಾಲವಾದ ಮೈದಾನದಲ್ಲಿ ಯುವ ದಸರಾ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಅಕ್ಟೋಬರ್ 6ರಂದು ಬಾಲಿವುಡ್ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್ ಮತ್ತು ತಂಡದಿಂದ ಸಂಗೀತ ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಅ. 7ರಂದು ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ತಂಡದವರಿಂದ ಸಂಗೀತ ಮನರಂಜನೆ, ಅ. 8 ಬಾಲಿಹುಡ್ ಖ್ಯಾತಿಯ ರಾಪರ್ ಬಾದ್ ಷಾ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ಅ. 9ರಂದು ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ಅ. 10 ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಯುವ ದಸರಾ ವೀಕ್ಷಣೆಗೆ ಪ್ರತಿನಿತ್ಯ ಸುಮಾರು 50 ರಿಂದ 70 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಹಾಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ.

ಮೈಸೂರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ.

4 ಎಸ್ ಪಿ., 12 ಡಿ ಎಸ್ ಪಿ., 37 ಸಿಪಿಐ, 76 ಪಿ ಎಸ್ ಐ., 110 ಎ ಎಸ್ ಐ., 600 ಪೊಲೀಸರು, 100 ಮಹಿಳಾ ಪೊಲೀಸ್ ಸಿಬ್ಬಂದಿ, 300 ಹೋಂ ಗಾರ್ಡ್ ಗಳು ಸೇರಿದಂತೆ 1239 ಮಂದಿ ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಇದರ ಜೊತೆಗೆ 6 ಕೆಎಸ್ ಆರ್ ಪಿ., 10 ಡಿಎಆರ್., 10 ಎ ಎಸ್ ಸಿ., 4 ಕ್ಯು ಆರ್ ಟಿ, 2 ಆಂಬ್ಯುಲೆ‌ನ್ಸ್, 2 ಅಗ್ನಿಶಾಮಕ ದಳದ ವಾಹನ, ಒಂದು ಮೊಬೈಲ್ ಕಮಾಂಡೋ ವಾಹನ ನಿಯೋಜನೆ‌ ಮಾಡಲಾಗಿದೆ ಎಂದು ಎಸ್ ಪಿ ವಿಷ್ಣುವರ್ಧನ್ ವಿವರಿಸಿದರು.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವನ್ಯಜೀವಿ ಹಾವಳಿ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ವಿವಿಐಪಿ, ಗಣ್ಯರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳು ಅಳವಡಿಕೆ ಮಾಡಲಾಗಿದೆ. ಪ್ರತಿ ಕಾರ್ಯಕ್ರಮಕ್ಕೂ 5 ಸಾವಿರ ಟಿಕೆಟ್ ಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ‌ ನೀಡಿದರು.