ಸಿಎಂ ಸಿದ್ದರಾಮಯ್ಯ ಅವರಿಗೆ ಆರ್.ಅಶೋಕ್ ತಿರುಗೇಟು

ಬೆಳಗಾವಿ: ಮುಸ್ಲಿಮರಿಗೆ ದೇಶದ ಸಂಪತ್ತು ಹಂಚುತ್ತೇನೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಬೇಕಿದ್ದರೆ ಕಾಂಗ್ರೆಸ್ ಪಕ್ಷದ ಸಂಪತ್ತು ಇದ್ದರೆ ಹಂಚಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.

ಬೆಳಿಗ್ಗೆ ಸುವರ್ಣಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಅಂದರೆ ಸಿದ್ದರಾಮಯ್ಯನವರಿಗೆ ಬಹಳ ಪ್ರೀತಿ ಎಂದು ಮೂದಲಿಸಿದರು.

ಅವರ ಹೇಳಿಕೆ ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಟಿಪ್ಪು ಮೇಲೆ ಅತಿಯಾದ ಪ್ರೀತಿ ತೋರಿಸಿ ಹಿಂದೆ ಏನಾಯ್ತು ಎಂಬುದನ್ನು ಅವರು ಮನಗಾಣಬೇಕು ಎಂದು ಎಚ್ಚರಿಸಿದರು.

ಹಿಂದೂಗಳನ್ನ ಎರಡನೇ ದರ್ಜೆಯ ಪ್ರಜೆಗಳ ರೀತಿ ನೋಡುತ್ತಿದ್ದಾರೆ. ಎಲ್ಲರಿಗೂ ಸಮಾನತೆ ಇರಬೇಕು. ಟಿಪ್ಪು ಜಯಂತಿ, ಶಾದಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ ಸಹಾಯ ಈ ರೀತಿ ಕಾರ್ಯಕ್ರಮಗಳನ್ನ ತಂದರು. ಮುಸ್ಲಿಂಮರನ್ನ ವೋಟಿನ ಗಾಳವಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಶೋಕ್ ಆರೋಪಿಸಿದರು.

ಬಿಜೆಪಿ ಕಾರ್ಯಕರ್ತನ ಮೇಲೆ ಚಾಕು ಇರಿತ ಪ್ರಕರಣ ಕುರಿತು ಮಾತನಾಡಿದ ಅಶೋಕ್,  ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದು ಪಕ್ಕಾ ಎಂದು ಆರೋಪಿಸಿದರು.