ಬೆಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ ಸ್ಪೋಟದ ಹಿಂದೆ ಉಗ್ರರ ಕೈವಾಡವಿರುವ ಶಂಕೆ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಕರೆಸಿಕೊಂಡು ರಾಜ್ಯದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ತತ್‍ಕ್ಷಣವೇ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದ್ದಾರೆ.
ರಾಜಧಾನಿ ಬೆಂಗಳೂರು, ಮಂಗಳೂರು, ಉಡುಪಿ, ಕಾರವಾರ, ಮಡಿಕೇರಿ, ಶಿವಮೊಗ್ಗ, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಮತ್ತಿತರ ಕಡೆ ಹೈ ಅಲರ್ಟ್ ಘೋಷಣೆ ಮಾಡಬೇಕೆಂದು ಆದೇಶಿಸಿದ್ದಾರೆ.
ಪ್ರವೀಣ್ ಸೂದ್ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್, ಗುಪ್ತಚರ ವಿಭಾಗ, ಆಂತರಿಕ ಭದ್ರತಾ ವಿಭಾಗ ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಬಂದರು, ಕಾರವಾರ ಬಂದರು, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಮೈಸೂರು ಅರಮನೆ ಹಾಗೂ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳು ಮತ್ತಿತರ ಕಡೆ ಭದ್ರತೆಯನ್ನು ಒದಗಿಸಬೇಕು ಎಂದು ಸೂಚಿಸಿದ್ದಾರೆ.
ಎಲ್ಲ ವಲಯ ಐಜಿಪಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಬಿಗಿ ಕ್ರಮ ತೆಗೆದುಕೊಳ್ಳಬೇಕು, ಅನುಮಾನಸ್ಪದವಾಗಿ ತಿರುಗಾಡುವ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು
ಯಾವುದೇ ಅವಘಡಗಳಿಗೆ ಅವಕಾಶ ಕೊಡದೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಬೊಮ್ಮಾಯಿ ಪ್ರವೀಣ್‍ಸೂದ್‍ಗೆ ಸೂಚಿಸಿದ್ದಾರೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ: ಆರೋಪಿ ಮೈಸೂರಿನಲ್ಲಿ ವಾಸವಾಗಿದ್ದ!
ಮೈಸೂರು: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಮೇಟಗಳ್ಳಿ ಠಾಣೆಗೆ ಭೇಟಿ ನೀಡಿ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು.
ಆರೋಪಿಯು ತನ್ನ ಹೆಸರನ್ನು ಪ್ರೇಮ್ ರಾಜ್ ಎಂದು ಹೇಳಿಕೊಂಡಿದ್ದ.
ಮೇಟಗಳ್ಳಿಯ ಲೋಕರಂಜನ್ ನಗರದಲ್ಲಿ ಮನೆ ಬಾಡಿಗೆಗೆ ಪಡೆದಿದ್ದ.ಆದಾರ್ ಕಾರ್ಡ್ ನಲ್ಲಿ ಹುಬ್ಬಳ್ಳಿಯ ವಿಳಾಸವಿದೆ.
ಈ ಬಗ್ಗೆ ಮನೆ ಮಾಲೀಕರನ್ನು ವಿಚಾರಿಸಿದಾಗ ಅವರು ಆತಂಕಕ್ಕೆ ಒಳಗಾಗಿದ್ದಾರೆ.ತಮ್ಮ ಮನೆಯಲ್ಲೇ ಉಗ್ರ ಅಡಗಿದ್ದ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಅವರು ಆಘಾತಗೊಂಡಿದ್ದಾರೆ.
ಬಾಡಿಗೆಗೆ ಇದ್ದವ ಪ್ರೇಮ್ ರಾಜ್ ಎಂದು ಹೆಸರು ಹೇಳಿದ್ದ.1800 ರೂಗೆ ಬಾಡಿಗೆ ಕೊಡಿತ್ತಿದ್ದ.ಕನ್ನಡ ಮಾತನಾಡುತ್ತಿದ್ದ.ಬೆಳಗ್ಗೆ ಮನೆಯಿಂದ ಹೊರಹೋದರೆ ರಾತ್ರಿ ಬರುತ್ತಿದ್ದ.ಹಾಗಾಗಿ ಆತನ ಬಗ್ಗೆ ಬೇರೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ಮೈಸೂರು ಪೊಲೀಸರು ಆರೋಪಿ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಿ ಮಂಗಳೂರು ಪೊಲೀಸರಿಗೆ ನೆರವಾಗಿದ್ದಾರೆ.
ಮೈಸೂರಿನಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.