ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜತೆ ಅಡ್ಜೆಸ್ಟ್ ಮಾಡಿಕೊಂಡಿದ್ದರು ಎಂದು ಅಪಪ್ರಚಾರ ಮಾಡಿದ್ದ ರಾಜ್ಯ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪಕ್ಷವು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಒಳ ರಾಜಕೀಯ ಗೊತ್ತಿದೆ, ಬಿಜೆಪಿ ,ಕಾಂಗ್ರೆಸ್ ಭಾಯಿ ಭಾಯಿ ಎಂದು ವ್ಯಂಗ್ಯವಾಡಿದೆ.
135 ಸೀಟುಗಳ ಅಮಲಿನಲ್ಲಿ ತೇಲುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷ, ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿತು ಎಂಬಂತೆ ಹುಚ್ಚಾಟ ಆಡುತ್ತಿದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಕಂಡ ಅತಿ ಅಪಮಾನಕರ ಸೋಲನ್ನು ಮರೆತು,ಈಗ ಜಗತ್ತನ್ನೇ ಗೆದ್ದೆ ಎಂದು ಬೀಗುತ್ತಿರುವುದು ವಿಕೃತಿ ಎಂದು ಕಿಡಿಕಾರಿದೆ.
ಜಾತಿ,ಧರ್ಮ ಒಡೆದು,ಮನಸ್ಸುಗಳ ನಡುವೆ ದ್ವೇಷದಬೆಂಕಿ ಭಿತ್ತಿ, ಪರಸ್ವರ ವ್ಯವಹಾರದ ಪರಿಣಾಮ ಈ 135 ಸೀಟು.
ಶಿಗ್ಗಾಂವಿ, ವರುಣಾ, ಶಿಕಾರಿಪುರ, ಚಿಕ್ಕಮಗಳೂರು, ಕನಕಪುರ ಸೇರಿ ಆಯ್ದ ಜಿಲ್ಲೆಗಳಲ್ಲಿ ನಡೆದ ಅಡ್ಜಸ್ಟ್ ಮೆಂಟ್ ಎರಡೂ ರಾಷ್ಟ್ರೀಯ ಪಕ್ಷಗಳ ನೀತಿಗೆಟ್ಟ ರಾಜಕಾರಣಕ್ಕೆ ಹಿಡಿದ ಕನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯ ಸಿ.ಟಿ ರವಿ, ಸಂಸದ ಪ್ರತಾಪ್ ಸಿಂಹ, ಸಚಿವ ಡಾ.ಜಿ.ಪರಮೇಶ್ವರ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುವ ದಮ್ಮು, ತಾಕತ್ತು ಎರಡೂ ಪಕ್ಷಗಳ ನಾಯಕರಿಗೆ ಇದೆಯಾ ಎಂದು ಪ್ರಶ್ನಿಸಿದೆ
ಮಂಡ್ಯ ಜಿಲ್ಲೆ ಒಂದರಲ್ಲಿಯೇ ಪ್ರತಿ ಕ್ಷೇತ್ರಕ್ಕೆ ಕಮ್ಮಿ ಎಂದರೂ 10-20 ಕೋಟಿ ವೆಚ್ಚ ಮಾಡಿ ಮತ ವಿಭಜನೆ ಮಾಡಿದ್ದು ಯಾರು ಎಂದು ಜೆಡಿಎಸ್ ಪ್ರಶ್ನಿಸಿದೆ.
ಅಡ್ಜಸ್ಟ್ ಮೆಂಟ್ ಇಲ್ಲದಿದ್ದರೆ ಕಳೆದ ಬಾರಿ ಡಾ.ಜಿ.ಪರಮೇಶ್ವರ ಅವರು ಕೊರಟಗೆರೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿಯಲ್ಲಿ ಸೋತಿದ್ದೇಕೆ ದಲಿತೋದ್ಧಾರ, ಆಹಿಂದೋದ್ಧಾರ ಎನ್ನುವರು, ಈ ಇಬ್ಬರನ್ನು ಸೋಲಿಸಲು ಹೂಡಿದ ತಂತ್ರಗಳ ಬಗ್ಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಧೈರ್ಯ ಈ ಕಾಂಗ್ರೆಸ್ ಗೆ ಇದೆಯಾ ಎಂದು ಸವಾಲು ಹಾಕಿದೆ.
ಆಪರೇಶನ್ ಕಮಲ,ಇಬ್ಬರು ನಾಯಕರ ಜಂಟಿ ಆಪರೇಶನ್ ಎನ್ನುವುದು ಯಾರಿಗೆ ಗೊತ್ತಿಲ್ಲ ಇದರ ಅಸಲಿ ಕಥೆ ಗೊತ್ತಿಲ್ಲದಷ್ಟು ಮುಗ್ಧರಾ ಬಿಜೆಪಿ,ಕಾಂಗ್ರೆಸ್ ಕಾರ್ಯಕರ್ತರು ಎಂದು ಜೆಡಿಎಸ್ ಕಾರವಾಗಿ ಪ್ರಶ್ನೆಗಳ ಸುರಿಮಳೆಗೈದಿದೆ.