ಮಧ್ಯಪ್ರದೇಶ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಗ್ರಾಮ ಒಂದರಲ್ಲಿ ವ್ಯಕ್ತಿ ಮತ್ತು ಇಬ್ಬರು ಅಪ್ರಾಪ್ತ ಹುಡುಗರು ಸೇರಿ 17 ವರ್ಷದ ಬುಡಕಟ್ಟು ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಆಕೆಯ ಮುಖವನ್ನು ಹಲ್ಲುಗಳಿಂದ ಮನಬಂದಂತೆ ಕಚ್ಚಿ ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ರೇವಾ ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಸಂಬಂಧ ತಡವಾಗಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ವರ್ಮಾ ತಿಳಿಸಿದ್ದಾರೆ.
ಬಾಲಕಿ ತನ್ನ ಸೋದರಸಂಬಂಧಿಯೊಂದಿಗೆ ಜಾತ್ರೆಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಆರೋಪಿಗಳು ಆಕೆಯನ್ನು ಅಪಹರಿಸಿ ಅರಣ್ಯಕ್ಕೆ ಒಯ್ದು ಅಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳು ಬಾಲಕಿಯ ಮುಖವನ್ನು ಕಚ್ಚಿ, ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ದ್ದಾರೆ.
ಸಂತ್ರಸ್ತೆ ಕಷ್ಟಪಟ್ಟು ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡು ಬಂದಿದ್ದಾಳೆ.
ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಪ್ರಮುಖ ಆರೋಪಿಗೆ 22 ವರ್ಷ, ಉಳಿದ ಇಬ್ಬರ ವಯಸ್ಸು 16 ಮತ್ತು 17 ವರ್ಷಗಳೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು,ಅತ್ಯಾಚಾರ ವಾಗಿರುವುದು ದೃಢಪಟ್ಟಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೂವರು ಆರೋಪಿಗಳು ಮತ್ತು ಸಂತ್ರಸ್ತೆ ಒಂದೇ ಬುಡಕಟ್ಟು ಸಮುದಾಯಕ್ಕೆ ಸೇರಿದವರು.
ಘಟನೆಯ ನಂತರ, ಬಾಲಕಿಯ ಕುಟುಂಬ ಸಂತ್ರಸ್ತೆಯನ್ನು ಮದುವೆಯಾಗಲು ಪ್ರಮುಖ ಆರೋಪಿಯನ್ನು ಕೇಳಿಕೊಂಡಿತು, ಆದರೆ ಆತ ನಿರಾಕರಿಸಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದಾರೆ.