ಮೈಸೂರು:ಬಾಳೆಯ ತೋಟದಲ್ಲಿ ಮಹಿಳೆ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಅತ್ಯಾಚಾರ ಶಂಕೆ ವ್ಯಕ್ತವಾಗಿದೆ.
ನಂಜನಗೂಡು ತಾಲೂಕು ಗಟ್ಟವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.ಶಿವಪುರ ಗ್ರಾಮದ ನಿವಾಸಿ ಶಶಿಕಲಾ (38) ಕೊಲೆಯಾದ ದುರ್ದೈವಿ.
ಗಟ್ಟವಾಡಿ ಗ್ರಾಮದ ನಂಜುಂಡಪ್ಪ ಎಂಬುವರಿಗೆ ಸೇರಿದ ಬಾಳೆ ತೋಟದಲ್ಲಿ ಅನುಮಾನಾಸ್ಪದವಾಗಿ ಶಶಿಕಲಾ ಮೃತದೇಹ ಪತ್ತೆಯಾಗಿದ್ದು,ತೋಟದ ಮಾಲೀಕನೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆಂದು ಮೃತಳ ಸಹೋದರ ಮಹದೇವಯ್ಯ ಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಕ್ಷಣ ಆರೋಪಿ ನಂಜುಂಡಪ್ಪನನ್ನು ಬಂಧಿಸಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಾಲ್ಕು ವರ್ಷಗಳ ಹಿಂದೆ ಶಿವಪುರ ಗ್ರಾಮದ ನಾಗರಾಜ್ ಎಂಬಾತನನ್ನ ಶಶಿಕಲಾ ವಿವಾಹವಾಗಿದ್ದರು,ಕರೋನಾದಿಂದ ನಾಗರಾಜ್ ಮೃತಪಟ್ಟಿದ್ದಾರೆ.
ನಂತರ ಶಶಿಕಲಾ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು,ಅದಾದನಂತರ ನಂಜುಂಡಪ್ಪ ರವರ ಬಾಳೆ ತೋಟದಲ್ಲಿ ಕೆಲಸಕ್ಕೆ ಸೇರಿದ್ದರು.
ಇದೇ 23 ರಂದು ಕೆಲಸಕ್ಕೆ ಹೋದ ಶಶಿಕಲಾ ಮನೆಗೆ ಹಿಂದಿರುಗಿರಲಿಲ್ಲ.ತಂದೆ ಈ ಬಗ್ಗೆ ಮಗ ಮಹದೇವಯ್ಯ ಗೆ ತಿಳಿಸಿದ್ದಾರೆ.
ಇದೇ ವೇಳೆ ನಂಜುಂಡಪ್ಪ ಫೋನ್ ಮಾಡಿ ನಿನ್ನ ತಂಗಿ ಬಾಳೆ ತೋಟದಲ್ಲಿ ನೇಣು ಹಾಕಿಕೊಂಡಿದ್ದಾಳೆಂದು ತಿಳಿಸಿದ್ದಾನೆ.
ಸ್ಥಳಕ್ಕೆ ಹೋದಾಗ ಬಾಳೆಗಿಡದಲ್ಲಿ ಶಶಿಕಲಾ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದೆ,ಎರಡು ಮಂಡಿಗಳು ನೆಲಕ್ಕೆ ತಾಗಿವೆ.ಸ್ಥಳದಲ್ಲಿ ಕಬ್ಬಿಣದರಾಡು,ಹಾಸಿಗೆ, ಚಾಪೆ,ದಿಂಬು,ಮೊಬೈಲ್ ಗಳು ದೊರೆತಿದೆ.ನನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ ಎಂದು ಸಹೋದರ ಮಹದೇವಯ್ಯ ಆರೋಪಿಸಿದ್ದಾರೆ.