ಮುಂಬೈ: ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಪ್ರತಿಷ್ಟಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಅ.08 ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಈ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಿಥುನ್ ಅವರ ಗಮನಾರ್ಹ ಸಿನಿಮೀಯ ಪ್ರಯಾಣವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ತೀರ್ಪುಗಾರರ ಸಮಿತಿಯು ಆಯ್ಕೆ ಮಾಡಿದೆ. ಅ.8 ರಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಬರೆದಿದ್ದಾರೆ,
ಜೊತೆಗೆ ಈ ವರ್ಷದ ಆರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣವನ್ನು ಘೋಷಿಸಲಾಗಿತ್ತು.
ಮಿಥುನ್ ಚಕ್ರವರ್ತಿ ಕಲ್ಕತ್ತಾದಲ್ಲಿ ಜನಿಸಿದ್ದಾರೆ, 1976ರ ಮೃಗಯಾ ಸಿನಿಮಾದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ಅತ್ಯುತ್ತಮ ನಟನೆಯಿಂದಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಬಳಿಕ 1992 ರಲ್ಲಿ ತೆರೆ ಕಂಡ ತಹದರ್ ಕಥಾ ಹಾಗೂ 1998ರಲ್ಲಿ ತೆರೆ ಕಂಡಿದ್ದ ಸ್ವಾಮಿ ವಿವೇಕಾನಂದ ಸಿನಿಮಾದ ಪಾತ್ರಗಳಿಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಇತ್ತೀಚಿಗೆ ತೆರೆ ಕಂಡಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ನಲ್ಲೂ ಅವರು ಇದ್ದರು.