ಬಣ್ಣಗಳ ಹಬ್ಬ

ಡಾ.ಗುರುಪ್ರಸಾದ ರಾವ್ ಹವಲ್ದಾರ್

ಲೇಖಕರು ಮತ್ತು ಉಪನ್ಯಾಸಕರು

dr.guruhs@gmail.com

ಹೋಳಿ ಹಬ್ಬವನ್ನು ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ, ಬಣ್ಣಗಳ ಹಬ್ಬಗಳೆಂದು ಆಚರಿಸಲಾಗುತ್ತದೆ.

ಒಬ್ಬರು ಮತ್ತೊಬ್ಬರಿಗೆ ಅಂದರೆ ತಮ್ಮ ಸ್ನೇಹಿತರಿಗೆ ಬಂಧು ಬಾಂಧವರಿಗೆಲ್ಲ ವಿವಿಧ ಬಣ್ಣಗಳನ್ನು ಹಚ್ಚಿ, ಈ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಅದೇ ನಮ್ಮ ಭಾರತದಲ್ಲಿ ವಿಜೃಂಭಣೆಯಿಂದ ಈ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.

ಹೋಳಿ ಹಬ್ಬಕ್ಕೆ  ಇರುವ ಪೌರಾಣಿಕ ಹಿನ್ನೆಲೆ ನೋಡಿದರೆ, ಹಿಂದೆ ತಾರಕಾಸುರ ರಾಕ್ಷಸನ ಉಪಟಳಕ್ಕೆ ದೇವಾನುದೇವತೆಗಳು ಸೋತು ಹೋಗಿದ್ದರು.

ಆಗ ಶಿವ ಪಾರ್ವತಿಯರ ಪುತ್ರನಲ್ಲದೆ, ಬೇರೆ ಯಾರೂ ಸಹ ತಾರಕಾಸುರನನ್ನು ಸಂಹರಿಸಲು ಸಾಧ್ಯವಿಲ್ಲ ಎಂದು ದೇವತೆಗಳು ಒಂದು ನಿರ್ಧಾರ ಮಾಡಿದರು.

ಶಿವನಿಗೆ ಪಾರ್ವತಿಯನ್ನು ವಿವಾಹ ಮಾಡಿಸಲು ನಿಶ್ಚಯಿಸಿದರು. ಇದಕ್ಕೆ ಬ್ರಹ್ಮನ ಸಲಹೆಯನ್ನು ಸಹ ಪಡೆದುಕೊಳ್ಳುತ್ತಾರೆ. ಆಗ ಶಿವನು ತಪಸ್ಸಿನಲ್ಲಿ ನಿರತನಾಗಿರುತ್ತಾನೆ. ಹೇಗಾದರೂ ಮಾಡಿ ಶಿವನಿಗೆ ಪಾರ್ವತಿಯನ್ನು ವಿವಾಹ ಮಾಡಿಸಬೇಕೆಂದು ಮನ್ಮಥನನ್ನು ಶಿವನ ಮನಸ್ಸನ್ನು ಒಲಿಸಲು ಮತ್ತು ಪ್ರೇರೇಪಿಸಲು ನಿರ್ಧರಿಸುತ್ತಾರೆ.

ಆಗ ಇಂದ್ರ ಮನ್ಮಥನನ್ನು ಕರೆಸಿ ಹೊಗಳುತ್ತಾನೆ. ಹೊಗಳಿಕೆಗೆ ಮನ್ಮಥನ ಸ್ವಭಾವ ಉಬ್ಬುತ್ತದೆ. ಶಿವನನ್ನು ಮನ ಒಲಿಸಲು ಮನ್ಮಥನಿಗೆ ಇಂದ್ರನು ಹೇಳಿಕೊಡುತ್ತಾನೆ. ಇದರಿಂದ ಮೂರು ಲೋಕಕ್ಕೆ ಒಳಿತಾಗುವುದು. ಪಾರ್ವತಿಯ ಸೌಂದರ್ಯಕ್ಕೆ ಶಿವನ ಮನಸ್ಸು ಸೋಲುವಂತೆ ಮಾಡಬೇಕೆಂದು ಮನ್ಮಥನಿಗೆ ಹೇಳಿಕೊಡುತ್ತಾನೆ.

ಶಿವನು ತಪಸ್ಸು ಮಾಡುತ್ತಿರುವ ತಪೋಭೂಮಿಯಾದ ಹೇಮಕೂಟ ಪರ್ವತಕ್ಕೆ ಮನ್ಮಥನು ಸೇರಿ ರೂಪರಾಶಿ, ಸತಿ, ರತಿ, ಸುಖ, ವಸಂತರೊಂದಿಗೆ ಎಲ್ಲರೂ ಬಂದಿದ್ದರು. ಅವರ ಸೈನ್ಯ ನೋಡುಗರಿಗೆ ಕಣ್ಣು ಕುಕ್ಕಿಸುವಂತಿತ್ತು. ಪಾರ್ವತಿಯ ಬೆಂಗಾವಲಿಗೆ ನಿಂತು ಇವರಿಗೆ ಸಹಕರಿಸುತ್ತಾಳೆ. ಮನ್ಮಥನು ಶಿವನ ಮೇಲೆ ಐದು ಪುಷ್ಪ ಬಾಣಗಳನ್ನು ಪ್ರಯೋಗಿಸುತ್ತಾನೆ. ಶಿವನು ಆಗ ಕೋಪಗೊಂಡು ತನ್ನ ಮೂರನೇ ಕಣ್ಣನ್ನು ತೆರೆದು ಕಾಮನನ್ನು ಸುಟ್ಟು ಹಾಕುತ್ತಾನೆ.

ಆಗ ಮನ್ಮಥನ ಪತ್ನಿಯು ದುಃಖದಿಂದ ರೋಧಿಸುತ್ತಿರುತ್ತಾಳೆ. ಕೊನೆಗೆ ಪಾರ್ವತಿಯ ಕಠೋರವಾದ ತಪಸ್ಸಿಗೆ ಶಿವ ಒಲಿದಾಗ, ಆಗ ಪಾರ್ವತಿ ಶಿವನಿಗೆ ರತಿಯ ಪತಿಯನ್ನು ಉಳಿಸಿಕೊಡಬೇಕು, ಬದುಕಿಸಬೇಕೆಂದು ಶಿವನಲ್ಲಿ ಬೇಡಿಕೊಳ್ಳುತ್ತಾಳೆ. ಮನ್ಮಥ ಸತ್ತು ಮತ್ತೆ ಪುನರ್ಜನ್ಮ ಪಡೆದು ಬದುಕಿದಂತಾಗುತ್ತದೆ.

ಆಗ ಶಿವನು ದಯೆ ತೋರಿ ಪಾರ್ವತಿಯ ಬೇಡಿಕೆಯನ್ನು ಈಡೇರಿಸಿದನು. ಆಗ ಕಾಮ ದೇವನಿಗೆ ಎಲ್ಲಾ ಸ್ತ್ರೀ ಪುರುಷರ ಹೃದಯದಲ್ಲಿ ಸ್ಥಾನ ದೊರೆಯುತ್ತದೆ. ಈ ಘಟನೆ ಸಂಭವಿಸಿದ್ದು ಫಾಲ್ಗುಣ ಮಾಸದ, ಶುದ್ಧ ಪೌರ್ಣಮಿಯ ದಿನದಂದು  ಕಾಮನ ಹಬ್ಬವೆಂದು ಅಥವಾ ಹೋಳಿ ಹಬ್ಬವೆಂದು ಆಚರಿಸಲಾಗುತ್ತದೆ.

ಹೋಳಿಯ ನಿಜವಾದ ಹಬ್ಬ ಆರಂಭಗೊಳ್ಳುತ್ತಿದ್ದಂತೆ, ಜನರು ಕಾಮನ ದಹನಕ್ಕಾಗಿ ಒಟ್ಟು ಸೇರುತ್ತಾರೆ. ಹೋಳಿ ಹಬ್ಬದ ಸಂಜೆ ಕಾಮನ ದಹನವನ್ನು ಏರ್ಪಡಿಸಲಾಗುತ್ತದೆ.

ದುಷ್ಟತೆಯ ವಿರುದ್ಧ ಒಳ್ಳೆಯ ಅಂಶಗಳ ಗೆಲುವೆಂಬ ನೀತಿ ಕಾಮನ ದಹನದಲ್ಲಿ ಸಮ್ಮಿಳಿತವಾಗಿದೆ. ಬೆಂಕಿಯು ತನ್ನ ಕೆನ್ನಾಲಿಗೆಯನ್ನು ಚಾಚಿ ಪ್ರಖರವಾಗಿ ಉರಿಯುತ್ತಿದ್ದಂತೆ   ಸುತ್ತ ನೆರೆದಿದ್ದ ಜನರು ಹಾಡು, ನೃತ್ಯ ಮಾಡಿ ಸಂಭ್ರಮಿಸುತ್ತಾರೆ.

ಹೋಳಿ ಹಬ್ಬವು ಬೇಸಿಗೆಯ ದಿನಗಳಲ್ಲಿ ಅಂದರೆ ಚಳಿಗಾಲ ಮುಗಿದು ಬೇಸಿಗೆಯ ದಿನಗಳು ಪ್ರಾರಂಭವಾಗುವ ಸಮಯದಲ್ಲಿ ಆಚರಿಸಲಾಗುತ್ತದೆ.

ಸೂರ್ಯನ ಕಿರಣಗಳು ನಮ್ಮ ಚರ್ಮದ ಮೇಲೆ ನೇರವಾಗಿ ಬೀಳುತ್ತವೆ. ಇದರಿಂದ ಶರೀರದಲ್ಲಿ ಉಷ್ಣಾಂಶ ಹೆಚ್ಚಾಗುವುದು. ಉಷ್ಣಾಂಶ ಹೆಚ್ಚಾದರೆ ಮನುಷ್ಯರಾದ ನಮ್ಮ ಶರೀರದಲ್ಲಿ ಕೋಪವೂ ಹೆಚ್ಚಾಗುತ್ತದೆ. ಇದರಿಂದ ಮಾನಸಿಕ ಖಿನ್ನತೆ ಉಂಟಾಗುತ್ತದೆ. ನಮ್ಮ ಶರೀರದ ಈ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಸಹಿಸುವ ಕ್ಷಮತೆಯು ಹೆಚ್ಚಾಗಲಿ ನೈಸರ್ಗಿಕವಾದ ಬಣ್ಣವನ್ನು ತಯಾರಿಸುತ್ತಿದ್ದರು.

ಕಾಮನ ಹಬ್ಬದ ಕಾಲದಲ್ಲಿ ಮುತ್ತುಗದ ಪುಷ್ಪಗಳನ್ನು ನೀರಿನಲ್ಲಿ ನೆನೆಸಿ, ಬಣ್ಣವನ್ನು ತಯಾರಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಎರಚುವುದೇ ಹೆಚ್ಚಾಗಿ ಕಂಡುಬರುತ್ತದೆ.

ಮುತ್ತುಗದ ಮರದ ಪುಷ್ಪಗಳ ಬಣ್ಣ ಕಫ ನಿವಾರಕ ಹಾಗೂ ಮುತ್ತುಗದ ಎಲೆಯಿಂದ ಮಾಡಿದ ತಟ್ಟೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಆ ಮರದ ಹೂವುಗಳ ಬಣ್ಣ ಎರಚುವುದರಿಂದ ದೇಹದಲ್ಲಿ ರೋಗ ಪ್ರತಿ ನಿರೋಧಕ ಶಕ್ತಿ ಹೆಚ್ಚಾಗಿ ನಮ್ಮಲ್ಲಿ ಆರೋಗ್ಯವಾಗಿ ಇರಿಸಲು ಸಹಾಯ ಮಾಡುತ್ತದೆ ಮತ್ತು ಕಾಮಾಲೆಯಂತಹ ರೋಗಗಳಿಂದ ರಕ್ಷಣೆಯನ್ನು ಸಹ ನೀಡುತ್ತದೆ.

ಬಣ್ಣಗಳ ಹಬ್ಬ: ಉತ್ತರ ಭಾರತದಲ್ಲಿ ಈ ಹೋಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ಮಹಿಳೆಯರು ಮತ್ತು ಪುರುಷರು ಎನ್ನುವುದನ್ನು ಸಹ ನೋಡದೆ ಮಹಿಳೆಯರೇ ಖುದ್ದಾಗಿ ಮನೆಮನೆಗೆ ತೆರಳಿ ಸಿಹಿಯನ್ನು ತಿನ್ನಿಸಿ, ಬಣ್ಣವನ್ನು ಹಚ್ಚಿ ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸುತ್ತಾರೆ.

ಹೋಳಿಯ ಬೆಳಿಗ್ಗೆ ಸಾಮಾನ್ಯ ಪೂಜೆಯನ್ನು ಏರ್ಪಡಿಸಲಾಗುತ್ತದೆ. ಅಬೀರ್ ಅಥವಾ ಗುಲಾಲ್ ಅನ್ನು ಮನೆಯ ದೇವರ ಪಾದಗಳಗೆ ಹಚ್ಚುತ್ತಾರೆ. ನಂತರ ಯುವಕರು ಗುಲಾಲ್ ಅನ್ನು ಮನೆಯ ಹಿರಿಯರಿಗೆ ಪಾದಗಳಿಗೆ ಹಚ್ಚಿ ಅವರ ಆಶಿರ್ವಾದವನ್ನು ಪಡೆದುಕೊಳ್ಳಬೇಕಾಗುತ್ತದೆ.

ಅದರ ನಂತರವೇ ಪ್ರತಿಯೊಬ್ಬರೂ ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುತ್ತಾರೆ. ವಿವಿಧ ಬಣ್ಣಗಳಿಂದ ಜನರು  ಹೀಗೆ ಹಬ್ಬದ ಸಂಭ್ರಮ ಮುಂದುವರಿಯುತ್ತದೆ.

ಮಥುರಾ ಮತ್ತು ವೃಂದಾವನದಲ್ಲಿ ಹೋಳಿಯಂದು ಮಡಿಕೆ ಒಡೆಯುವ ಆಚರಣೆಯನ್ನು ಆಚರಿಸುತ್ತಾರೆ.

ಮಡಿಕೆಯ ತುಂಬಾ ಹಾಲು ತುಂಬಿಸಿ ಅದನ್ನು ಎತ್ತರದ ಸ್ಥಳದಲ್ಲಿ ಇಡುತ್ತಾರೆ ನಂತರ ಹುಡುಗರು ಮಾನವ ಪಿರಮಿಡ್ ಅನ್ನು ರಚಿಸಿ ಅದನ್ನು ಒಡೆಯುತ್ತಾರೆ. ಹುಡುಗಿಯರು ಸೀರೆಯಿಂದ ಮಾಡಿದ ಹಗ್ಗದಿಂದ ಹುಡುಗರನ್ನು ಹೊಡೆಯುತ್ತಾ ಅವರಿಗೆ ಮಡಿಕೆ ಒಡೆಯದಂತೆ ತಡೆಯಲು ಪ್ರಯತ್ನಿಸುತ್ತಾರೆ. ಅವರು ಬಣ್ಣಗಳಲ್ಲಿ ಆಟವಾಡುತ್ತಾ ಹಾಡುಗಳನ್ನು ಹಾಡುತ್ತಾರೆ.

ಇನ್ನು ದಕ್ಷಿಣ ಭಾರತದಲ್ಲಿ ಕೂಡ ಅದ್ದೂರಿಯಾಗಿ ಹೋಳಿ ಹುಣ್ಣಿಮೆಯನ್ನು ಆಚರಿಸುತ್ತಾರೆ.  ಅದರಲ್ಲಿ ಕರ್ನಾಟಕದ ಮೂಲೆಮೂಲೆಗಳಲ್ಲಿ ಕೂಡ ಆಚರಿಸುತ್ತಾರೆ.

ಕಾಮಣ್ಣನನ್ನು ಸುಟ್ಟು ಮರುದಿನ ಬಣ್ಣವನ್ನು ಹಚ್ಚಿ ಸಂಭ್ರಮಿಸುತ್ತಾರೆ. ಪುರುಷ ಮಹಿಳೆ ಎನ್ನುವ ಭೇದ ಭಾವವಿಲ್ಲದೇ ಎಲ್ಲರೂ ಸಹ ಬಣ್ಣವನ್ನು ಹಚ್ಚಿ ಸಂಭ್ರಮಿಸುತ್ತಾರೆ. ಸಂಜೆಯ ವೇಳೆಗೆ, ಬಣ್ಣವನ್ನು ತೆಗೆದು ಸ್ನಾನ ಮುಗಿಸಿದ ನಂತರ, ಸಿಹಿಯೊಂದಿಗೆ ಪ್ರತಿಯೊಬ್ಬರೂ ಮನೆಮನೆಗೆ ತೆರಳುತ್ತಾರೆ.  ಹೀಗೆ ಹೋಳಿ ಜನರನ್ನು ಒಂದಾಗಿಸುತ್ತದೆ ಮತ್ತು ಪ್ರೀತಿ, ಸಾಮರಸ್ಯ, ಸಹೋದರತ್ವವನ್ನು ಉತ್ತೇಜಿಸುತ್ತದೆ.