ಡಾ.ಗುರುಪ್ರಸಾದ್ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ.
ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 22ರಂದು ರಕ್ಷಾಬಂಧನವನ್ನು ಆಚರಿಸಲಾಗುತ್ತಿದೆ.
ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ.
ಶ್ರಾವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳ ಮಾಸವೇ ಶ್ರಾವಣ.
ನಾಗಚತುರ್ಥಿ, ನಾಗಪಂಚಮಿ, ಶ್ರಾವಣ-ಸೋಮವಾರ, ಶ್ರಾವಣ-ಶುಕ್ರವಾರ, ಗೋಕುಲಾಷ್ಟಮಿ, ನೂಲಹುಣ್ಣಿಮೆ, ಹೀಗೆ ಪ್ರತಿದಿನವೂ ಹಬ್ಬ. ಈ ಎಲ್ಲ ಹಬ್ಬಗಳಲ್ಲಿ ‘ನೂಲಹುಣ್ಣಿಮೆ’ ಅಥವಾ ‘ರಕ್ಷಾಬಂಧನ’ ಹಬ್ಬವು ಹಿಂದೂ, ಜೈನ, ಸಿಖ್ ಧರ್ಮದವರಿಗೆ ವಿಶೇಷವಾದ ಹಬ್ಬವಾಗಿದೆ.
ಭಾರತ, ಮಾರಿಷಿಯಸ್, ನೇಪಾಳ, ಪಾಕಿಸ್ತಾನ್ದ ಕೆಲವು ಪ್ರದೇಶಗಳಲ್ಲಿ ಮತ್ತು ವಿಶ್ವದಾದ್ಯಂತ ನೆಲೆಸಿರುವ ಭಾರತೀಯರು ರಕ್ಷಾ ಬಂಧನ ವನ್ನು ಆಚರಿಸುತ್ತಾರೆ. ಮಹಾರಾಷ್ಟ್ರದ ಕರಾವಳಿಯಲ್ಲಿ ಈ ದಿನ ‘ಕೊಳಿ’ ಸಮಾಜದವರು ಸಾಗರಕ್ಕೆ ತೆಂಗಿನಕಾಯಿ ಅರ್ಪಿಸಿ, ಪೂಜೆಯನ್ನು ಮಾಡಿ ಮೀನುಗಾರಿಕೆಯನ್ನು ಮತ್ತೆ ಪ್ರಾರಂಭಿಸುತ್ತಾರೆ.
ಅಲ್ಲಿ ನೂಲಹುಣ್ಣಿಮೆಯನ್ನು ‘ನಾರಳಿಪೂರ್ಣಿಮಾ’ ಎಂದು ಕರೆಯಲಾಗುತ್ತದೆ. ನೇಪಾಳದಲ್ಲಿ ‘ಜನೆವು ಪೂರ್ಣಿಮಾ’ ಎಂದು ಹೇಳುತ್ತಾರೆ.ಅಣ್ಣ ತಂಗಿಯರ ಬಾಂಧವ್ಯವದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ.
ಪ್ರತಿ ಸಹೋದರಿಯು ಪ್ರತಿವರ್ಷ ತನ್ನ ಸಹೋದರರ ಮಣಿಕಟ್ಟಿನ ಮೇಲೆ ‘ರಾಖಿ’ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟುತ್ತಾಳೆ.
ಈ ದಿನ ಹಳೆಯ ಜನಿವಾರವನ್ನು ಬದಲಿಸಿ ಹೊಸ ಜನಿವಾರ ಧರಿಸುತ್ತಾರೆ.
ರಕ್ಷಾಬಂಧನ ಹಬ್ಬವು ಕೇವಲ ಸಹೋದರ-ಸಹೋದರಿಯರಿಗಷ್ಟೇ ಸೀಮಿತವಾಗಿರದೇ ಪ್ರತಿಯೊಬ್ಬ ಸ್ತ್ರೀ-ಪುರುಷರ ನಡುವೆ ಇರುವ ಪ್ರೀತಿ, ವಾತ್ಸಲ್ಯ, ಜವಾಬ್ದಾರಿ ಮತ್ತು ಕರ್ತವ್ಯದ ಪ್ರತೀಕವಾಗಿದೆ.
ರಜಪೂತ ರಾಣಿಯರು ತಮ್ಮ ನೆರೆಯ ರಾಜ್ಯದ ರಾಜನಿಗೆ ರಾಖಿಯನ್ನು ಸಹೋದರತ್ವದ ಭಾವನೆಯಿಂದ ಕಳುಹಿಸುತಿದ್ದರು.
ಈ ಹಬ್ಬವು ಪುರಾತನ ಕಾಲದಿಂದ ನಡೆದು ಬಂದಿದ್ದು ಪ್ರೀತಿ, ಸ್ನೇಹ, ಪವಿತ್ರತೆ, ಸಾಮರಸ್ಯದ ಸಂಕೇತವಾಗಿದೆ. ರಾಖಿಯು ಸಾಧಾರಣ ನೂಲಿನಿಂದ, ದಾರದಿಂದ ಮಾಡಲಾಗುತ್ತದೆ. ಇಂದಿನ ದಿನಗಳಲ್ಲಿ ಬೇರೆ ಸ್ವರೂಪ ಪಡೆದುಕೊಂಡಿದೆ ಬೆಳ್ಳಿ, ಬಂಗಾರದ ವಜ್ರ, ಪ್ಲಾಟಿನಂಗಳನ್ನು ಬಳಸಿ ರಾಖಿಯನ್ನು ಸಿದ್ದಪಡಿಸಲಾಗುತ್ತದೆ.
ರಕ್ಷಾಬಂಧನದ ಹಬ್ಬದಂದು ಬೆಳಗ್ಗೆ ಸಹೋದರಿ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಸಹೋದರನಿಗೆ ಆರತಿ ಬೆಳಗಿಸಿ, ಹಣೆಯಲ್ಲಿ ತಿಲಕವನ್ನಿಟ್ಟು ರಾಖಿ ಕಟ್ಟುವ ಪದ್ಧತಿ ಇದೆ. ಸಹೋದರಿ ಕೊಟ್ಟಿರುವ ಸಿಹಿ ತಿಂದ ನಂತರ ಸಹೋದರನು ಆಶಿರ್ವಾದ ಮಾಡಿ, ಬಟ್ಟೆ, ಅಭರಣಗಳು ಮುಂತಾದಗಳನ್ನು ಸ್ನೇಹ ರೂಪದಲ್ಲಿ ಕಾಣಿಕೆ ನೀಡುತ್ತಾನೆ.
ನಮ್ಮ ಪುರಾಣ ಇತಿಹಾಸಗಳಲ್ಲಿ ರಕ್ಷಾಬಂಧನದ ಉಲ್ಲೇಖಗಳನ್ನು ನೋಡಬಹುದಾಗಿದೆ
ದೇವತೆ ಮತ್ತು ರಾಕ್ಷಸರ ನಡುವೆ ನಡೆದ ಯುದ್ಧದ ಸಮಯದಲ್ಲಿ, ಇಂದ್ರನನ್ನು ದೈತ್ಯ ಬಲಿ ಸೋಲಿಸುತ್ತಾನೆ. ನಂತರ ದೇವರಾಜ ಇಂದ್ರನ ಪತ್ನಿ ಶುಚಿ ದೇವಿಯು ವಿಷ್ಣು ಕೊಟ್ಟಿರುವ ನೂಲಿನ ಕಂಕಣವನ್ನು ಸಲಹೆಯಂತೆ ಇಂದ್ರನ ಕೈಗೆ ಕಟ್ಟಿ ವಿಜಯಶಾಲಿ ಆಗಲಿ ಎಂದು ಪ್ರಾರ್ಥನೆ ಮಾಡುತ್ತಾಳೆ. ಇಂದ್ರನು ಯದ್ಧದಲ್ಲಿ ವಿಜಯಶಾಲಿಯಾಗಿ ಮತ್ತೆ ಅಮರಾವತಿಯ ರಾಜ್ಯವನ್ನು ಮರಳಿ ಪಡೆಯುತ್ತಾನೆ.
ಬಲಿ ಚಕ್ರವರ್ತಿ ಮತ್ತು ಲಕ್ಷ್ಮೀ
ರಾಜ ಬಲಿ ಒಬ್ಬ ಮಹಾನ್ ರಾಜನಾಗಿದ್ದನು ಮತ್ತು ವಿಷ್ಣುವಿನ ಭಕ್ತನಾಗಿದ್ದನು. ಒಮ್ಮೆ ರಾಜ ಬಲಿ ಯಜ್ಞವನ್ನು ಮಾಡಿದನು. ಅದೇ ಸಮಯದಲ್ಲಿ ವಿಷ್ಣು ತನ್ನ ಪರಮ ಭಕ್ತನಾದ ಬಲಿಯನ್ನು ಪರೀಕ್ಷಿಸಲು ವಾಮನ ಅವತಾರದಲ್ಲಿ ಬಲಿಯ ಮುಂದೆ ಪ್ರತ್ಯಕ್ಷನಾಗಿ ಮೂರು ರೀತಿಯ ಭೂಮಿಯನ್ನು ದಾನಮಾಡುವಂತೆ ಕೇಳುತ್ತಾನೆ.
ವಾಮನ ಅವತಾರದಲ್ಲಿದ್ದ ಭಗವಾನ್ ವಿಷ್ಣು ಎರಡು ಹಂತಗಳಲ್ಲಿ ಭೂಮಿ ಮತ್ತು ಆಕಾಶವನ್ನು ವಶಪಡಿಸಿಕೊಂಡು ಮೂರನೇ ಹಂತದ ಭೂಮಿಗಾಗಿ ಬಲಿಯ ತಲೆಯ ಮೇಲೆ ಪಾದವನ್ನು ಇಡುತ್ತಾನೆ.
ಆಗ ಬಲಿಯು ವಿಷ್ಣುವಿನಲ್ಲಿ ಪ್ರಭು ನಾನು ನನ್ನೆಲ್ಲಾ ಸ್ವತ್ತನ್ನು ನಿನಗೆ ನೀಡಿದ್ದಾನೆ. ಈಗ ನೀನು ನನ್ನ ಕೋರಿಕೆಯ ಮೇರೆಗೆ ನನ್ನೊಂದಿಗೆ ಪಾತಾಳಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತಾನೆ. ಭಕ್ತನ ಆಸೆಯ ಮೇರೆಗೆ ಭಗವಾನ್ ವಿಷ್ಣು ವೈಕುಂಠವನ್ನು ತ್ಯಜಿಸಿ ಪಾತಾಳಕ್ಕೆ ಹೋಗುತ್ತಾನೆ.
ಇದರಿಂದ ಚಿಂತಿತಳಾದ ಲಕ್ಷ್ಮಿಯು ಬಡ ಮಹಿಳೆಯ ರೂಪವನ್ನು ಧರಿಸಿ ಬಲಿಯಿದ್ದಲ್ಲಿಗೆ ಬಂದು ಆತನಿಗೆ ರಕ್ಷಾ ದಾರವನ್ನು ಕಟ್ಟುತ್ತಾಳೆ. ಆಗ ಬಲಿ ತಾಯಿ ನಿಮಗೆ ಉಡುಗೊರೆಯಾಗಿ ನೀಡಲು ನನ್ನ ಬಳಿ ಈಗ ಏನೂ ಉಳಿದಿಲ್ಲ ಎನ್ನುತ್ತಾನೆ. ಲಕ್ಷ್ಮಿ ದೇವಿ ನನಗೆ ನಿನ್ನ ಉಡುಗೊರೆ ಏನು ಬೇಕಾಗಿಲ್ಲ. ಆದರೆ ನನ್ನ ಪತಿ ವಿಷ್ಣುವನ್ನು ನನಗೆ ಹಿಂದಿರುಗಿಸು ಎಂದು ಕೇಳಿಕೊಳ್ಳುತ್ತಾಳೆ. ನಂತರ ಬಲಿ ವಿಷ್ಣುವನ್ನು ಪಾತಾಳ ಲೋಕದಿಂದ ಲಕ್ಷ್ಮಿಯೊಂದಿಗೆ ವೈಕುಂಠಕ್ಕೆ ಕಳುಹಿಸುತ್ತಾನೆ.
ಸಂತೋಷಿ ಮಾತೆ
ಗಣೇಶನಿಗೆ ಎರಡು ಮಕ್ಕಳು ‘ಶುಭ’ ಮತ್ತು ‘ಲಾಭ’ ರಕ್ಷಾಬಂಧನದ ದಿನ ಗಣೇಶನ ಸಹೋದರಿಯು ಬಂದು ಅವನಿಗೆ ರಾಖಿ ಕಟ್ಟುತ್ತಾಳೆ. ಎರಡು ಮಕ್ಕಳಿಗೆ ಅದನ್ನು ನೋಡಿ ತಮಗೆ ಸಹೋದರಿ ಇಲ್ಲವೆಂದು ತುಂಬಾ ಬೇಸರವಾಗುತ್ತದೆ. ಆಗ ತಂದೆಯ ಹತ್ತಿರ ಹೋಗಿ ತಮಗೆ ಸಹೋದರಿ ಬೇಕೆಂದು ಹಠ ಮಾಡುತ್ತಾರೆ. ಕೊನೆಗೆ ನಾರದಮುನಿ ಬಂದು ಗಣೇಶನಿಗೆ ವಿನಂತಿ ಮಾಡಿ, ಅವರಿಗೆ ತಂಗಿ ಕೊಡು, ಅದರಿಂದ ನಿನಗೆ ಮತ್ತು ಮಕ್ಕಳಿಗೆ ಶುಭವಾಗುವುದು ಎಂದು ಹೇಳುತ್ತಾರೆ. ಗಣೇಶನಿಗೆ ತನ್ನ ಪತ್ನಿಗಳಾದ ರಿದ್ಧಿ ಮತ್ತು ಸಿದ್ಧಿಯಿಂದ ಮಂತ್ರಾಗ್ನಿ ಮೂಲಕ ಕನ್ಯಾರತ್ನ ಪ್ರಾಪ್ತವಾಗುತ್ತದೆ. ಅವಳ ಹೆಸರೇ ಸಂತೋಷಿ ಮಾತೆ. ತದನಂತರ ಶುಭ, ಲಾಭರಿಗೆ ತಂಗಿ ಸಂತೋಷಿ ಮಾತೆಯು ರಾಖಿ ಕಟ್ಟಿ ಅವರಿಂದ ರಕ್ಷಣೆ ಪಡೆಯುತ್ತಾಳೆ.
ಯಮ ಮತ್ತು ಯಮುನಾ
ಮೃತ್ಯು ದೇವತೆ ಯಮ ತನ್ನ ಸಹೋದರಿ ಯಮುನಾಳನ್ನು 12 ವರ್ಷಗಳಿಂದ ನೋಡಿರುವುದಿಲ್ಲ. ಅವಳು ಇದರಿಂದ ತುಂಬಾ ದುಃಖಿಯಾಗಿರುತ್ತಾಳೆ. ಗಂಗೆಗೆ ಈ ವಿಷಯವನ್ನು ತಿಳಿಸಿ ಅಣ್ಣನಿಗೆ ತನ್ನನ್ನು ಭೇಟಿ ಮಾಡಲು ತಿಳಿಸು ಎಂದು ಹೇಳುತ್ತಾಳೆ. ಗಂಗಾನದಿ ಯಮನಿಗೆ ಈ ವಿಷಯ ತಿಳಿಸುತ್ತಾಳೆ. ಆಗ ಯಮನು ಯಮುನಾಳನ್ನು ಭೇಟಿ ಮಾಡುತ್ತಾನೆ. ಅವಳಿಗೆ ತನ್ನ ಅಣ್ಣನನ್ನು ಕಂಡು ತುಂಬಾ ಸಂತೋಷವಾಗುತ್ತದೆ. ಯಮನು, ಯಮುನಾಳು ಮಾಡಿದ ಮೃಷ್ಟಾನ್ನ ಭೋಜನವನ್ನು ಸವಿದು ಖುಷಿಯಿಂದ ವರವನ್ನು ಕೇಳು ಎಂದು ಹೇಳುತ್ತಾನೆ. ಅವಳು ಯಾವುದೇ ಬೇರೆ ವರವನ್ನು ಕೇಳದೇ ಪುನಃ ಬಾರಿ-ಬಾರಿಗೂ ಭೇಟಿಮಾಡಲು ಮಾತ್ರ ಹೇಳುತ್ತಾಳೆ. ಯಮನು ಇದನ್ನು ಒಪ್ಪಿಕೊಂಡು ಅಮರಳಾಗುವ ವರದಾನ ಕೊಡುತ್ತಾನೆ.
ದಶರಥ ಮತ್ತು ಶ್ರವಣ ಕುಮಾರ
ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುವ ರಕ್ಷಾ ಬಂಧನವು ಅನೇಕ ನಂಬಿಕೆಗಳಿಂದ ಕೂಡಿದೆ. ಕೆಲವೊಂದು ನಂಬಿಕೆಗಳ ಪ್ರಕಾರ ರಕ್ಷಾ ಬಂಧನವು ಗುರು ಶಿಷ್ಯರ ಸಂಬಂಧವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ಹಬ್ಬವು ದಶರಥ ಮಹಾರಾಜನು ಹತ್ಯೆಗೈದ ಶ್ರವಣ ಕುಮಾರನ ಸಾವಿನೊಂದಿಗೆ ಸಂಬಂಧವನ್ನು ಹೊಂದಿದೆ ಎನ್ನಲಾಗಿದೆ. ಆದ್ದರಿಂದ ರಾಖಿ ಕಟ್ಟುವ ಮುನ್ನ ರಾಖಿಯನ್ನು ಭಗವಾನ್ ಗಣೇಶನಿಗೆ ಅರ್ಪಿಸಬೇಕು. ನಂತರ ಒಂದು ರಾಖಿಯನ್ನು ಶ್ರವಣ ಕುಮಾರನ ಹೆಸರಿನಲ್ಲಿ ಎತ್ತಿಡಬೇಕು.
ರಾಖಿ ಯು ಮಹಾಭಾರತದೊಂದಿಗೆ ಸಂಬಂಧವನ್ನು ಹೊಂದಿದೆ.
ಕೃಷ್ಣ ಮತ್ತು ದ್ರೌಪದಿ
ಕೃಷ್ಣನ ಕೈಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯನ್ನು ಹರಿದು ಗಾಯಕ್ಕೆ ಕಟ್ಟುತ್ತಾಳೆ. ಆಗ ಕೃಷ್ಣ ಅವಳಿಗೆ ಸಮಯ ಬಂದಾಗ ಈ ಉಪಕಾರವನ್ನು ತೀರಿಸುತ್ತೇನೆ ಎಂದು ವಾಗ್ದಾನ ನೀಡಿ ಅವಳನ್ನು ತಂಗಿ ಎಂದು ಒಪ್ಪಿಕೊಳ್ಳುತ್ತಾನೆ. ದುಶ್ಶಾಸನ ವಸ್ತ್ರಾಪಹರಣ ಮಾಡುವಾಗ ಕೃಷ್ಣ ಅವಳಿಗೆ ಸೀರೆಗಳನ್ನು ನೀಡುತ್ತಾನೆ. ಮಹಾಭಾರತದಲ್ಲಿ ದ್ರೌಪದಿ ಕೃಷ್ಣನಿಗೆ ರಾಖಿ ಕಟ್ಟಿದರೆ, ಕುಂತಿ ತನ್ನ ಮೊಮ್ಮಗ ಅಭಿಮನ್ಯುವಿಗೆ ಯುದ್ಧಕ್ಕೆ ಹೋಗುವಾಗ ಕಂಕಣ ಕಟ್ಟುತ್ತಾಳೆ.
ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಜಯಶಾಲಿಯಾಗಲು ಮತ್ತು ಸೈನ್ಯವನ್ನು ರಕ್ಷಿಸಿಕೊಳ್ಳಲು ರಾಖಿ ಹಬ್ಬವನ್ನು ಆಚರಿಸುವಂತೆ ಭಗವಾನ್ ಶ್ರೀಕೃಷ್ಣನು ಯುಧಿಷ್ಠಿರನಿಗೆ ಸೂಚಿಸಿದ್ದನು. ಅಭಿಮನ್ಯು ಯುದ್ಧದಲ್ಲಿ ವಿಜಯಶಾಲಿಯಾಗಿದ್ದರೆ ಅದು ಅವನ ಅಜ್ಜಿ ಕುಂತಿ ಅವನಿಗೆ ನೀಡಿದ ರಕ್ಷಾ ದಾರ ಎನ್ನಲಾಗಿದೆ. ದ್ರೌಪದಿ ಕೂಡ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ತನ್ನ ಮಾನವನ್ನು ಕಾಪಾಡಿದ ಸಹೋದರ ಮತ್ತು ಗೆಳೆಯನಾದ ಶ್ರೀಕೃಷ್ಣನಿಗೆ ರಾಖಿಯನ್ನು ಕಟ್ಟಿದ್ದಳು.
ರಾಜ ಅಲೆಕ್ಸಾಂಡರ್ ಮತ್ತು ರಾಜ ಪುರುಷರು
ಅಲೆಕ್ಸಾಂಡರ್ ತನ್ನ ಯುದ್ಧದಿಂದ ಅನೇಕ ರಾಜ್ಯವನ್ನು ವಶಪಡಿಸಿಕೊಂಡಂತೆ ಅವನಿಗೆ ಜಗತ್ತನ್ನೇ ತನ್ನದಾಗಿಸಿಕೊಳ್ಳಬೇಕೆಂಬ ಹಂಬಲ ಹೆಚ್ಚಾಯಿತು.
ಅಲೆಕ್ಸಾಂಡರ್ ಭಾರತದ ಮೇಲೆ ಕ್ರಿ.ಪೂ. 326 ರಲ್ಲಿ ದಾಳಿ ಮಾಡಿದಾಗ ಅವನ ಪತ್ನಿ ರುಕ್ಸಾನ(ರೊಶನಕ್) ರಾಜ ಪೊರಸ್ ನಿಗೆ ಪವಿತ್ರ ಕಂಕಣ ಕಳುಹಿಸಿ ತನ್ನ ಪತಿಯ ಮೇಲೆ ಯುದ್ಧಭೂಮಿಯಲ್ಲಿ ಮಾರಣಾಂತಿಕ ಹಲ್ಲೆ ಮಾಡಬಾರದು ಎಂದು ಪ್ರಾರ್ಥಿಸುತ್ತಾಳೆ. ರಾಜ ಪೊರಸ್ ನು ಧಾರ್ಮಿಕ ಸಂಪ್ರದಾಯದಂತೆ ರಾಖಿಯನ್ನು ಸ್ವೀಕರಿಸಿ ಕಟ್ಟಿಕೊಳ್ಳುತ್ತಾನೆ.
ರಣರಂಗದಲ್ಲಿ ಕೊನೆಯ ಬಾಣ ಬಿಡುವಾಗ ತನ್ನ ಕೈಯಲ್ಲಿ ಇರುವ ರಾಖಿಯನ್ನು ನೋಡಿ ದಾಳಿ ಮಾಡದೇ ಸುಮ್ಮನಿರುತ್ತಾನೆ. ರಾಖಿಯನ್ನು ಕಂಡು ಪೊರಸ್ ಆಶ್ಚರ್ಯಚಕಿತನಾಗುತ್ತಾನೆ. ಅದೇ ಸಮಯಕ್ಕೆ ಅಲೆಕ್ಸಾಂಡರ್ ಯುದ್ಧವನ್ನು ಆರಂಭಿಸುತ್ತಾನೆ. ಯುದ್ಧದಲ್ಲಿ ಇಬ್ಬರು ಕತ್ತಿಯನ್ನು ಎತ್ತಿದಾಗ ಒಂದೇ ರೀತಿಯ ರಾಖಿಯನ್ನು ಕಂಡು ಯುದ್ಧವನ್ನು ನಿಲ್ಲಿಸುತ್ತಾರೆ. ಮತ್ತು ರಾಜ ಪುರು ಅಲೆಕ್ಸಾಂಡರ್ನ ರಾಜ್ಯವನ್ನು ಹಿಂದಿರುಗಿಸುತ್ತಾನೆ.
ರಾಣಿ ಕರ್ಣಾವತಿ ಮತ್ತು ಹುಮಾಯೂನ್
ಚಿತ್ತೋರ್ ನ ರಾಣಿ ಕರ್ಣಾವತಿ, ಗುಜರಾತ್ ನ ಬಹದ್ದೂರ್ ಶಾ ನ ವಿರುದ್ಧ ತಾನು ಒಂಟಿಯಾಗಿ ದಾಳಿಮಾಡಲು ಸಾಧ್ಯವಿಲ್ಲವೆಂದು ಯೋಚಿಸಿ ಹುಮಾಯೂನನಿಗೆ ರಾಖಿ ಕಳುಹಿಸಿ ಯುದ್ಧದಲ್ಲಿ ಸಹಾಯ ಮಾಡಲು ಪ್ರಾರ್ಥಿಸುತ್ತಾಳೆ. ಆದರೆ ಹುಮಾಯೂನನು ತಡವಾಗಿ ಬಂದಿದ್ದರಿಂದ ರಾಣಿ ಯುದ್ಧದಲ್ಲಿ ಸೋಲುತ್ತಾಳೆ.ಆ ಕಾಲದಲ್ಲಿ ಯುದ್ಧಕ್ಕೆ ಹೋಗುವಾಗ ನಾರಿಯರು ಸೈನಿಕರಿಗೆ ಕಂಕಣ ಕಟ್ಟುವ ಪದ್ಧತಿ ಇತ್ತು. ಹಾಗಾಗಿ ರಕ್ಷಣೆಯು ಸಹೋದರ-ಸಹೋದರಿಯರಿಗೆ ಮಾತ್ರವಲ್ಲ, ವಿಶ್ವದ ನರ ನಾರಿಯರಿಗೂ ಬೇಕಾಗಿದೆ.
ಹಿಂದೂ-ಮುಸ್ಲಿಂ ರ ಪ್ರೀತಿ, ಬಂಧುತ್ವದ ಸಂಕೇತ
ಬಂಗಾಳ ವಿಭಜನೆ ಸಮಯದಲ್ಲಿ ರಕ್ಷಾಬಂಧನ
ರಾಷ್ಟ್ರಕವಿ ರವಿಂದ್ರನಾಥ ಟಾಗೋರರು ರಾಖಿಯು ಹಿಂದೂ-ಮುಸ್ಲಿಂ ಜನಾಂಗದಲ್ಲಿ ಪ್ರೀತಿ, ಬಂಧುತ್ವದ ಸಂಕೇತ ಎಂದು ಹೇಳಿದ್ದಾರೆ. ಅವರು ಬಂಗಾಳದ ವಿಭಜನೆಯ ಸಮಯದಲ್ಲಿ ರಕ್ಷಾಬಂಧನದ ಕಾರ್ಯಕ್ರಮಗಳನ್ನು ಆಯೊಜಿಸಿದ್ದರು. ಹಿಂದೂ-ಮುಸ್ಲಿಂಮರು ಏಕತೆಯನ್ನು ಕಾಪಾಡಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಲಿ ಎಂಬುದು ಅವರ ಪ್ರಯತ್ನವಾಗಿತ್ತು. ಆದರೆ ಕೊನೆಗೂ ಬಂಗಾಳವು ವಿಭಜನೆಯಾಯಿತು.
ತಂಗಿಯಾದವಳಿಗೆ ಅಣ್ಣ ಕೇವಲ ಸಂಬಂಧವಲ್ಲ ಅಳುವಾಗ ಕಣ್ಣೊರೆಸುವ ಕೈಯಾಗುತ್ತಾನೆ, ನೊಂದಾಗ ಮಿಡಿಯುವ ಹೃದಯವಾಗುತ್ತಾನೆ, ರಕ್ಷಣೆಗೆ ಸದಾ ಸಿದ್ದವಿರುವ ಯೋಧನಾಗಿರುತ್ತಾನೆ, ಅಂತೆಯೇ ತಂಗಿ ಅಣ್ಣನಾದವನ ಪ್ರತಿ ಭಾವನೆಗೆ ಸ್ಪಂದಿಸುವ ಗೆಳತಿಯಾಗಿರುತ್ತಾಳೆ, ಆರೋಗ್ಯ ಕೆಟ್ಟಾಗ ಸೇವೆ ಮಾಡುವ ಸೇವಕಿಯಾಗಿರುತ್ತಾಳೆ. ಇದು ಕೇವಲ ರಕ್ಷೆಯ ಬಂಧನವಲ್ಲ ಮಧುರ ಪ್ರೀತಿಯ ಬಂಧನ. ಸಹೋದರ- ಸಹೋದರಿಯರ ನಡುವಿನ ಭ್ರಾತೃತ್ವದ ನಂಟನ್ನು ಗಟ್ಟಿಗೊಳಿಸುವ ಈ ಆಚರಣೆ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವೂ ಹೌದು.
ಜನ್ಮಜನ್ಮಕೂ ಇವನೇ ನನ್ನ ಅಣ್ಣನಾಗಲಿ, ಇವಳೇ ನನ್ನ ತಂಗಿಯಾಗಲಿ ಎಂಬ ಹಾರೈಕೆಯೊಂದಿಗೆ ಹಬ್ಬ ಆಚರಿಸುತ್ತಿರುವ ಎಲ್ಲಾ ಅಣ್ಣ ತಂಗಿಯರಿಗೂ ರಕ್ಷಾಬಂಧನದ ಶುಭಾಶಯಗಳು.