ಭಾರತದಲ್ಲಿ ಕ್ರೀಡೆಗೆ ಮೊದಲ ಪ್ರಶಾಸ್ತ್ಯ ನೀಡಿದರೆ ನೀರಜ್ ರಂತಹ ಲಕ್ಷಾಂತರ ಜನ ದೇಶಕ್ಕೆ ಕೀರ್ತಿ ತರಲಿದ್ದಾರೆ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಸಾವಿರಾರು ವರ್ಷಗಳ ಇತಿಹಾಸವಿರುವ ಗೆಲ್ಲುವುದು ಮುಖ್ಯವಲ್ಲ.. ಸ್ಪರ್ಧಿಸುವುದು ಮುಖ್ಯ… ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಜಗತ್ತಿನ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟವಾದ ಒಲಂಪಿಕ್ಸ್.

ಕೊರೊನಾದಿಂದ ಕಳೆದ ವರ್ಷ ನಡೆಯಬೇಕಿದ್ದ ಕ್ರೀಡಾಕೂಟ ಈವರ್ಷ ನಡೆಯಿತು.

ಈ ಬಾರಿಯ ಜಪಾನ್ ನ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಮಾನವೀಯ ಮೌಲ್ಯಗಳೊಂದಿಗೆ ವಿಜೃಂಭಿಸಿದ್ದು, ಅದರಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು ಕ್ರೀಡಾ ಪ್ರೇಮಿಗಳ ಹೃದಯ ಗೆದ್ದಿದ್ದು ವಿಶೇಷವಾಗಿತ್ತು.

23 ವರ್ಷದ ಭಾರತೀಯ ಸೈನ್ಯದ ಸುಬೇದಾರ್ ಆದ ಚಿನ್ನದ ಹುಡುಗ ನೀರಜ್ ಚೋಪ್ರಾ 13 ವರ್ಷದ ನಂತರ ಭಾರತಕ್ಕೆ ಒಲಂಪಿಕ್ಸ್ ಅಥ್ಲೆಟಿಕ್ಸ್ ನ ಜಾವಲಿನ್ ವಿಭಾಗದಲ್ಲಿ ಚಿನ್ನದ ಪದಕವನ್ನು ತಂದಿತ್ತಿದ್ದು ಭಾರತೀಯ ಕ್ರೀಡಾರಂಗಕ್ಕೆ ಹೊಸ ಸ್ಪೂರ್ತಿ ನೀಡಿದಂತೆಯಾಗಿದೆ.

ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ರಾಷ್ಟ್ರಗೀತೆ ಕಡೇಯ ಸಾರಿ ಮೊಳಗಿದ್ದು 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ. ಆವತ್ತು ಶೂಟರ್ ಅಭಿನವ ಬಿಂದ್ರಾ ಬಂಗಾರ ಗೆದ್ದು ಜಾಗತಿಕ ಕ್ರೀಡಾಕೂಟದಲ್ಲಿ ಭಾರತೀಯ ರಾಷ್ಟ್ರಗೀತೆ ಮೊಳಗುವಂತೆ ಮಾಡಿ ಇಡೀ ದೇಶಿಗರಿಗೆ ಹೆಮ್ಮೆ ಮೂಡಿಸಿದ್ದರು. ನಂತರ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕವನ್ನು ಫೈನಲ್ಸ್ನ ಎರಡನೇ ಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅಂತಿಮವಾಗಿ ಚಿನ್ನವನ್ನು ಭಾರತದ ಪಾಲುವಾಗುವಂತೆ ಮಾಡಿದರು.

ಈ ಮೂಲಕ ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯರಾದರು. ಇದು ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಲಭಿಸುತ್ತಿರುವ 7ನೇ ಪದಕ ಮತ್ತು ಚೊಚ್ಚಲ ಬಂಗಾರವಾಗಿದೆ. ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದಿರುವ ಭಾರತದ ನೀರಜ್ ಚೋಪ್ರಾ ಅವರು ತಮ್ಮ ಪದಕವನ್ನು ಇತ್ತೀಚಿಗೆ ನಿಧನರಾದ ಫ್ಲೈಯಿಂಗ್ ಸಿಖ್ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್ ಅವರಿಗೆ ಅರ್ಪಿಸಿದ್ದಾರೆ.

ಮಿಲ್ಖಾ ಸಿಂಗ್ ಅವರು ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಕೇಳಲು ಬಯಸಿದ್ದರು. ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಅವರ ಕನಸು ಈಡೇರಿದೆ ಎಂದು ಹೇಳಿದ್ದಾರೆ.

ಹರಿಯಾಣ ರಾಜ್ಯದದದ ಪಾಣಿಪತ್ ಹತ್ತಿರದ ಖಂಡ್ರಾ ಗ್ರಾಮದ ಅವಿಭಕ್ತ ಕುಟುಂಬದ ಕೃಷಿ ವೃತ್ತಿಯನ್ನು ಮಾಡುತ್ತಿರುವ ಸತೀಶ್ ಕುಮಾರ್ ಮತ್ತು ಸರೋಜದೇವಿಯ ಪುತ್ರ ನೀರಜ್ ಚೋಪ್ರಾ, ಇವರ ಕುಟುಂಬದಲ್ಲಿ 16 ಜನರಿದ್ದಾರೆ. ಅಂಥಹ ದೊಡ್ಡ ಮನೆಯಲ್ಲಿ ಬೆಳೆದ ಹುಡುಗ ಸಣ್ಣವನಿದ್ದಾಗ ಮರ ಏರುತ್ತ, ಜಮೀನುಗಳಲ್ಲಿ ಮೇಯುತ್ತಿದ್ದ ಕೋಣಗಳ ಬಾಲ ಹಿಡಿದು ಕೀಟಲೆ ಮಾಡುತ್ತಿದ್ದ. ಅಲ್ಲದೇ 12ನೇ ವಯಸ್ಸಿನಲ್ಲಿ 90 ಕೆ.ಜಿ ದೇಹತೂಕ ಹೊಂದಿದ್ದ.

ಆ ಹುಡುಗನಿಗೆ ಶಿಸ್ತು ಕಲಿಸುವುದಕ್ಕಾಗಿ ತಂದೆ ಸತೀಶ್ ಕುಮಾರ್ ಕ್ರೀಡೆಯಲ್ಲಿ ಅಭ್ಯಾಸ ಮಾಡಲು ಒತ್ತಾಯಿಸಿದರು. ಇತ್ತ ಶಾಲೆಯಲ್ಲಿ ನೀರಜ್ ಚೋಪ್ರಾ ಅವರ ಟೀಚರ್ ಸಹ ಇದೇ ಸಲಹೆಯನ್ನ ನೀಡಿದ್ದರಂತೆ.ಮೊದಲು ಒಪ್ಪಲಿಲ್ಲವಾದರೂ ಕೊನೆಗೆ ಓಟದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು. ಹೀಗೆ ಜಾವೆಲಿನ್ ಥ್ರೋ ಪ್ರಾಕ್ಟೀಸ್ ಆರಂಭಿಸಿದ ನಂತರ ದೇಹದ ಆಕಾರದಲ್ಲಿ ಸುಧಾರಣೆಯಾಗಿತ್ತಂತೆ. ಬಳಿಕ ಜಿಮ್ ಮಾಡಿ, ಫಿಟ್ನೆಸ್ ಕಾಪಾಡಿಕೊಂಡರು. ನಂತರ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಲ್ಲದೇ ಆರ್ಮಿ ಸೇರಿದ ಬಳಿಕ ಮತ್ತಷ್ಟು ಫಿಟ್ ಆಗಿದ್ದರು.

ಪಾನಿಪತ್ನ ಶಿವಾಜಿ ಕ್ರೀಡಾಂಗಣಕ್ಕೆ ಅವರ ಪಯಣ ಬೆಳೆಯಿತು. ನಂತರ ಪಂಚಕುಲಾದ ತವು ದೇವಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಯಿತು.

ನೀರಜ್ ಚೋಪ್ರಾ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದು, ಪುಣೆ ಆರ್ಮಿ ಸ್ಪೋರ್ಟ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದು 2016ರ ಆಗಸ್ಟ್ 26ರಂದು ಭಾರತೀಯ ಸೈನ್ಯದ ನೈಬ್ ಸುಬೇದಾರ್ ಶ್ರೇಯಾಂಕದ ವಿಭಾಗದಲ್ಲಿ ಕಿರಿಯ ನಿಯುಕ್ತಾಧಿಕಾರಿಯಾಗಿ ಸೇರ್ಪಡೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲಿ ಜಾವೆಲಿನ್ ಎಸೆಯಲು ಕಲಿತ ಪೋಲೆಂಡ್ನಲ್ಲಿ ನಡೆದ ಅಂಡರ್ 20 ಜೂನಿಯರ್ ವರ್ಲ್ಡ್ ಚಾಂಪಿಯನ್ಶಿಪ್ 2016ರಲ್ಲಿ 86.48 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.ಆಸ್ಟ್ರೇಲಿಯಾದಲ್ಲಿ ನಡೆದ 2018ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ಬಳಿಕ ಒಲಿಂಪಿಕ್ಸ್ ಗಾಗಿ ತಯಾರಿ ನಡೆಸಿದ್ದರು. ಅಲ್ಲದೆ ನೀರಜ್ ಚೋಪ್ರಾ
ಅಲ್ಲದೆ ನೀರಜ್ ಚೋಪ್ರಾ ಅವರ ಉತ್ತಮ ಎಸೆತ 88.07 ಮೀಟರ್ ಎಂದು ನೀರಜ್ ಚಿಕ್ಕಪ್ಪ ಭೀಮಸೇನ ಚೋಪ್ರಾ ಅವರು ತಿಳಿಸಿದ್ದಾರೆ.

ಕನ್ನಡಿಗ ಕೋಚ್
ನೀರಜ್ ಸಾಧನೆ ಹಿಂದೆ ಕನ್ನಡಿಗ ಕೋಚ್ ಇದ್ದಾರೆ ಅಂದರೆ ಆಶ್ಚರ್ಯ ವಾಗಬಹುದು.

ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿರುವ, ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್ಸ್ಟಿಟ್ಯೂಟ್ನಲ್ಲಿ ತರಬೇತುದಾರರಾಗಿರುವ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಕಾಶಿನಾಥ ನಾಯ್ಕ ಈ ಚಿನ್ನದ ಪದಕ ವೀರ ನೀರಜ್ ಚೋಪ್ರಾ ಅವರ ಹಿಂದಿನ ಶಕ್ತಿಯಾಗಿದ್ದಾರೆ.

23 ವರ್ಷದಿಂದ ಸೇನೆಯಲ್ಲಿರುವ ಕಾಶಿನಾಥ ನಾಯ್ಕ, 2010ರ ನವದೆಹಲಿಯ ಕಾಮನ್ವೆಲ್ತ್ ಗೇಮ್ಸ್ನ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. 2013ರಿಂದ 2019ರವರೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ.

2015ರಲ್ಲಿ ಕಾಶಿನಾಥ ನಾಯ್ಕರ ಬಳಿ ತರಬೇತಿಗೆ ಸೇರಿದ್ದ ನೀರಜ್ ಚೋಪ್ರಾ, 2017ರವರೆಗೆ ತರಬೇತಿ ಪಡೆದಿದ್ದರು. ಅಂದೇ 86.48 ಮೀಟರ್ ಜೂನಿಯರ್ ವಿಶ್ವ ದಾಖಲೆ ಮಾಡಿದ್ದ ನೀರಜ್ ಚೋಪ್ರಾ, ಇತ್ತೀಚಿಗೆ ವಿದೇಶಿ ತರಬೇತುದಾರರ ಬಳಿ ತರಬೇತಿ ಪಡೆಯಲಾರಂಭಿಸಿದ್ದರು.

2016ರಲ್ಲೇ ನೀರಜ್ ಚೋಪ್ರಾ ಚಿನ್ನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಯಾಕೆಂದರೆ, ಕೆಲವು ಯುವಕರು ತರಬೇತಿ ಪಡೆದು ಒಂದಷ್ಟು ಕ್ರೀಡೆಗಳಲ್ಲಿ ಸಾಧನೆ ತೋರುತ್ತಿದ್ದಂತೆ ಅಹಂ ಬರುತ್ತದೆ. ಆದರೆ ನೀರಜ್ ಚೋಪ್ರಾನಲ್ಲಿ ಎಳ್ಳಷ್ಟು ಆ ಗುಣವಿಲ್ಲ. ಎಲ್ಲರ ಆಶೀರ್ವಾದ ಆತನ ಮೇಲಿದೆ. ಆತನ ಗುಣ ಕೂಡ ಇಂದು ಆತ ಚಿನ್ನದ ಪದಕ ಗೆಲ್ಲಲು ಕಾರಣವಾಗಿದೆ.

ನೀರಜ್ ಚೋಪ್ರಾಗೆ ಪ್ರತಿಭೆ ದೇವರು ಕೊಟ್ಟ ವರ. ದೇಶಕ್ಕೆ ಮೊದಲ ಒಲಿಂಪಿಕ್ಸ್ ಮೆಡಲ್ ಈತನೇ ತರುತ್ತಾನೆಂದು ಅವರ ಚಿಕ್ಕಪ್ಪರ ಬಳಿ 2016ರಲ್ಲೇ ನಾನು ಹೇಳಿದ್ದೆ. ಆ ಭವಿಷ್ಯ ಇಂದು ನಿಜವಾಗಿದೆ. ನನಗೂ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಕನಸು ಇತ್ತು. ಆದರೆ ಅದನ್ನು ನನ್ನ ಶಿಷ್ಯ ನೀರಜ್ ಚೋಪ್ರಾ ನನಸು ಮಾಡಿದ್ದಾರೆ. ಹೀಗಾಗಿ ಹೆಚ್ಚು ಖುಷಿಯಾಗಿದೆ,ಎಂದಿದ್ದಾರೆ.

ವಿಶ್ವ ಚಾಂಪಿಯನ್ಶಿಪ್, ಏಷಿಯನ್ ಗೇಮ್ಸ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಪದಕ ಸಾಧನೆ ಮೆರೆದ ಅನುರಾಣಿ 2013ರಿಂದ ಕಾಶಿನಾಥ ಅವರ ಬಳಿ ತರಬೇತಿ ಪಡೆದಿದ್ದು, ಇನ್ನೋರ್ವ ಕ್ರೀಡಾಪಟು ಶಿವಪಾಲ್ರಿಗೂ ಕಾಶಿನಾಥ್ ತರಬೇತಿ ನೀಡಿದ್ದರು.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಎರಡನೇ ಎಸೆತದಲ್ಲೇ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಅಥ್ಲೆಟಿಕ್ ಲೋಕ ನಿಬ್ಬೆರಗಾಗುವಂತೆ ಮಾಡಿದ್ದಂತು ಸುಳ್ಳಲ್ಲ.

ನೀರಜ್ ಚೋಪ್ರಾರವರ ಸಾಧನೆ ಇತರ ಪ್ರತಿಭಾವಂತ ಕ್ರೀಡಾಪಟುಗಳಿಗೆ ಆಶಾಕಿರಣವಾಗಿದೆ ಎಂದರೆ ತಪ್ಪಲ್ಲ. ಏಕೆಂದರೆ ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು, ಯುವಕರನ್ನು ಹೊಂದಿರುವ ದೇಶ ನಮ್ಮದು ಈಗಲೂ ಸಹ ಮೂಲಭೂತ ಸೌಲಭ್ಯಗಳು ಅವಕಾಶಗಳಿಲ್ಲದೇ ಇರುವ ಅದಿವಾಸಿ ಬುಡಕಟ್ಟುಗಳು ವಾಸಮಾಡುವ ಗ್ರಾಮಾಂತರ ಪ್ರದೇಶಗಳಲ್ಲಿ ಲಕ್ಷಾಂತರ ಪ್ರತಿಭಾವಂತರು ಸಣ್ಣಪುಟ್ಟ ಕೆಲಸಮಾಡಿಕೊಂಡು ತಮ್ಮ ಕನಸುಗಳನ್ನು ಅದಮಿಟ್ಟುಕೊಂಡು ಬದುಕುತ್ತಿರುವುದು ಕಾಣುತ್ತಿದ್ದವೇ ಮೀರುಬಾಯಿ ಅಂತಹ ಕೆಲವು ಬೆಳಕಿಗೆ ಬರುತ್ತಿದ್ದಾರೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ಸಂಸ್ಥೆಗಳು ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಿ ಕೋಟ್ಯಾಂತರ ರೂಪಾಯಿ ಹಣವನ್ನು ವಿನಿಯೋಗಿಸಿದರು ಸಹ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಶಾಲಾ ಕಾಲೇಜುಗಳಲ್ಲಿ ಕ್ರೀಡೆಗೆ ಇರುವ ಸಮಯವನ್ನು ಕೆಲವ ಓದಿಗೆ ಮೀಸಲಿಟ್ಟ ಪರಿಣಾಮ ಒಲಂಪಿಕ್ಸ್ ನಲ್ಲಿ 10 ಮಾತ್ರ ಪದಕಗಳನ್ನು ಪಡೆಯಲು ಶಕ್ತರಾಗಿದ್ದೇವೆ.

ನಾವುಗಳು ಗಂಭೀರವಾಗಿ ಯೋಚಿಸಬೇಕಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕ ಪ್ರಶಸ್ತಿಗಳನ್ನು ಪಡೆಯಬೇಕಾದರೆ ಮೊದಲು ಭ್ರಷ್ಟಾಚಾರ, ಜಾತಿ ತಾರತಮ್ಯ, ಶಿಫಾರಸ್ಸುಗಳನ್ನು ಮಾಡಿ ಅರ್ಹತೆ ಇಲ್ಲದವರಿಗೆ ಅವಕಾಶ ನೀಡುವುದು. ಕೆಳಪೆ ಕ್ರೀಡಾ ಸಲಕರಣೆಗಳು ನೀಡುವುದು, ಇಂತಹ ಪರಿಸ್ಥಿತಿಯಲ್ಲಿ ಸಹ ನಾವು ದೇಶಕ್ಕಾಗಿ ಆಡುತ್ತೇವೆ ಎಂಬ ಮನೋಭಾವದಿಂದ ಇಂದಿಗೂ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲಲು ಸಾಧ್ಯವಾಗಿದೆ. ಭಾರತವು ತಂತ್ರಜ್ಞಾನ, ನವೋದ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ದಿನಮಾನಗಳಲ್ಲಿ ಕ್ರೀಡೆಗೆ ಮೊದಲ ಪ್ರಶಾಸ್ತ್ಯ ನೀಡಿದಾಗ ಮತ್ತು ಅತ್ಯುತ್ತಮವಾದ ಸೌಲಭ್ಯಗಳನ್ನು ಒದಗಿಸಿದಾಗ ನೀರಜ್ ರಂತಹ ಲಕ್ಷಾಂತರ ಜನರು ದೇಶದ ಕೀರ್ತಿಯನ್ನು ಬೆಳಗಿಸುವುದರಲ್ಲಿ ಸಂಶಯವಿಲ್ಲ.
ಓಲಂಪಿಕ್ ನಲ್ಲಿ ಪದಕ ವಿಜೇತರಿಗೆ ಅಭಿನಂದನೆಗಳು ಹೇಳುತ್ತಾ ನಿಮ್ಮ ಈ ಕಠಿಣ ಪರಿಶ್ರಮ ಶ್ರದ್ಧೆ ಗೆಲ್ಲುವ ಛಲ ಇತರರಿಗೆ ಸ್ಫೂರ್ತಿ ನೀಡಲಿ.