ಬೆಳಗಾವಿ: ಹಲವು ತಿಂಗಳಿಂದ ಕೊರೊನಾ ಸೋಂಕಿನ ಭೀತಿಯಿಂದ ಕಂಗೆಟ್ಟಿರುವ ಬೆಳಗಾವಿ ಜಿಲ್ಲೆಯ ಜನ ಈಗ ನಿರಾಳರಾಗುವಂತಾಗಿದೆ.
ಈಚೆಗೆ ನಡೆಸಿದ ರಕ್ತ ಮಾದರಿ ತಪಾಸಣೆಯಿಂದ ಸಮಾಧಾನಕರ ಮಾಹಿತಿ ಲಭ್ಯವಾಗಿದ್ದು, ಕೋವಿಡ್ ಎಚ್ಚರಿಕೆ ಕ್ರಮಗಳನ್ನು ಇನ್ನಷ್ಟು ದಿನ ಕಟ್ಟುನಿಟ್ಟಾಗಿ ಪಾಲಿಸಿದರೆ ಬೆಳಗಾವಿ ಕೊರೊನಾ ಸೋಂಕು ಮುಕ್ತ ಜಿಲ್ಲೆಎನಿಸಿಕೊಳ್ಳುವ ಸಾಧ್ಯತೆಗಳಿವೆ.
ರಕ್ತ ತಪಾಸಣೆಗೆ ಒಳಪಟ್ಟ ಜಿಲ್ಲೆಯ ಶೇ.85 ರಷ್ಟು ಜನರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದೆ.
ಈ ಮೊದಲಿನ ಸಂಖ್ಯೆಯಷ್ಟೇ ಕೊರೊನಾ ಪರೀಕ್ಷೆ ನಡೆಯುತ್ತಿದ್ದು, ಸರಾಸರಿ ಹೊಸ ಸೋಂಕಿತರ ಸಂಖ್ಯೆ ಶೇ. 1ರಷ್ಟಾಗಿದೆ. ಚಿಕಿತ್ಸೆ ನಂತರ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 97.6ರಷ್ಟಾಗಿದೆ.
ಅಕ್ಟೋಬರ್‍ನಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಂದ ರಕ್ತದ ಮಾದರಿ ಸಂಗ್ರಹಿಸಿತ್ತು. ಬೆಳಗಾವಿ ಜಿಲ್ಲೆಯ 14 ತಾಲೂಕುಗಳಲ್ಲಿನ ಎಲ್ಲ ವಯೋಮಾನದ ಆರೋಗ್ಯವಂತರಿಂದ ಒಟ್ಟು 472 ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಕೊರೊನಾ ಸಂಶೋಧನಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ರಕ್ತ ಮಾದರಿಯ ತಪಾಸಣೆ ವರದಿ ಈಚೆಗೆ ಬಂದಿದ್ದು, ಜಿಲ್ಲೆಯಿಂದ ಕಳುಹಿಸಿಕೊಟ್ಟಿದ್ದ 472 ರಕ್ತ ಮಾದರಿಗಳ ಪೈಕಿ ಶೇ. 85ರಷ್ಟು ಜನರಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸುವ ರೋಗ ನಿರೋಧಕ ಶಕ್ತಿ ಬೆಳವಣಿಗೆ ಆಗಿರುವುದು ಕಂಡು ಬಂದಿದೆ ಎನ್ನುತ್ತಿದ್ದಾರೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು.
ಲಾಕ್‍ಡೌನ್ ಸೇರಿದಂತೆ ಕೊರೊನಾ ಸಂಖ್ಯೆ ಹೆಚ್ಚಿರುವ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು, ಕೊರೊನಾ ನಿಯಮಾವಳಿ ಪಾಲಿಸುವಲ್ಲಿ ಸಾರ್ವಜನಿಕರ ಸ್ಪಂದನೆ ಜತೆಗೆ ಜಿಲ್ಲೆಯ ಪೂರಕ ವಾತಾವರಣ ಸಾರ್ವಜನಿಕರಲ್ಲಿ ರೋಗ ನಿರೋಧಕತೆ ಹೆಚ್ಚಲು ಕಾರಣವಾಗಿದೆ ಎನ್ನಲಾಗುತ್ತಿದೆ.