ಆಟ ಮುಗಿಸಿ ಮತ್ತೊಬ್ಬರ ಬಾಳಲಿ ಬೆಳಕಾದ ಯುವರತ್ನ

ಡಾ.ಗುರು ಪ್ರಸಾದ್ ರಾವ್ ಹವಾಲ್ದಾರ್
ಲೇಖಕರು ಮತ್ತು ಉಪನ್ಯಾಸಕರು

ಕರುನಾಡಿನ ಅಪ್ಪು ಅಭಿಮಾನಿ ಪಾಲಿನ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಇಹ ಲೋಕವನ್ನು ತ್ಯಜಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ. ಒಲ್ಲದ ಮನಸ್ಸಿನಲ್ಲೇ ಈ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾದ ಸಂದರ್ಭ ಇದು. ಈ ವಿಚಾರವನ್ನು ಕರುನಾಡು ಅರಗಿಸಿ ಕೊಳ್ಳಲು ಸಾಧ್ಯವಿಲ್ಲ. ಅಪ್ಪು ಅಗಲಿಕೆ ಕರುನಾಡಿನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಅಪ್ಪು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ಬೆಳಕಾಗಿದ್ದಾರೆ.

ಬಾಲ್ಯದಲ್ಲಿಯೇ ತಮ್ಮ ಅಭಿನಯದ ಛಾಪು ಪ್ರದರ್ಶಿಸಿದ್ದ ಪುನೀತ್ ರಾಜ್‌ಕುಮಾರ್, ‘ಅಪ್ಪು’ ಆಗಿ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಅಚ್ಚುಮೆಚ್ಚಿನ ನಟರಾದರು. ಹೆಸರಿನ ಮುಂದೆ ‘ರಾಜಕುಮಾರ’ ಎಂಬ ಕಿರೀಟವಿದ್ದರೂ ಅಣ್ಣಾವ್ರಂತೆಯೇ ಸರಳತೆಯನ್ನು ಮೈಗೂಡಿಸಿಕೊಂಡರು.
ಪುನೀತ್ ಸಿನಿಮಾಗಳಿಗೆ ಜನರ ಮನಸಿನಲ್ಲಿ ವಿಶೇಷ ಸ್ಥಾನವಿದೆ. ಏಕೆಂದರೆ ಅವರ ಚಿತ್ರಗಳು ಕುಟುಂಬ ಸಮೇತ ಕುಳಿತು ನೋಡುವಂತಹವು. ಉತ್ತಮ ಸಾಮಾಜಿಕ ಮೌಲ್ಯ ಹಾಗೂ ಅಂಶಗಳು ಇರುತ್ತಿದ್ದವು.
ಆರು ತಿಂಗಳ ಮಗುವಾಗಿರುವಾಗಲೇ 1976ರಲ್ಲಿ ‘ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ಪರದೆ ಮೇಲೆ ಕಾಣಿಸಿಕೊಂಡವರು ಪುನೀತ್. 1977ರಲ್ಲಿ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗ ಅವರಿಗೆ ಒಂದು ವರ್ಷ. 1978ರಲ್ಲಿ ‘ತಾಯಿಗೆ ತಕ್ಕ ಮಗ’, 1980ರಲ್ಲಿ ವಸಂತಗೀತ, 1981ರಲ್ಲಿ ಭೂಮಿಗೆ ಬಂದ ಭಗವಂತ ಮತ್ತು ಭಾಗ್ಯವಂತ, 1982ರಲ್ಲಿ ಹೊಸಬೆಳಕು ಮತ್ತು ಚಲಿಸುವ ಮೋಡಗಳು ಚಿತ್ರಗಳಲ್ಲಿ ಪುನೀತ್ ಅಭಿನಯಿಸಿದರು. ಚಲಿಸುವ ಮೋಡಗಳು ಚಿತ್ರಕ್ಕೆ ‘ಅತ್ಯುತ್ತಮ ಬಾಲನಟ’ ರಾಜ್ಯ ಪ್ರಶಸ್ತಿ ಬಂದಿತ್ತು.

1983ರಲ್ಲಿ ಭಕ್ತ ಪ್ತಹ್ಲಾದ ಮತ್ತು ಎರಡು ನಕ್ಷತ್ರಗಳು (ಅತ್ಯುತ್ತಮ ಬಾಲನಟ- ರಾಜ್ಯಪ್ರಶಸ್ತಿ) ಸಿನಿಮಾಗಳಲ್ಲಿ ಮಾಸ್ಟರ್ ಲೋಹಿತ್ ಮಿಂಚಿದರು. 1984ರಲ್ಲಿ ‘ಯಾರಿವನು’ ಚಿತ್ರದಲ್ಲಿ ನಟಿಸಿದರು. 1985ರಲ್ಲಿ ತೆರೆಕಂಡ ‘ಬೆಟ್ಟದ ಹೂವು’ ಪುನೀತ್ ಸಿನಿಮಾ ಜರ್ನಿಯಲ್ಲಿ ಮರೆಯಲಾಗದ ಸಿನಿಮಾ ಎನ್ನಬಹುದು. ಅದುವರೆಗಿನ ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜತೆಗೇ ಅಭಿನಯಿಸಿದ್ದರು. ಇದು ರಾಜ್‌ಕುಮಾರ್ ನಟಿಸದೆ ಇದ್ದ ಸಿನಿಮಾ. ಈ ಚಿತ್ರಕ್ಕಾಗಿ ಪುನೀತ್ ರಾಷ್ಟ್ರ ಪ್ರಶಸ್ತಿ ಪಡೆದರು. ಅದುವರೆಗೂ ‘ಮಾಸ್ಟರ್ ಲೋಹಿತ್’ ಆಗಿದ್ದ ಅವರು ಈ ಸಿನಿಮಾದಿಂದ ‘ಮಾಸ್ಟರ್ ಪುನೀತ್’ ಆದರು.
1988ರಲ್ಲಿ ಅವರು ಶಿವರಾಜ್‌ಕುಮಾರ್ ಜತೆ ಮೊದಲ ಬಾರಿ ‘ಶಿವ ಮೆಚ್ಚಿದ ಕಣ್ಣಪ್ಪ’ದಲ್ಲಿ ನಟಿಸಿದರು. ರಾಜ್‌ಕುಮಾರ್ ಅವರೊಂದಿಗೆ ಪುನೀತ್ ನಟಿಸಿದ ಕೊನೆಯ ಸಿನಿಮಾ 1989ರಲ್ಲಿ ತೆರೆ ಕಂಡ ‘ಪರಶುರಾಮ್’. ಪುನೀತ್ ಬಾಲನಟರಾಗಿ ನಟಿಸಿದ ಕೊನೆಯ ಸಿನಿಮಾ ಕೂಡ ಇದು. ಇದರ ನಂತರ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಬದುಕು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಅಲ್ಲಿಂದ ಸುಮಾರು 13 ವರ್ಷ ಪುನೀತ್ ಮತ್ತು ಸಿನಿಮಾ ನಡುವೆ ಸುದೀರ್ಘ ಅಂತರ ಉಂಟಾಯಿತು.

ಭರ್ಜರಿ ಎಂಟ್ರಿ ಕೊಟ್ಟ ‘ಅಪ್ಪು’ 2002ರ ಏಪ್ರಿಲ್‌ನಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಚಿತ್ರದ ಮೂಲಕ ಪುನೀತ್ ಸಿನಿಮಾ ರಂಗಕ್ಕೆ ರೀ ಎಂಟ್ರಿ ನೀಡಿದರು. ಈ ಬಾರಿ ಅವರು ನಾಯಕನಟನಾಗಿ ಕಾಲಿಟ್ಟರು.ಅಭಿಮಾನಿಗಳ ಪಾಲಿನ ಪ್ರೀತಿಯ ‘ಪವರ್ ಸ್ಟಾರ್’ ಆದರು, ‘ಅಭಿ’, ‘ವೀರ ಕನ್ನಡಿಗ’, ‘ಮೌರ್ಯ’, ‘ಆಕಾಶ್’, ‘ನಮ್ಮ ಬಸವ’, ‘ಅಜಯ್’, ‘ಅರಸು’, ‘ಮಿಲನ’ ಹೀಗೆ ಸಾಲು ಸಾಲು ಹಿಟ್‌ಗಳು ಚಿತ್ರಗಳು. ‘ಬಿಂದಾಸ್’, ‘ವಂಶಿ’, ‘ರಾಜ್ ದಿ ಶೋ ಮ್ಯಾನ್’, ‘ರಾಮ್’ ಸಿನಿಮಾಗಳದ್ದು ಒಂದು ತೂಕವಾದರೆ, ಪುನೀತ್ ಇಮೇಜ್‌ಅನ್ನು ಬದಲಿಸಿದ್ದು, 2010ರಲ್ಲಿ ತೆರೆ ಕಂಡ ದುನಿಯಾ ಸೂರಿ ನಿರ್ದೇಶನದ ‘ಜಾಕಿ’ ಚಿತ್ರ. ಅದೇ ಸಮಯದಲ್ಲಿ ಅವರ ವಿಭಿನ್ನ ಇಮೇಜ್‌ನ ‘ಪೃಥ್ವಿ’ ಕೂಡ ಜನಮನ್ನಣೆ ಗಳಿಸಿತು.
ಹುಡುಗರು’ ಚಿತ್ರದಲ್ಲಿ ಬಹುತಾರಾಗಣದಲ್ಲಿಯೂ ನಟಿಸಿದರು. ‘ಪರಮಾತ್ಮ’ದಂತಹ ವಿಭಿನ್ನ ಪಾತ್ರದಲ್ಲಿ ಸೈ ಎನಿಸಿಕೊಂಡರು. ‘ಅಣ್ಣಾ ಬಾಂಡ್’, ‘ಯಾರೇ ಕೂಗಾಡಲಿ’ ಚಿತ್ರಗಳು ಆಕ್ಷನ್ ಮತ್ತು ಸಾಮಾಜಿಕ ಮೌಲ್ಯದ ಎರಡು ಅಂಶಗಳನ್ನು ಬಿಂಬಿಸಿದವು. ‘ನಿನ್ನಿಂದಲೇ’ ಪುನೀತ್ ಅಭಿಮಾನಿಗಳಿಗೆ ಬೇಸರ ಮೂಡಿಸಿದರೆ, ‘ಪವರ್’ ಮತ್ತೆ ಹುರುಪು ತಂದುಕೊಟ್ಟಿತು. ‘ಮೈತ್ರಿ’ಯಲ್ಲಿ ಮೋಹನ್ ಲಾಲ್ ಜತೆ ನಟಿಸಿದರು ಮತ್ತು ರಾಜಕುಮಾರ, ಯುವ ರತ್ನ ಚಿತ್ರ ಗಳು ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆ ಕೌಟುಂಬಿಕ ಮೌಲ್ಯಗಳನ್ನು ತಿಳಿಸುವಂತಹ ಚಿತ್ರ ವಾಗಿದ್ದವು.
ಸಿನಿಮಾಗಳ ಜತೆಗೆ ಕಿರುತೆರೆ ಶೋಗಳಲ್ಲಿಯೂ ಪುನೀತ್ ಜನರಿಗೆ ಹತ್ತಿರವಾಗಿದ್ದಾರು. ತಮ್ಮ ಸಿನಿಮಾಗಳಲ್ಲದೆ ಬೇರೆ ನಾಯಕರ ಸಿನಿಮಾಗಳಲ್ಲಿಯೂ ಹಾಡಿದ್ದಾರೆ. ಅವರು ಬಾಲನಟನಾಗಿ ಹಾಡಿದ್ದ ‘ಬಾನದಾರಿಯಲ್ಲಿ ಸೂರ್ಯ’, ‘ಕಾಣದಂತೆ ಮಾಯವಾದನು’, ‘ಕಣ್ಣಿಗೆ ಕಾಣುವ ದೇವರು’ ಎಂದಿಗೂ ಎವರ್‌ಗ್ರೀನ್ ಹಾಡುಗಳೆನಿಸಿವೆ.ಬಾಲನಟನಾಗಿದ್ದರಿಂದ ನಾಯಕನಟನಾಗಿ ಇದುವರೆಗೂ ಪುನೀತ್ ನಟಿಸಿರುವ ಸಿನಿಮಾಗಳ ಸಂಖ್ಯೆ ಸುಮಾರು 44ಕ್ಕೂ ಹೆಚ್ಚು,ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 90ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಆಕ್ಷನ್, ಮೆಲೋಡ್ರಾಮಾ, ಸಸ್ಪೆನ್ಸ್ ಹೀಗೆ ವಿಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿರುವ ಕೆಲವೇ ಸಮಕಾಲೀನ ನಟರಲ್ಲಿ ಪುನೀತ್ ಒಬ್ಬರು.
ನಿರ್ಮಾಪಕರಾಗಿ ಪುನೀತ್ ತಮ್ಮದೇ ಆದ ನಿರ್ಮಾಣ ಸಂಸ್ಥೆ ಇದ್ದರೂ, ಪ್ರಯೋಗಾತ್ಮಕ ಹಾಗೂ ಕಂಟೆಂಟ್ ಆಧಾರಿತ ಸಿನಿಮಾಗಳಿಂದ ಗುರುತಿಸಿಕೊಳ್ಳಲೆಂದೇ ‘ಪಿಆರ್‌ಕೆ ಪ್ರೊಡಕ್ಷನ್ಸ್’ ಆರಂಭಿಸಿದ್ದರು. ಈ ಮೂಲಕ ವಿಭಿನ್ನ ಸಿನಿಮಾಗಳನ್ನು ಮಾಡುವ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ದರು. ಇದರ ಮೊದಲ ಪ್ರಯತ್ನ ‘ಕವಲುದಾರಿ’ ಅಪಾರ ಮನ್ನಣೆ ಗಳಿಸಿತ್ತು. ‘ಮಾಯಾಬಜಾರ್ 2016’ ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ‘ಲಾ’ ಹಾಗೂ ಪ್ರೆಂಚ್ ಬಿರಿಯಾನಿ ಮತ್ತೊಂದು ಚಿತ್ರ ನಿರ್ಮಿಸಿದ್ದಾರೆ
ಅವರ ಹೋಮ್-ಪ್ರೊಡಕ್ಷನ್ಸ್ ಹೊರತುಪಡಿಸಿ ಇತರ ಹಾಡುಗಳಿಗೆ ಅವರ ಸಂಭಾವನೆಯನ್ನು ಚಾರಿಟಿಗಳಿಗೆ ನೀಡುತ್ತಿದ್ದರು. ಅನೇಕ ಸಮಾಜಿಕ ಕಾರ್ಯಗಳಲ್ಲಿ, ಸರ್ಕಾರಿ ಇಲಾಖೆಗಳ ಅನೇಕ ಯೋಜನೆಗಳಿಗೆ ಉಚಿತವಾಗಿ ರಾಯಭಾರಿಯಾಗಿದ್ದರು.
ಪುನೀತ್‌ರಾಜ್‌ಕುಮಾರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂದಾಗ, ಅವ್ರು ಚಿಕಿತ್ಸೆ ಪಡೆದು ಹೊರ ಬರುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಹಂಬಲ ಇತ್ತು. ಆದ್ರೆ ಯಾರ ಪ್ರಾರ್ಥನೆಯೂ ಆ ದೇವರಿಗೆ ಕೇಳಲಿಲ್ಲ ಎನಿಸುತ್ತೆ. ಅಪ್ಪು ಎಲ್ಲರ ಹಂಬವನ್ನೂ ಸುಳ್ಳು ಮಾಡಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕೇವಲ 46ನೇ ವಯಸ್ಸಿಗೆ ಪುನೀತ್ ರಾಜ್‌ಕುಮಾರ್‌ ಪತ್ನಿ, ಪುತ್ರಿಯನ್ನು ಅಸಂಖ್ಯಾತ ಅಭಿಮಾನಿಗಳನ್ನು ಅಗಲಿ ತಮ್ಮ ಜೀವನ ಯಾನವನ್ನು ಮುಗಿಸಿ ಹೋಗಿದ್ದಾರೆ.
ಅಪ್ಪು ಮತ್ತೆ ಕರುನಾಡಿನಲ್ಲಿ ಹುಟ್ಟಿಬನ್ನಿ