ಬೆಂಗಳೂರು: ಬಿಜೆಪಿಯಿಂದ ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಶಾಸಕರು ಬರೋದಾದರೆ ಅವರನ್ನು ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಲೋಕಸಭೆ ಚುನಾವಣೆ ವೇಳೆಗೆ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗುತ್ತಿದೆಯಲ್ಲ ಎಂಬ ವರದಿಗಾರರ ಪ್ರಶ್ನಗೆ ಹೀಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬರಬಹುದು. ಬಿಜೆಪಿಯಲ್ಲಿ ಬೇಸರ ಆಗಿ, ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಹೇಳಿ ಶಾಸಕರು ಬರಬಹುದು.ಬಂದರೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಪರಿಶೀಲನೆ ಮಾಡಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಐಡಿಯಾಲಜಿ ನಂಬಿ, ಕಾಂಗ್ರೆಸ್ ಲೀಡರ್ಶಿಪ್ ಮೇಲೆ ನಂಬಿಕೆ ಇಟ್ಟು ಪಕ್ಷಕ್ಕೆ ಬಂದರೆ ಬರಬಹುದು. ಹಿಂದೆ ಪಕ್ಷ ಬಿಟ್ಟು ಹೋದವರು ಕೂಡಾ ಬರಬಹುದು ಎಂದು ಆಹ್ವಾನ ನೀಡಿದರು.
ಪಕ್ಷ ಬಿಟ್ಟು ಹೋಗೋರು ವಾಪಸ್ ಬಂದಿರೋ ಉದಾಹರಣೆ ಇದೆ, ಆದರೆ ಅವರಿಗೆ ಫಸ್ಟ್ ಬೆಂಚ್ ಸಿಗಲ್ಲ. ತಪ್ಪು ಮಾಡಿದ್ದನ್ನು ಸರಿ ಮಾಡಿಕೊಳ್ಳುತ್ತೇವೆ ಎಂದರೆ ಮಾಡಿಕೊಂಡು ಬರಬಹುದು. ಫಸ್ಟ್ ಬೆಂಚ್ ಸಿಗದೇ ಹೋದರೂ ಅವರಿಗೆ ಕ್ಲಾಸ್ ರೂಂಗೆ ಅವಕಾಶ ಇದೆ ಎಂದು ಮಾರ್ಮಿಕವಾಗಿ ನುಡಿದರು.
ನನ್ನ ಜೊತೆ ಶಾಸಕರು ಚರ್ಚೆ ಮಾಡಿರೋದರ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಪರಮೇಶ್ವರ್ ಹೇಳಿದರು.
ಈ ಬಾರಿ ಕರ್ನಾಟಕದ ಜನತೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ನಡೆದಿದ್ದೇವೆ. ನುಡಿದಂತೆ ನಡೆದಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ಇದಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ ಎಂದರು.
ಬಿಜೆಪಿ ಅವರು ಕಳೆದ ಬಾರಿ 25 ಸ್ಥಾನ ಪಡೆದಿದ್ದರು. ಈ ಬಾರಿ ನಾವು ಇಷ್ಟು ಸ್ಥಾನ ಪಡೆಯಬೇಕು ಅಂತ ನಿರ್ಧರಿಸಿದ್ದೇವೆ ಜನರ ಆಶೀರ್ವಾದ ಹೇಗಿರುತ್ತದೊ ನೋಡೋಣ ಎಂದು ಗೃಹ ಸಚಿವರು ತಿಳಿಸಿದರು.