ಭಾಸ್ಕರ್ ರಾವ್ ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ಆಮ್‌ ಆದ್ಮಿ ಪಕ್ಷದ ಕರ್ನಾಟಕ ಘಟಕದ ಉಪಾಧ್ಯಕ್ಷ, ನಿವೃತ್ತ ಪೊಲೀಸ್‌ ಅಧಿಕಾರಿ ಭಾಸ್ಕರ್ ರಾವ್‌‌  ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಶಂಕರಪ್ಪ ಅವರ ಸಮ್ಮುಖದಲ್ಲಿ ಭಾಸ್ಕರ್ ರಾವ್‌‌ ಬಿಜೆಪಿಗೆ ಸೇರಿದರು.

ಆಮ್‌ ಆದ್ಮಿ ಪಾರ್ಟಿ (ಎಎಪಿ)ಯ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲೇ ಅವರ ಪಕ್ಷಕ್ಕೆ ಒಂದು ಆಘಾತ ಉಂಟಾಗಿದೆ.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಸ್ಕರ್‌ ರಾವ್‌, ನನ್ನ ಬದುಕಿನಲ್ಲಿ ಇಂದು ಬಹಳ ಸಂತೋಷದ ದಿನ

ಎಂದು ಬಣ್ಣಿಸಿದ್ದಾರೆ.

ಸನಾತನ ಧರ್ಮಕ್ಕೆ ಸೇರಿದ ರಾಷ್ಟ್ರೀಯತೆ, ರಾಷ್ಟ್ರದ ಹಿತ ಬಯಸುವ ಪಕ್ಷಕ್ಕೆ ನಾನು ಸೇರ್ಪಡೆ ಆಗಿರುವುದಕ್ಕೆ ಖುಷಿ ಇದೆ. ಬಾಲ್ಯದಿಂದಲೂ ನಾನು ರಾಷ್ಟ್ರೀಯತೆ, ಸನಾತನ ಧರ್ಮಕ್ಕೆ ಬದ್ಧನಾಗಿದ್ದವನು ಎಂದು ಹೇಳಿದರು.

ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಆಶಯದೊಂದಿಗೆ ರಾಜಕಾರಣಕ್ಕೆ ಇಳಿದೆ. ಆಮ್‌ ಆದ್ಮಿ ಪಾರ್ಟಿಗೆ ಸೇರಿದೆ. ಆದರೆ, ಒಂದು ವರ್ಷ ಕಾಲ ಆ ಪಕ್ಷವನ್ನು ಕಟ್ಟಲು ರಾಜ್ಯದಲ್ಲಿ ಬಹಳಷ್ಟು ಶ್ರಮವಹಿಸಿದೆವು. ಆದರೆ, ಅದು ಸಾಧ್ಯವಾಗಲೇ ಇಲ್ಲ.

ಅವರ ಕಾರ್ಯವಿಧಾನದಲ್ಲೂ ಒಂದು ಪ್ರಗತಿ ಇರಲಿಲ್ಲ.ನನಗೆ ಈಗಾಗಲೇ 58 ವರ್ಷ ವಯಸ್ಸಾಗಿದೆ. ಆದ್ದರಿಂದ ಇನ್ನಷ್ಟು ಸಮಯ ವ್ಯರ್ಥ ಮಾಡದೇ ಬಿಜೆಪಿಗೆ ಸೇರಿ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕು ಎಂಬ ಆಶಯದೊಂದಿಗೆ ಸೇರ್ಪಡೆ ಆಗಿದ್ದೇನೆ ಎಂದು ಭಾಸ್ಕರ್ ರಾವ್ ತಿಳಿಸಿದರು.