ಢಾಕಾದಲ್ಲಿ ಕಾಳಿ ದೇವಾಲಯ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ್

ಢಾಕಾ:ಪಾಕಿಸ್ತಾನ ಪಡೆಗಳಿಂದ 1971ರಲ್ಲಿ ಧ್ವಂಸಗೊಂಡಿದ್ದ ಐತಿಹಾಸಿಕ ಶ್ರೀ ರಮಣ ಕಾಳಿ ದೇವಾಲಯವನ್ನು ಪುನರ್ ನಿರ್ಮಿಸಲಾಗಿದ್ದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಉದ್ಘಾಟಿಸಿದರು.

ರಾಷ್ಟ್ರಪತಿ ಕೋವಿಂದ್ ಅವರು ಬಾಂಗ್ಲಾದೇಶದ ರಾಷ್ಟ್ರಪತಿ ಎಂ.ಅಬ್ದುಲ್ ಹಮೀದ್ ಅವರ ಆಹ್ವಾನದ ಮೇರೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, 1971ರ ವಿಮೋಚನಾ ಸಮರದ ಬಳಿಕ ಪಾಕಿಸ್ತಾನದಿಂದ ಬಾಂಗ್ಲಾ ಸ್ವಾತಂತ್ರ್ಯ ಪಡೆದ ಸ್ವರ್ಣ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಜೀರ್ಣೋದ್ಧಾರಗೊಂಡಿರುವ ದೇವಾಲಯದಲ್ಲಿ ರಾಷ್ಟ್ರಪತಿ ಮತ್ತು ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರು ಪ್ರಾರ್ಥನೆ ಸಲ್ಲಿಸಿದರು.

ದೇಶದಲ್ಲಿ ಪ್ರತಿರೋಧ ಚಳವಳಿಯನ್ನು ಗುರಿಯಾಗಿಸಿ 1971ರಲ್ಲಿ ಆಪರೇಷನ್ ಸರ್ಚ್ ಲೈಟ್ ಸಾಂಕೇತಿಕ ಹೆಸರಿನಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ದೇವಸ್ಥಾನ ಸಂಪೂರ್ಣ ಧ್ವಂಸವಾಗಿತ್ತು.

ಈ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದ ಪಾಕಿಸ್ತಾನಿ ಪಡೆಗಳು ಅದರಲ್ಲಿದ್ದ ಭಕ್ತಾದಿಗಳೂ ಸೇರಿದಂತೆ ಹಲವರ ಸಾವಿಗೆ ಕಾರಣವಾಗಿದ್ದವು.

ದೇವಸ್ಥಾನದ ನವೀಕರಣಕ್ಕೆ ಭಾರತ ನೆರವು ನೀಡಿದೆ. ಮುಸ್ಲಿಂ ಬಾಹುಳ್ಯದ ಬಾಂಗ್ಲಾದೇಶದ 169 ದಶಲಕ್ಷ ಜನಸಂಖ್ಯೆಯಲ್ಲಿ ಹಿಂದೂಗಳು ಪ್ರತಿಶತ 10ರಷ್ಟಿದ್ದಾರೆ. 50 ವರ್ಷಗಳ ನಂತರ ಶ್ರೀ ರಮಣ ಕಾಳಿ ದೇವಾಲಯವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಉದ್ಘಾಟಿಸಿದುದು ವಿಶೇಷವಾಗಿತ್ತು.