ಭಾರತ ದೇಶ ಕಂಡ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com

ವಿಶ್ವದ ಅತ್ಯುತ್ತಮ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ರಾಜಕಾರಣಿ, ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ, ನುಡಿದಂತೆ ನಡೆಯುವ ಮಾನವತಾವಾದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಿಂದು, ಅವರ ಜನ್ಮದಿನವನ್ನು  “ಉತ್ತಮ ಆಡಳಿತ ದಿವಸ” “Good Governance Day” ಎಂದು ಭಾರತಾದ್ಯಂತ 2014 ರಿಂದ ಆಚರಿಸಲಾಗುತಿದೆ.

 ವಾಜಪೇಯಿಯವರು 1924 ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ‘ಶಿಂದೆ ಕಿ ಚವ್ವಾಣಿ’ ಗ್ರಾಮದಲ್ಲಿ ಶ್ರೀ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಶ್ರೀಮತಿ ಕೃಷ್ಣದೇವಿ ದಂಪತಿಯ ಮಗನಾಗಿ ಜನಿಸಿದರು. ತಂದೆಯವರು ಶಾಲಾ ಮಾಸ್ತರ್ ಹಾಗೂ ಕವಿಯಾಗಿದ್ದರು. ಪ್ರೌಢ ವಿದ್ಯಾಭ್ಯಾಸದ ನಂತರ ಗ್ವಾಲಿಯರ್‍ನ ವಿಕ್ಟೊರಿಯಾ ಕಾಲೇಜ್ (ಇವಾಗ ಲಕ್ಷ್ಮೀಬಾಯಿ ಕಾಲೇಜು) ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪದವಿಯನ್ನು ಪಡೆದರು. ಖಾನ್ಪುರ್ ದಯಾನಂದ್ ಅಂಗ್ಲೊ ವೇದಿಕ್ ಕಾಲೇಜಿನಲ್ಲಿ ಎಂ.ಎ. ರಾಜನೀತಿ ಶಾಸ್ತ್ರ ಸ್ನಾತಕೋತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಗಳಿಸಿದರು.

 1939ರಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸ್ವಯಂ ಸೇವಕನಾಗಿ ಪಡೆದ ಅನುಭವ, ಅಧಿಕಾರಿಗಳ ತರಬೇತಿಯನ್ನು ಪಡೆದು 1940-44ರ ಅವಧಿಯಲ್ಲಿ ಪೂರ್ಣ ಅವಧಿಯ ಕಾರ್ಯಕರ್ತರಾದರು. ನಂತರ ವಿಸ್ತಾರಕ್ (ಪ್ರಾಚಾರಕ) ರಾಗಿ ಬಡ್ತಿ ಪಡೆದರು. ಜೊತೆಯಲ್ಲಿ ದೀನ್ ದಯಾಳ್ ಉಪಾದ್ಯಾಯರವರ ಹಿಂದಿ ಮಾಸಿಕ ‘ಪಾಂಚಜನ್ಯ ಹಿಂದಿ ವಾರಪತ್ರಿಕೆ ‘ಸ್ವದೇಶ್’ ವೀರ ಅರ್ಜುನ್ ದಿನಪತ್ರಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಡರು.

ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ದೇಶದಾದ್ಯಂತ 1942ರಲ್ಲಿ ಆರಂಭವಾಗಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅಟಲ್ ಜೀ ತಮ್ಮ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬ್ರಿಟೀಷರ ವಿರುದ್ದದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 23 ದಿನಗಳ ಕಾಲ ಜೈಲುವಾಸವನ್ನು ಅನುಭವಿಸಬೇಕಾಯಿತು.

 1951ರಲ್ಲಿ ಜನಸಂಘ ಹಿಂದೂ ಬಲ ಪಂಕ್ತಿಯ ರಾಜಕೀಯ ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1953ರಲ್ಲಿ ಭಾರತೀಯ ಜನಸಂಘದ ಮೂಲಕ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪರಿಚಯ ಆಯಿತು.

ಸಂಸತ್ತಿನ ಪ್ರವೇಶ

 1957ರಲ್ಲಿ ಮೊದಲ ಬಾರಿಗೆ ಅಟಲ್ ಜೀ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನು ಕಂಡು ನೆಹರೂ ಒಮ್ಮೆ  ಹೇಳಿದ್ದರಂತೆ, ಈ ವ್ಯಕ್ತಿ ಮುಂದೆ ದೇಶದ ಪ್ರಧಾನಿ ಆಗ್ತಾರೆ ಎಂದು,  ವಾಜಪೇಯಿಯವರ ತಮ್ಮ ಅಸಾಮಾನ್ಯ    ಬುದ್ದಿವಂತಿಕೆಯಿಂದಾಗಿ  ಜನ ಸಾಮಾನ್ಯರಲ್ಲಿ ಭಾರತೀಯ ಜನ ಸಂಘ ಅನ್ನುವ ಹೆಸರನ್ನೇ ಕೇಳದ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಿದರು. ಅದಕ್ಕೆ ಹೆಗಲು ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶ್ಮುಖ್ ಹಾಗೂ ಬಾಲರಾಜ್ ಮಧೋ, ನಂತರ ದೀನದಯಾಳ್ ಉಪಾದ್ಯಾಯರವರ ನಿಧನದ ನಂತರ ಜನಸಂಘದ ನಾಯಕತ್ವ ವಾಜಪೇಯಿಯವರ ಜವಬ್ಧಾರಿಗೆ ಬಂದಿತು. 1968ರ ಸಮಯದಲ್ಲಿ ಎಲ್. ಕೆ. ಅದ್ವಾನಿಯವರು ಇವರ ಜೊತೆಗೂಡಿದರು.

1975-77 ರ ಅವಧಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನಿಭವಿಸಿದರು. 1977ರಲ್ಲಿ ಜಯಪ್ರಕಾಶ್ ನಾರಾಯಣರವರ ಮಾರ್ಗದರ್ಶನದಲ್ಲಿ ಜನಸಂಘ ಮತ್ತು ಇನ್ನಿತರ ಪಕ್ಷಗಳನ್ನು ವಿಲೀನವಾಗಿ “ಜನತಾ ಪಕ್ಷ” ಉದಯವಾಯಿತು. ಲೋಕಸಭಾ ಚುನಾವಣೆಯಲ್ಲಿ ಜಯಭೇರಿಗಳಿಸಿದ “ಜನತಾಪಕ್ಷ” ಅಧಿಕಾರಕ್ಕೆ ಬಂದು ಶ್ರೀ ಮೋರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾದರು. ಮಾನ್ಯ ವಾಜಪೇಯಿಯವರು ವಿದೇಶಾಂಗ ಸಚಿವರಾದರು. ಯು.ಎನ್.ಒ. ದಲ್ಲಿ ಪ್ರಥಮಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ ನಂತರ ಭಾರತದ ವಿದೇಶಾಂಗ ನೀತಿಯಲ್ಲಿ ಹೆಚ್ಚಿನ ಬಲ ಪಡೆದು ಭಾರತದ ಹೆಸರಿಗೆ ಗೌರವ ದೊರೆಯುವಂತಾಯಿತು.

1980 ರಲ್ಲಿ ಜನತಾ ಪಕ್ಷ ಭಾರತೀಯ ಜನತಾಪಕ್ಷವಾಗಿ ರೂಪುಗೊಂಡಿತು. ಭಾರತೀಯ ಜನತಾಪಕ್ಷದ ಪ್ರಥಮ ರಾಷ್ಟ್ರೀಯ ಅಧ್ಯಕ್ಷರಾಗಿ ಜವಬ್ಧಾರಿಯನ್ನು ವಹಿಸಿಕೊಂಡರು. ಶ್ರೀಮತಿ ಇಂದಿರಾಗಾಂಧಿ ಮತ್ತು ನಂತರದ ಪ್ರಧಾನಮಂತ್ರಿಗಳ ಅವಧಿಯಲ್ಲಿ ವಿರೋಧಪಕ್ಷದ ನಾಯಕರಾಗಿ ಪಾರ್ಲಿಮೆಂಟಿನಲ್ಲಿ ಪ್ರಜಾಪ್ರಭುತ್ವದ ಘನತೆಗೌರವವನ್ನು ಎತ್ತಿಹಿಡಿದರು. ಇವರ ಕಾರ್ಯವೈಖರಿಗೆ ಆಡಳಿತ ಪಕ್ಷವು ಸಹ ತಲೆಬಾಗಿ ಗೌರವಿಸುತಿದ್ದದ್ದು ಅಂದಿನ ದಿನಗಳಲ್ಲಿ ದಾಖಲೆಯಾಗಿದೆ.

ಪ್ರಧಾನಿಯಾಗಿ-  ಅಕ್ಟೋಬರ್ 13, 1999ರಲ್ಲಿ, ಹೊಸ ಸಮ್ಮಿಶ್ರ ಸರ್ಕಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‍ಡಿಎ) ಮುಖ್ಯಸ್ಥರಾಗಿ ಎರಡನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1996ರಲ್ಲಿ ಇವರು ಅಲ್ಪಾವಧಿಗೆ ಪ್ರಧಾನಮಂತ್ರಿಯಾಗಿದ್ದರು. ಪಂಡಿತ್ ಜವಾಹರ್ ಲಾಲ್ ನೆಹರು ಅವರ ನಂತರ ಸತತ ಎರಡು ಬಾರಿ ಸೇವೆ ಸಲ್ಲಿಸಿದ ಪ್ರಥಮ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಭಾರತದ 11ನೇ ಪ್ರಧಾನಮಂತ್ರಿಯಾದರು. ಲೋಕಸಭೆಯಲ್ಲಿ ಬಹುಮತ ಸಾಬಿತುಪಡಿಸುವಲ್ಲಿ ವಿಫಲರಾಗಿ ಕೇವಲ ಹದಿಮೂರು ದಿನದಲ್ಲೇ ರಾಜಿನಾಮೆಯನ್ನು ನೀಡಬೇಕಾಯಿತು.

1998 ರಲ್ಲಿ ನಡೆದ ಸಾರ್ವರ್ತಿಕ ಚುನಾವಣೆಯಲ್ಲಿ ಮತ್ತೊಮ್ಮೆ ಎನ್.ಡಿ.ಎ. ಪಕ್ಷಗಳ ಸಹಕಾರದೊಂದಿಗೆ ದ್ವಿತೀಯ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1999 ರಲ್ಲಿ ಮತ್ತೊಮ್ಮೆ ರಾಜಕೀಯ ಚದುರಂಗದಾಟದಲ್ಲಿ ಎ.ಐ.ಡಿ.ಎಂ.ಕೆ. ತನ್ನ ಬೆಂಬಲ ಹಿಂಪಡೆದ ಪರಿಣಾಮವಾಗಿ ಲೋಕಸಭೆ ವಿಸರ್ಜನೆಯಾಯಿತು.

1999ರಲ್ಲಿ ನಡೆದ ಚುನಾವಣೆಯಲ್ಲಿ ವಾಜಪೇಯಿಯವರು ಮೂರನೆಯ ಬಾರಿಗೆ ಪ್ರಧಾನಮಂತ್ರಿಯಾಗಿ 2004ರ ವರೆಗೆ ಪೂರ್ಣ ಅವಧಿಯ ಆಡಳಿತವನ್ನು ನಡೆಸಿದರು.

ಭಾರತ  ಅಭಿವೃದ್ಧಿಗೆ ವಾಜಪೇಯಿಯವರ ಕೊಡುಗೆ…

ಬಹುದೂರದರ್ಶಿತ್ವ ಹೊಂದಿದ ವಾಜಪೇಯಿಯವರು ತಮ್ಮ ಆಡಳಿತದ ಅವಧಿಯಲ್ಲಿ ಹಾಕಿಕೊಂಡ ಬೃಹತ್ ಯೋಜನೆಗಳು ಅನುಷ್ಠಾನಗೊಂಡು ವಿಶ್ವ ದಾಖಲೆಯನ್ನು ನಿರ್ಮಿಸಿದೆ.

1998 ಮೇ ತಿಂಗಳಿನಲ್ಲಿ ರಾಜಸ್ಥಾನ್ – ಪೊಕ್ರಾನ್ ನಲ್ಲಿ ಭೂಮಿಯ ಅಡಿಯಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆ,

ಗೂಢಚಾರಿಕೆ ನಡೆಸುತ್ತಿದ್ದ ಅಮೆರಿಕದ ಸ್ಯಾಟಲೈಟ್ ಕ್ಯಾಮೆರಾಗಳ ಕಣ್ತಪ್ಪಿಸಿ ಪೋಖ್ರಾನ್ ನೆಲದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲು ಭಾರತದ ವಿಜ್ಞಾನಿಗಳು, ಯೋಧರು ಹಗಲಿರುಳು ಶ್ರಮಿಸುತ್ತಿದ್ದರು. ಈ ಮಹಾನ್ ಕಾರ್ಯಕ್ಕೆ ರಾಜಕೀಯ ಇಚ್ಛಾಶಕ್ತಿ ಅತ್ಯಗತ್ಯವಾಗಿತ್ತು. ಅತ್ಯಂತ ರಹಸ್ಯವಾಗಿ ನಡೆದ ಪೋಖ್ರಾನ್ ಕಾರ್ಯಾಚರಣೆಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರೇರಕ ಶಕ್ತಿಯಾಗಿ ನಿಂತರು.

ರಾಜಸ್ಥಾನದ ಮರಳುಗಾಡಿನ ಬೇಸಿಗೆಯ ಅತ್ಯಂತ ಕಠಿಣ ಸಮಯ, 1998ರ ಮೇ 11ರಂದು ಮಧ್ಯಾಹ್ನ 3:45ಕ್ಕೆ ಅಣ್ವಸ್ತ್ರ ಸಾಧನ ಪರೀಕ್ಷೆ ಪೋಖ್ರಾನ್ ಭೂಗರ್ಭದಲ್ಲಿ ಯಶಸ್ವಿಯಾಗಿತ್ತು. 24 ವರ್ಷಗಳ ನಂತರ ಭಾರತ ಪೋಕ್ರಾನ್- 1, ಪೋಕ್ರಾನ್-2 ಪರೀಕ್ಷೆಯಲ್ಲಿ  ಗಳಿಸಿದ ಯಶಸ್ಸು ಕಂಡು ರಶ್ಯಾ, ಫ್ರಾನ್ಸ್, ಯು.ಎಸ್.ಎ., ಕೆನಡಾ, ಜಪಾನ್, ಬ್ರಿಟನ್, ಯೂರೋಪ್ ರಾಷ್ಟ್ರಗಳು ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿತ್ತು.

ಐತಿಹಾಸಿಕ ಲಾಹೋರ್ ಒಪ್ಪಂದದ

ಆಕಸ್ಮಿಕ ಮತ್ತು ಅನಧಿಕೃತ ಅಣ್ವಸ್ತ್ರ ಬಳಕೆ ತಡೆಗೆ ಎರಡೂ ರಾಷ್ಟ್ರಗಳು ಮಾಡಿಕೊಂಡ ಮಹತ್ವದ ಒಪ್ಪಂದ ಇದು. 1999ರ ಫೆಬ್ರುವರಿ 21ರಂದು ಲಾಹೋರ್ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ವಾಜಪೇಯಿ ಮತ್ತು ನವಾಜ್ ಶರೀಫ್ ಈ ಒಪ್ಪಂದಕ್ಕೆ ಸಹಿ ಹಾಕಿದರು. ಜತೆಗೆ, 1998ರಲ್ಲಿ ಉಭಯ ರಾಷ್ಟ್ರಗಳು ಮಾಡಿಕೊಂಡಿದ್ದ ಅಣ್ವಸ್ತ್ರ ಅತಿಕ್ರಮಣ ತಡೆ ಒಪ್ಪಂದವನ್ನು (ಎನ್ಎನ್ಎಎ) ಮುಂದುವರಿಸಿಕೊಂಡು ಹೋಗಲೂ ನಿರ್ಧರಿಸಲಾಯಿತು. ಈ ಒಪ್ಪಂದಕ್ಕೆ ಅಂತರರಾಷ್ಟ್ರೀಯ ಸಮುದಾಯದಿಂದ ಶ್ಲಾಘನೆ ವ್ಯಕ್ತವಾಯಿತು.

ಇತ್ತ ಭಾರತದಲ್ಲಿ ವಾಜಪೇಯಿ ಸರ್ಕಾರದ ಜನಪ್ರಿಯತೆ ಹೆಚ್ಚಾಯಿತು. ರಾಜಕೀಯವಾಗಿ ತಾನೊಬ್ಬ ಗಟ್ಟಿ ನಿಲುವಿನ ವ್ಯಕ್ತಿ ಎಂಬುದನ್ನೂ ಈ ಒಪ್ಪಂದದ ಮೂಲಕ ವಾಜಪೇಯಿ ತೋರಿಸಿಕೊಟ್ಟರು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು.

 ಕಾರ್ಗಿಲ್ ಕದನ

1999ರಲ್ಲಿ ಅನೀರಿಕ್ಷಿತ ಕಾರ್ಗಿಲ್ ಯುದ್ಧ ಘೋಷಣೆಯಾದಾಗ “ಅಪರೇಶನ್ ವಿಜಯ್” ಮೂಲಕ ಶತ್ರು ಪಡೆಗಳನ್ನು ಹಿಮ್ಮೆಟಿಸಿ, ಆಕ್ರಮಿತ ನೆಲವನ್ನು ಸ್ವಾದೀನ ಪಡಿಸಿಕೊಂಡು ಜಯ ಸಾಧಿಸಿದ್ದು. ಭಾರತೀಯರಲ್ಲಿ ಸೇನೆಯ ಬಗ್ಗೆ ಅಭಿಮಾನ, ಗೌರವ ಹಿಮ್ಮಡಿಯಾಗಿ ಮೂಡಿಸಿ, ದೇಶ ಭಕ್ತಿ ಜಾಗೃತಿ ಗೊಳಿಸಿದ್ದು ವಾಜಪೇಯಿಯವರ ಸಾಧನೆಯನ್ನು ಭಾರತೀಯರು ಎಂದೆಂದಿಗೂ ಮರೆಯಲಾರರು.

1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಿಸಿದ ಸಂದರ್ಭದಲ್ಲಿ, ಬೇಡಿಕೆಗೆ ಒಪ್ಪಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ತಾಯಿನಾಡಿಗೆ ಕರೆತಂದ ಸಾಹಸ ಇವರದ್ದು.

2000 ರಲ್ಲಿ ಅಮೇರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದು, 22 ವರ್ಷಗಳ ನಂತರ ಅಮೇರಿಕಾ ಅಧ್ಯಕ್ಷರ ಭೇಟಿಯು ಭಾರತ, ಅಮೇರಿಕಾ, ಸ್ನೇಹ ಭಾಂದವ್ಯ ವೃದ್ಧಿಗೊಂಡಿದು ಭಾರತದ ಗೌರವಕ್ಕೆ ಇನ್ನಷ್ಟು ಹೆಚ್ಚಿನ ಮಾನ್ಯತೆ ದೊರೆಯುವಂತಾಗಿದ್ದು ಇಡಿ ವಿಶ್ವ ಗೌರವ ನೀಡುವಂತಾಯಿತು.

ದೇಶದ ನಾಲ್ಕು ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15ಸಾವಿರ ಕಿ.ಮಿ. ಉದ್ದದ “ಸುವರ್ಣ ಚತುಷ್ಪತ” ಹೆದ್ದಾರಿಯನ್ನು ದಾಖಲೆಯ ಸಮಯದಲ್ಲೇ ಪೂರ್ತಿಗೊಳಿಸಿದ ಸಾಧನೆ ವಾಜಪೇಯಿಯವರದ್ದು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಳ್ಳಿ ಹಳ್ಳಿಗೂ ರಸ್ತೆಯನ್ನು ಒದಗಿಸಿದ್ದು ಇನ್ನೊಂದು ಸಾಧನೆ.

2001ರಲ್ಲಿ “ಸರ್ವ ಶಿಕ್ಷಣ ಅಭಿಯಾನ” ಪ್ರಾರಂಭಿಸಿ ಪ್ರಾಥಮಿಕ, ಪ್ರೌಢಶಾಲಾ ಮಟ್ಟದ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವ ಯೋಜನೆಯನ್ನು ಹಾಕಿ ಕಾರ್ಯರೂಪಕ್ಕೆ ತಂದಿರುವುದು. “ಸರ್ವಶಿಕ್ಷಣ ಅಭಿಯಾನ” ದೇಶದ ಎಲ್ಲಾ ಭಾಗದಲ್ಲಿರುವ ಶಾಲೆಗಳಿಗೆ ಹೋಗಲಾಗದ ಮಕ್ಕಳನ್ನು “ಸರ್ವ ಶಿಕ್ಷಣ ಅಭಿಯಾನ” ಮೂಲಕ ಕಡ್ಡಾಯವಾಗಿ ಶಾಲೆಗೆ ಹೋಗಿ ಕಲಿಯುವ ಮೂಲಕ ಎಲ್ಲರೂ ಸಾಕ್ಷರರನ್ನಾಗಿ ಮಾಡುವ ಯೋಜನೆ ವಾಜಪೇಯಿಯವರು ದೂರದೃಷ್ಠಿ ಹೊಂದಿದ ನಾಯಕರಾಗಿದ್ದಾರೆ.

1951 ರಿಂದ 2005 ರವರೆಗೆ ಹಲವಾರು ಪ್ರತಿಷ್ಠಿತ ಸಮಿತಿಗಳಿಗೆ ನಾಯಕತ್ವದ ಜವಬ್ಧಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಸಾಧನೆ ಇವರದ್ದು.

ಪಕ್ಷಾತೀತ ಗೌರವ

ವಾಜಪೇಯಿ ಅವರನ್ನು ಎಲ್ಲ ಪಕ್ಷಗಳ ನಾಯಕರೂ ಗೌರವಿಸುತ್ತಿದ್ದರು. ‘ಅಜಾತಶತ್ರು’ ಎಂಬುದು ಅವರ ಬಗ್ಗೆ ಪಕ್ಷಾತೀತವಾಗಿ ಚಾಲ್ತಿಯಲ್ಲಿರುವ ಗೌರವ ಸೂಚಕ ಶಬ್ದ. ಇದು ಭಾರತಕ್ಕಷ್ಟೇ ಸೀಮಿತವಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅವರು ಅಜಾತಶತ್ರುವೇ. ದೇಶದ ಗಡಿಯಾಚೆಗೂ ಅವರು ಚಾಚಿದ್ದ ಸ್ನೇಹಹಸ್ತವೇ ಅದಕ್ಕೆ ಸಾಕ್ಷಿ. ಭಾರತದ ಬದ್ಧ ವೈರಿ ಎಂದೇ ಗುರುತಿಸಿಕೊಂಡು ಬಂದಿರುವ ಪಾಕಿಸ್ತಾನದ ಜತೆಗೂ ಬಾಂಧವ್ಯ ವೃದ್ಧಿಗೆ ಸಿಕ್ಕ ಸಣ್ಣ ಅವಕಾಶವನ್ನೂ ವಾಜಪೇಯಿಯವರು ನಿರ್ಲಕ್ಷಿಸುತ್ತಿರಲಿಲ್ಲ. ಇದಕ್ಕೆ ಹಲವು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

ತಮ್ಮ ನೇತೃತ್ವದಲ್ಲಿ ಆರಂಭಿಸಲಾಗಿದ್ದ ದೆಹಲಿ–ಲಾಹೋರ್ ಬಸ್ ಸಂಪರ್ಕವನ್ನು ಕಾರ್ಗಿಲ್ ಕದನ ನಡೆದಾಗಲೂ ಕಡಿದುಕೊಳ್ಳಲು ಅವರು ಮುಂದಾಗಿರಲಿಲ್ಲ. ಹೇಗಾದರೂ ಸರಿ, ನೆರೆ ರಾಷ್ಟ್ರದ ಜತೆ ಸ್ನೇಹದಿಂದ ಇರಬೇಕು ಎಂಬುದೇ ಅವರ ಆಶಯವಾಗಿತ್ತು “ಭಾರತೀಯ ರಾಜಕೀಯಾ ರಂಗದ ಭೀಷ್ಮ ಪಿತಾಮಹ” ಎಂದೇ ಕರೆಯಲ್ಪಡುತಿದ್ದರು.

ಬಿಹಾರಿ ವಾಜಪೇಯಿ 1957ರಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರು ಎಂದಿಗೂ ಸೋಲಲಿಲ್ಲ. ಅವರು ರಾಜಕೀಯದಲ್ಲಿ ಮಾನವ ಮೌಲ್ಯಗಳಿಗೆ ಒಲವು ತೋರಿದ್ದರು. ಸ್ವಾತಂತ್ರ್ಯದ ನಂತರ ದೀರ್ಘಾವಧಿ ಆಳ್ವಿಕೆ ನಡೆಸಿದ್ದ ನೆಹರು-ಗಾಂಧಿ ಕುಟುಂಬದೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸಂಬಂಧ ಸಹಜವಾಗಿತ್ತು.

ನೆಹರೂ ಅವರೊಂದಿಗಿನ ಸಂಬಂಧ

1957 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಬಲರಾಂಪುರದ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಬಂದಾಗ, ಅವರ ಭಾಷಣಗಳು ಆಗಿನ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಪ್ರಭಾವಿಸಿತು. ಪಂಡಿತ್ ನೆಹರೂ ವಿದೇಶಾಂಗ ವ್ಯವಹಾರಗಳಲ್ಲಿ ವಾಜಪೇಯಿ ಅವರ ಅಪಾರ ಹಿಡಿತವನ್ನು ಮನಗಂಡರು. ಆ ಸಮಯದಲ್ಲಿ, ವಾಜಪೇಯಿ ಅವರು ಲೋಕಸಭೆಯಲ್ಲಿ ಕೊನೆಯ ಬೆಂಚುಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಅದಾಗ್ಯೂ, ಪಂಡಿತ್ ನೆಹರೂ ಅವರ ಭಾಷಣಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದರು.

ಹಿರಿಯ ಪತ್ರಕರ್ತ ಕಿಂಗ್ ಶುಕ್ ನಾಗ್, ಈ ಸ್ಟೇಟ್ಸ್ಮನ್ ನಾಯಕರ ಸಂಬಂಧಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಮ್ಮ ಪುಸ್ತಕ ‘ಅಟಲ್ ಬಿಹಾರಿ ವಾಜಪೇಯಿ-ಎ ಮ್ಯಾನ್ ಫಾರ್ ಆಲ್ ಸೀಸನ್’ ನಲ್ಲಿ ಉಲ್ಲೇಖಿಸಿದ್ದಾರೆ. ವಾಸ್ತವವಾಗಿ, ಬ್ರಿಟೀಷ್ ಪ್ರಧಾನಿ ಭಾರತಕ್ಕೆ ಬಂದಾಗ, ಪಂಡಿತ್ ನೆಹರೂ ಅವರು ವಾಜಪೇಯಿ ಅವರನ್ನು ವಿಶೇಷ ಶೈಲಿಯಲ್ಲಿ ಪರಿಚಯಿಸಿದಾಗ, “ಅವರು ವಿಪಕ್ಷದ ಉದಯೋನ್ಮುಖ ಯುವ ನಾಯಕರು. ಯಾವಾಗಲೂ ನನ್ನನ್ನು ಟೀಕಿಸುತ್ತಾರೆ, ಆದರೆ ಇವರನ್ನು ನಾನು ಭವಿಷ್ಯದ ಅನೇಕ ಸಾಧ್ಯತೆಗಳನ್ನು ನೋಡುತ್ತೇನೆ” ಎಂದು ಹೇಳಿದ್ದರು ಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಇಂದಿರಾ ಗಾಂಧಿಯನ್ನು ‘ದುರ್ಗಾ’ ಎಂದು ಕರೆದಿದ್ದ ಅಟಲ್ ಬಿಹಾರಿ ವಾಜಪೇಯಿ

1971 ರಲ್ಲಿ ಇಂಡೋ-ಪಾಕ್ ಯುದ್ಧದ ಹಿನ್ನೆಲೆಯಲ್ಲಿ, ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣದಲ್ಲಿ ಇಂದಿರಾ ಗಾಂಧಿಯನ್ನು ಸಂಸತ್ತಿನಲ್ಲಿ “ದುರ್ಗಾ” ಎಂದು ಕರೆದರು. ಆ ಸಮಯದಲ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರೂ, ಯುದ್ಧದಲ್ಲಿ ಭಾರತದ ಗಮನಾರ್ಹ ಯಶಸ್ಸಿನಿಂದಾಗಿ ಅವರು ಇಂದಿರಾ ಗಾಂಧಿಯವರನ್ನು ದುರ್ಗಾ ಎಂದು ಕರೆದರು. ಆ ಯುದ್ಧದಲ್ಲಿ ಬಾಂಗ್ಲಾದೇಶ ಉದಯಿಸಿತು ಮತ್ತು ಪಾಕಿಸ್ತಾನದ 93,000 ಸೈನಿಕರನ್ನು ಭಾರತೀಯ ಸೇನೆ ಬಂಧಿಸಿತು.ಈ ಬಗ್ಗೆ ಹಿರಿಯ ಪತ್ರಕರ್ತ ವಿಜಯ್ ತ್ರಿವೇದಿ ಅವರ ಪುಸ್ತಕ “ಹರ್ ನಹಿ ಮಾನೂಂಗ- ಏಕ್ ಅಟಲ್ ಜೀವನ್ ಗಾಥಾ” ದಲ್ಲಿ ಈ ವಿಷಯದ ಬಗ್ಗೆ ಉಲ್ಲೇಖಿಸಲಾಗಿದೆ.

ರಾಜೀವ್ ಗಾಂಧಿಗೆ ಅವರ ಕೃತಜ್ಞತೆಯನ್ನು ವ್ಯಕ್ತಪಡಿಸಿದಾಗ…

1987 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಅವರ ಚಿಕಿತ್ಸೆ ಅಮೆರಿಕಾದಲ್ಲಿ ಮಾತ್ರ ಸಾಧ್ಯವಿತ್ತು. ಆದರೆ ಆರ್ಥಿಕ ಪರಿಸ್ಥಿತಿಯಿಂದಾಗ್ಗಿ, ಅವರು ಯುಎಸ್ ತಲುಪಲು ಸಾಧ್ಯವಿರಲಿಲ್ಲ. ಏತನ್ಮಧ್ಯೆ, ಆಗಿನ ಪ್ರಧಾನಿ ರಾಜೀವ್ ಗಾಂಧಿಗೆ ವಾಜಪೇಯಿ ಅವರ ಅನಾರೋಗ್ಯದ ಬಗ್ಗೆ ತಿಳಿಯಿತು. ಆವರು ವಾಜಪೇಯಿ ಅವರನ್ನು ತಮ್ಮ ಕಚೇರಿಗೆ ಕರೆಸಿದರು.

ಅದರ ನಂತರ ಅವರು ನ್ಯೂಯಾರ್ಕ್ನಲ್ಲಿ ಭಾರತ ನಿಯೋಗವನ್ನು ಭೇಟಿ ಮಾಡಿ ಎಂದು ರಾಜೀವ್ ಗಾಂಧಿ ತಿಳಿಸಿದರು. ಹಾಗಾಗಿ ಅಟಲ್ ಜೀ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು. ಈ ಘಟನೆಯನ್ನು  ದಿ ಡೆವಿಲ್ಸ್ ಅಡ್ವೊಕೇಟ್ನಲ್ಲಿ ಪ್ರಕಟವಾದ ಪುಸ್ತಕದಲ್ಲಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರು ಉಲ್ಲೇಖಿಸಿದ್ದಾರೆ. 1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಇದನ್ನು ಸಾರ್ವಜನಿಕವಾಗಿ ಮೊದಲ ಬಾರಿಗೆ ಹೇಳಿದ್ದಾರೆ ಎಂದು ಥಾಪರ್ ಬರೆದಿದ್ದಾರೆ. “ನಾನು ನ್ಯೂಯಾರ್ಕ್ ಗೆ ಹೋಗಿ ಚಿಕಿತ್ಸೆ ಪಡೆದು ಇಂದು ಜೀವಂತವಾಗಿರುವುದಕ್ಕೆ ರಾಜೀವ್ ಗಾಂಧಿ ಕಾರಣ” ಎಂದು ಹೇಳಿದ್ದರು.

ಸಾಹಿತಿಯಾಗಿ ವಾಜಪೇಯಿ

ವಾಜಪೇಯಿಯವರು ರಾಜಕಾರಣಿಯಲ್ಲದೆ ಕವಿಯೂ ಆಗಿದ್ದರು. ಅನೇಕ ಕವಿತೆಗಳನ್ನು ರಚಿಸಿದ್ದಾರೆ.

ಕಾವ್ಯ ಕಲೆಯು ವಾಜಪೇಯಿಯವರಿಗೆ ವಂಶಪಾರಂಪರ್ಯವಾಗಿ ಬಂದಿತ್ತು. ಅವರ ತಂದೆ ಪಂಡಿತ ಕೃಷ್ಣ ಬಿಹಾರಿ ವಾಜಪೇಯಿ ಗ್ವಾಲಿಯರ್ ಸಂಸ್ಥಾನದ ಹೆಸರಾಂತ ಕವಿಗಳಲ್ಲಿ ಒಬ್ಬರಾಗಿದ್ದರು. ಅವರು ಬ್ರಜ ಭಾಷೆ ಹಾಗೂ ಖಡೀಬೋಲಿ (ಇವತ್ತಿನ ಹಿಂದಿ) ಎರಡೂ ಭಾಷೆಗಳಲ್ಲಿ ಬರೆಯುತ್ತಿದ್ದರು. ‘ಈಶ್ವರ’ ಎಂಬ ಅವರ ರಚನೆಯನ್ನು ಸಂಸ್ಥಾನದ ಎಲ್ಲ ಸ್ಕೂಲುಗಳಲ್ಲಿ ಪ್ರಾರ್ಥನೆಯ ರೂಪದಲ್ಲಿ ಪ್ರತಿನಿತ್ಯ ಹಾಡಲಾಗುತ್ತಿತ್ತು.

ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರೇ ಒಂದು ಸಂದರ್ಶನದಲ್ಲಿ  ತಮ್ಮ ತಂದೆಯ ಬಗ್ಗೆ ಪ್ರಸ್ತಾಪಿಸುತ್ತ ಹೀಗೆ ಹೇಳಿದ್ದರು, ‘ಆಗೆಲ್ಲ ಕವಿ ಸಮ್ಮೇಳನಗಳ ಭರಾಟೆಯಿತ್ತು.

ಆ ಸಮ್ಮೇಳನಗಳಲ್ಲಿ ಹಾಸ್ಯ–ವಿನೋದಗಳದೇ ಪ್ರಾಬಲ್ಯ. ಒಗಟು ಬಿಡಿಸುವವರಿಗೆ ಅಂತ್ಯದಲ್ಲಿ ಪುರಸ್ಕಾರವಿರುತ್ತಿತ್ತು. ಒಮ್ಮೆ ಕವಿಗಳಿಗೆ ತಿಹರೀ ಬೆಡಗು ಬಿಡಿಸುವ ಸವಾಲು ಎದುರಾಯಿತು.

ಆಗ ನಮ್ಮ ತಂದೆ ಕೃಷ್ಣ ಬಿಹಾರಿಯವರು ಒಗಟಿನ ರೂಪದ ಕವಿತೆ ರಚಿಸಿ ಹಾಡಿದರು.ವಾಜಪೇಯಿಯವರ ರಚನೆಗಳಲ್ಲಿ ಹರಿವಂಶರಾಯ್  ಬಚ್ಚನ್, ಶಿವಮಂಗಲ್ ಸುಮನ್, ಸೂರ್ಯಕಾಂತ ತ್ರಿಪಾಠಿ ನಿರಾಲ ಮತ್ತು ಫೈಜ್ ಅಹಮದ್ ಫೈಜ್ ಅವರ ಪ್ರಭಾವ ಕಾಣಬಹುದು. ಶಿವಮಂಗಲ್ ಸುಮನ್ ಅವರನ್ನು ವಾಜಪೇಯಿ ತಮ್ಮ ಗುರುಗಳೆಂದು ಭಾವಿಸುತ್ತಾರೆ.

ತಮ್ಮ ಪ್ರತಿ ಜನ್ಮದಿನದಲ್ಲೂ ಅವರು ಕವಿತೆಯೊಂದನ್ನು ಬರೆದು ಜೀವನ ದರ್ಶನವನ್ನು ಮಾಡುವ ಮತ್ತು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದ್ದರಿಂದ ಪ್ರತಿ ವರ್ಷ ಅವರ ಕವಿತೆಯ ರೂಪ, ಮನೋಭಾವ, ಮತ್ತು ದರ್ಶನ ಬದಲಾಗುತ್ತಿತ್ತು.

ಇವರ ಇಪ್ಪತೊಂದು ಕವಿತೆಗಳ ಸಂಕಲನ – ಅಂಗ್ಲ ಭಾಷೆಗೆ ಅನುವಾದ ಗೊಂಡಿದೆ. ಸಾಹಿತಿಯಾಗಿಯೂ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ದೇಶ ವಿದೇಶಗಳಲ್ಲಿ ಹಲವು ಬಾರಿ ಸನ್ಮಾನ ಗೌರವಗಳನ್ನು ಪಡೆದು ಪ್ರಶಸ್ತಿಗಳ ಸರಮಾಲೆಯನ್ನು ಧರಿಸುವ ವಾಜಪೇಯಿಯವರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಗೌರವ 1992ರಲ್ಲಿ “ಪದ್ಮ ವಿಭೂಷಣ” 1994 ರಲ್ಲಿ “ಲೋಕಮಾನ್ಯ ತಿಲಕ್ ಪ್ರಶಸ್ತಿ” , “ಉತ್ತಮ ರಾಜಕೀಯ ಪಟು” , “ಪಂಡಿತ್ ಗೋವಿಂದ್ ವಲ್ಲಭ ಪಂತ್ ಪ್ರಶಸ್ತಿ” ಭಾರತ ಪರಮೋಚ್ಚ ಗೌರವ 2015 ರಲ್ಲಿ “ಭಾರತ ರತ್ನ ಪ್ರಶಸ್ತಿ” ಮತ್ತು “ಬಾಂಗ್ಲ ವಿಮೋಚನ ಪ್ರಶಸ್ತಿ” ಗಳನ್ನು ನೀಡಿ ಗೌರವಿಸಲಾಗಿದೆ.

ಕೊನೆಯ ದಿನಗಳು

90ರ ಇಳಿವಯಸ್ಸಿನ ವಾಜಪೇಯಿ ದೆಹಲಿಯ ಕೃಷ್ಣಮೆನನ್ ಮಾರ್ಗದ ಆರನೆಯ ಬಂಗಲೆಯಲ್ಲಿ ಎಸ್.ಪಿ.ಜಿ. ಪಹರೆಯ ಏಕಾಂಗಿತನದಲ್ಲಿ ತೀವ್ರ ಅಸ್ವಸ್ಥರಾಗಿ ಮಲಗಿ ವರ್ಷಗಳೇ ಉರುಳಿದ್ದವು. ನೆನಪು ಅವರಿಗೆ ಕೈ ಕೊಟ್ಟಿತ್ತು. ಬಂದವರನ್ನು ಗುರುತು ಹಿಡಿಯುವ ಪರಿಸ್ಥಿತಿ ಇರಲಿಲ್ಲ. ಭಾರತರತ್ನ ಪ್ರಶಸ್ತಿ ದೊರೆತಾಗ ಸಂಭ್ರಮಿಸುವ ಸ್ಥಿತಿಯಲ್ಲೂ ಅವರು ಇರಲಿಲ್ಲ.

2018ರ ಆಗಸ್ಟ್ 16ರಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಆಸ್ಪತ್ರೆಯಲ್ಲಿ ಅಂದು ಸಂಜೆ 5:05ಕ್ಕೆ ಕೊನೆಯುಸಿರೆಳೆದರು.

 ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ, ಅಪ್ರತಿಮ ವಾಗ್ಮಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವದ ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿ ಭಾರತೀಯ ರಾಜಕೀಯ ಇತಿಹಾಸದ ಪುಟಗಳಲ್ಲಿ ಅಜರಾಮರಾಗಿದ್ದಾರೆ.