ಬೊಮ್ಮಾಯಿಯವರ ಚೊಚ್ಚಲ ಬಜೆಟ್ ತಂತಿಯ ಮೇಲಿನ ನಡಿಗೆ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com

ಬಸವರಾಜ ಬೊಮ್ಮಾಯಿವರು   ಮುಖ್ಯಮಂತ್ರಿಯಾದ ಬಳಿಕ  ಜೊತೆಗೆ ಹಣಕಾಸು ಖಾತೆಯನ್ನೂ ಹೊಂದಿರುವ ಅವರು  2022-23ರ ಆಯವ್ಯಯ ಮಂಡಿಸಲಿದ್ದಾರೆ.

ಮೊದಲ ಬಾರಿಗೆ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದು, ಮಾ. 4ರಂದು ಆಯವ್ಯಯ ಮಂಡನೆ ಮಾಡಲಿದ್ದಾರೆ. 

ಮುಂದಿನ ವರ್ಷ ನಡೆಯಲಿರುವ 2023ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆಯ ದೃಷ್ಟಿಯಲ್ಲಿ ಇಟ್ಟುಕೊಂಡು ಜನಪ್ರಿಯ ಬಜೆಟ್ ಮಂಡಿಸುವವರೋ, ಇಲ್ಲ  ಇತ್ತೀಚಿನ ಕೇಂದ್ರ ಸರ್ಕಾರ ಮಂಡಿಸಿದ ಹಾಗೆ ಜನಪರ ಬಜೆಟ್ ಮಂಡಿಸುವರೋ ಎಂಬ  ರಾಜ್ಯ ಬಜೆಟ್​ ಮೇಲೆ ಜನರು ಕುತೂಹಲ ಹೊಂದಿದ್ದಾರೆ.

ನೀರಾವರಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ  ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಅನುದಾನ ಸಿಗಲಿದೆ, ಶಾಸಕರ ಕ್ಷೇತ್ರವಾರು ಅನುದಾನ, ಹೊಸ ಯೋಜನೆ, ಬೊಮ್ಮಾಯಿವರು ಎಷ್ಟು ಅನುದಾನ ನೀಡಲಿದ್ದಾರೆ ಎಂಬ ನಿರೀಕ್ಷೆ ಎಲ್ಲರಿಗೂ ಇದೆ.

ಹಣಕಾಸು ಇಲಾಖೆ ಮೂಲಗಳ ಪ್ರಕಾರ ರಾಜ್ಯ ಸರಕಾರದ ಖಜಾನೆ ಭರ್ತಿಯಿಲ್ಲ. ಕಳೆದ ವರ್ಷ ಮೂವತ್ತು ಸಾವಿರ ಕೋಟಿ ರೂ. ಸಾಲವನ್ನು ಕೇಂದ್ರ ಸರಕಾರದಿಂದ ಪಡೆಯಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ರಾಜಸ್ವ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಕಳೆದ ವರ್ಷವೇ ರಾಜಸ್ವ ಕೊರತೆ ನೀಗಿಸುವುದಕ್ಕೆ ಮಾಡಿದ ಪ್ರಯತ್ನ ಯಶಸ್ವಿಯಾಗಿಲ್ಲ.

” ಕೋವಿಡ್ ನಿಂದ ಆರ್ಥಿಕ ಹಿಂಜರಿತ ಹೆಚ್ಚಾಗಿದೆ. ಇತಿಮಿತಿಯಲ್ಲಿ, ಆರ್ಥಿಕ ಚೌಕಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಡಿಕೆ ಈಡೇರಿಸಲು ಪ್ರಯತ್ನ ಮಾಡುತ್ತೇನೆ ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಹೀಗಾಗಿ ಬೊಮ್ಮಾಯಿ ಹಗ್ಗದ ಮೇಲೆ ನಡಿಗೆಯನ್ನು ಹೇಗೆ ನಿಭಾಯಿಸುವರು ಎಂಬ ಪ್ರಶ್ನೆ.?

ಕಳೆದ ವರ್ಷ  ಮಾಜಿ ಮುಖ್ಯಮಂತ್ರಿಗಳು ಹಣಕಾಸು ಸಚಿವರು ಆದ ಬಿ.ಎಸ್. ಯಡಿಯೂರಪ್ಪನವರು ಕೊರೋನಾ ಸಂಕಷ್ಟದ ನಡುವೆಯೂ  ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಹಿಳೆಯರು ಸೇರಿದಂತೆ ಹಲವು ವಲಯಗಳಿಗೆ ಆದ್ಯತೆ ನೀಡುವ 2,43,734 ಕೋಟಿ ರೂಪಾಯಿ ಮೊತ್ತದ 2.43 ಲಕ್ಷ ಕೋಟಿ ರೂ. ರಾಜ್ಯ  ಬಜೆಟ್ ನ್ನು ಮಂಡಿಸಿದ್ದರು.

ಅವರು ಮಂಡಿಸಿದ 8ನೇ ಬಜೆಟ್ ಆಗಿತ್ತು. ಇದರಲ್ಲಿ 1 ಲಕ್ಷ 22 ಸಾವಿರದ 271 ಕೋಟಿ ರೂಪಾಯಿ ರಾಜಸ್ವ ಜಮೆ ಹಾಗೂ 71 ಸಾವಿರದ 332 ಕೋಟಿ ರೂಪಾಯಿ ಸಾಲ ಒಳಗೊಂಡಂತೆ 71 ಸಾವಿರದ 463 ಕೋಟಿ ರೂಪಾಯಿಗಳ ಬಂಡವಾಳ ಜಮೆ  ಸೇರಿತ್ತು.

ಶಿಕ್ಷಣ ವಲಯ: ರೂ.29,688 ಕೋಟಿ ಅನುದಾನ

ನಗರಾಭಿವೃದ್ಧಿ ಕ್ಷೇತ್ರ: ರೂ.27,386 ಕೋಟಿ ಅನುದಾನ

ಜಲ ಸಂಪನ್ಮೂಲ ಕ್ಷೇತ್ರ: ರೂ.21,181 ಕೋಟಿ ಹಣ

ಇಂಧನ ಇಲಾಖೆ: ರೂ.16,515 ಕೋಟಿ

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್: ರೂ.16,036 ಕೋಟಿ

ಕಂದಾಯ ಇಲಾಖೆ ವ್ಯಾಪ್ತಿ: ರೂ.12,384 ಕೋಟಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ರೂ.11,908 ಕೋಟಿ

ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರ: ರೂ.10,330 ಕೋಟಿ

ಲೋಕೋಪಯೋಗಿ ಇಲಾಖೆ: ರೂ.10,256 ಕೋಟಿ

ಸಮಾಜ ಕಲ್ಯಾಣ ಇಲಾಖೆ: ರೂ.8,864 ಕೋಟಿ

ಕೃಷಿ ಮತ್ತು ತೋಟಗಾರಿಕೆ ಇಲಾಖೆ: ರೂ.7,297 ಕೋಟಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ: ರೂ.4,531 ಕೋಟಿ

ವಸತಿ ಇಲಾಖೆ ಯೋಜನೆ: ರೂ.2,990 ಕೋಟಿ

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: ರೂ.2,374 ಕೋಟಿ

ಇತರೆ ಇಲಾಖೆಗಳ ಯೋಜನೆ: ರೂ.94,416 ಕೋಟಿ ಹಣವನ್ನು ನೀಡಿದ್ದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಮಾಹಾಮಾರಿ ರಾಜ್ಯವನ್ನು ಇನ್ನಿಲ್ಲದಂತೆ ಕಾಡಿದ್ದು, ಬಡ ಹಾಗೂ ಮಧ್ಯಮ ವರ್ಗಗಳು ಸಂಕಷ್ಟದಲ್ಲಿವೆ. ರಾಜ್ಯ ಬಜೆಟ್ನಲ್ಲಿ ಏನಾದರೂ ಸಹಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಒಂದು ಕಡೆ ಕಾಡಿದ ಕೊರೊನಾ ಮಹಾಮಾರಿಯಿಂದ ಆರ್ಥಿಕ ವ್ಯವಸ್ಥೆ ಸುಗಮವಾಗಿಲ್ಲ. ಜತೆಗೆ 2023ರ ಚುನಾವಣೆಯೂ ಇರುವುದರಿಂದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಪ್ರದೇಶಗಳು  ಮತ್ತು  ಎಲ್ಲಾ ಸಮುದಾಯದ ಕಡೆಗೂ ಗಮನಹರಿಸಬೇಕಾಗಿರುವುದು ಅನಿವಾರ್ಯತೆ ಒಂದು ವೇಳೆ ಕೇಂದ್ರದ ಬಜೆಟ್ ನಂತೆ ಚುನಾವಣೆಯನ್ನು ಬದಿಗಿಟ್ಟು ಬಜೆಟ್ ಮಂಡಿಸಿದರೂ ಮಂಡಿಸಬಹುದು.

ಆದರೆ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಖಜಾನೆಯನ್ನು ನೋಡಿಕೊಂಡು ಬಜೆಟ್ ಮಂಡನೆ ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಬಹುದೊಡ್ಡ ಸವಾಲು ಎಂದರೆ ತಪ್ಪಾಗಲಾರದು.

ಚುನಾವಣೆಗಳಿರುವುದರಿಂದ ಪ್ರತಿಪಕ್ಷಗಳು ಯಾವುದೇ ರೀತಿಯ ಬಜೆಟ್ ಮಂಡಿಸಿದರೂ ಅದನ್ನು ವಿರೋಧಿಸುವುದಂತು ಖಚಿತ.

ಕೃಷಿಗೆ ಹೆಚ್ಚು ಒತ್ತು ನೀಡಲಿದೆಯೇ ರಾಜ್ಯ ಬಜೆಟ್: ಈ ಬಾರಿಯ ಬಜೆಟ್​ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಮಾರುಕಟ್ಟೆ, ಬೆಳೆಗೆ ನಿರ್ದಿಷ್ಟ ಬೆಲೆ, ಕನಿಷ್ಟ ಬೆಂಬಲ ಬೆಲೆ ಹೆಚ್ಚಳ, ಮಣ್ಣಿನ ಫಲವತ್ತತೆ ಹೆಚ್ಚಿಸಲು, ರಾಸಾಯನಿಕ ಗೊಬ್ಬರ, ಹಸಿರೆಲೆ ಗೊಬ್ಬರ, ಬಿತ್ತನೆ ಬೀಜ ಸಮರ್ಪಕ ವಿತರಣೆ, ಪ್ರತಿ ಗ್ರಾಮಕ್ಕೂ ಸಬ್ಸಿಡಿ ದರದಲ್ಲಿ ಒಕ್ಕಣೆ ಯಂತ್ರ ಹಾಗೂ ಎರೆಹುಳ ಗೊಬ್ಬರ ತಯಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ನಲ್ಲಿ ಅನುದಾನ ಬಿಡುಗಡೆ ಮಾಡಲು ರೈತರು ಆಗ್ರಹಿಸಿದ್ದಾರೆ.

ಇನ್ನು, ಕಾರ್ಮಿಕರು, ಉದ್ಯಮಿಗಳು, ಉದ್ಯೋಗಿಗಳು, ಖಾಸಗಿ ವಲಯಗಳನ್ನು ಸಂತೃಪ್ತಿಗೊಳಿಸುವ ಹೊಣೆಗಾರಿಕೆ.

ಬೆಂಗಳೂರಿನ ಸಂಚಾರ ದಟ್ಟಣೆಗೆ ಪರ್ಯಾಯ ಮಾರ್ಗಗಳು,ಮೇಲ್ಸೇತುವೆ ನಿರ್ಮಾಣ. 

ಹೊಸ ಕೈಗಾರಿಕೆಗಳ ಸ್ಥಾಪನೆ, ಎಲೆಕ್ಟ್ರಿಕ್  ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಹಾಗೂ ನಗರಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ನಿರೀಕ್ಷೆ, ಅದೇ ರೀತಿ  ಈ ಇದೇ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ NEP ಯನ್ನು  ಜಾರಿಗೆ ಗೊಳಿಸಲಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು. ಶಾಲೆಗಳ ಮೂಲಭೂತ ಸೌಕರ್ಯಗಳಿಗೆ, NEP ಯನ್ನು ಅಳವಡಿಸಲು ಅನುದಾನ ಎಷ್ಟು ನೀಡಬಹುದೆಂಬ ಕುತೂಹಲವಿದೆ.

ವೈದ್ಯಕೀಯ ಮಹಾವಿದ್ಯಾಲಯಗಳ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ, ತಾಲ್ಲೂಕು ಜಿಲ್ಲಾ ಆಸ್ಪತ್ರೆಗಳ ಅಭಿವೃದ್ಧಿ ಮತ್ತು ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. 

ಪ್ರವಾಸಿಗರನ್ನು ನಂಬಿ ಜೀವನ ಮಾಡುತ್ತಿದ್ದ ಹಲವರು ಬೀದಿಗೆ ಬಂದಿದ್ದಾರೆ. ಅವರು ಮತ್ತೆ ಬದುಕು ಕಟ್ಟಿಕೊಳ್ಳಬೇಕಾದರೆ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಾಗಿದೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರನ್ನು ಸೆಳೆಯುವುದು ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶ, ಹಲವು ಕ್ಷೇತ್ರಗಳಿಂದ ರಾಜ್ಯ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾವ ಕ್ಷೇತ್ರಗಳ ಕೈ ಹಿಡಿಯಲಿದ್ದಾರೆ ಮತ್ತು ಯಾವ ಜಿಲ್ಲೆಗಳಿಗೆ ಎಷ್ಟು ಅನುದಾನ ನೀಡಲಿದ್ದಾರೆ ಎಂಬುದಕ್ಕೆ ಮಾ. 4ರ ಬಜೆಟ್ ದಿನವೇ ಉತ್ತರ ಸಿಗಲಿದೆ.

ಹಿಜಾಬ್ ಸಂಘರ್ಷ, ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಹೋರಾಟ, ಶಿವಮೊಗ್ಗದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ,ರಷ್ಯಾ-ಯುಕ್ರೇನ್ ಯುದ್ಧ,  ಹೀಗೆ ನೂರೆಂಟು ಸಮಸ್ಯೆಗಳು ರಾಜ್ಯವನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಕಳೆದ ಬಜೆಟ್ ಗಿಂತ ಈ ಬಾರಿಯ ಬಜೆಟ್ ವಿಭಿನ್ನ ಮತ್ತು ಸವಾಲಿನದ್ದಾಗಿರುವುದಂತು ನಿಜ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವ ರೀತಿ ಬಜೆಟ್ ಮಂಡಿಸಲಿದ್ದಾರೆ ರಾಜ್ಯದ ಜನರಲ್ಲಿ ಕಾತುರತೆಯಿದೆ.